ಬಾಗಲಕೋಟೆ: ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಎಚ್.ಡಿ.ಕುಮಾರಸ್ವಾಮಿ ಮುಸ್ಲಿಮರ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿಯೇ ಆರ್.ಎಸ್.ಎಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಹಿಂದೆ ಜವಾಹರಲಾಲ್ ನೆಹರು, ಇಂದಿರಾಗಾಂಧಿ ನಮ್ಮ ವಿರುದ್ಧ ಮಾತನಾಡಿದಾಗಲೇ ಹಚ್ಚಾ! ಅಂತ ಹೋದವರು ನಾವು. ಅವರೇ ಲೆಕ್ಕಕ್ಕಿಲ್ಲ, ಇವರು ಯಾರು ನಮಗೆ ಲೆಕ್ಕಕ್ಕೆ. ಆರ್.ಎಸ್.ಎಸ್ ಇಲ್ಲದಿದ್ದರೆ ದೇಶ ಇಷ್ಟೊತ್ತಿಗೆ ಪಾಕಿಸ್ತಾನವಾಗಿ ಬದಲಾಗುತ್ತಿತ್ತು’ ಎಂದರು.
ಐಎಎಸ್, ಕೆಎಎಸ್ ಅಧಿಕಾರಿಗಳ ಮೂಲಕ ಆರ್.ಎಸ್.ಎಸ್ ಆಡಳಿತ ಮಾಡುತ್ತೆ ಅನ್ನೋದು ಮೆದುಳಿನ ಮೇಲೆ ಪೊರೆ ಬಂದವರ ಹೇಳಿಕೆ. ದೇಶದ ರಾಷ್ಟ್ರಪತಿ, ಪ್ರಧಾನಿ, ರಾಜ್ಯಪಾಲರು ಮತ್ತು ನಾವೆಲ್ಲರೂ ಸಹ ಆರ್.ಎಸ್.ಎಸ್ ಸಂಘಟನೆ ನೇರವಾಗಿ ಏನು ಮಾಡೊಲ್ಲ. ಅದರ ಸ್ವಯಂ ಸೇವಕರು ಎಲ್ಲಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ ಎಂದು ಹೇಳಿದರು.
ಮುಸ್ಲಿಂ, ಕ್ರಿಶ್ಚಿಯನ್ ರಾಷ್ಟ್ರಗಳೆಲ್ಲಾ ಇಂದು ಪ್ರಧಾನಿ ನರೇಂದ್ರ ಮೋದಿ ಜೊತೆಗಿದ್ದಾರೆ. ಪಾಕಿಸ್ತಾನ ಒಂದೇ ಆಗಿದೆ. ಇದು ಆರ್.ಎಸ್.ಎಸ್‌ನ ಪರಿಣಾಮ. ಆರ್.ಎಸ್.ಎಸ್ ಬೈದರೆ ಮುಸ್ಲಿಮರು ಓಟು ಕೊಟ್ಟು ಬಿಡ್ತಾರೆ. ಅನ್ನೋ ಭ್ರಮೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಇವೆ. ಮುಂಚೆ ಬಿಜೆಪಿಯನ್ನ ಬ್ರಾಹ್ಮಣರ ಪಾಟಿ೯ ಅಂತಿದ್ರು. ಆದ್ರೆ ಇಂದು ಹಿಂದುಳಿದವರು, ದಲಿತರು ಬಿಜೆಪಿಗೆ ಬಂದಾಯ್ತು ಎಂದರು.
ಇಡೀ ದೇಶದಲ್ಲಿ ಕಾಂಗ್ರೆಸ್ ಎಲ್ಲಿದೆ ಅಂತ ಭೂತಗನ್ನಡಿ ಹಿಡಿದು ನೋಡೋ ಸ್ಥಿತಿಯಲ್ಲಿದೆ. ರಾಷ್ಟ್ರಭಕ್ತ ಮುಸಲ್ಮಾನರು ನಮ್ಮ ಜೊತೆಗಿದ್ದಾರೆ. ಕಾಂಗ್ರೆಸ್ ಜೊತೆ ಇರೋ ಉಳಿದ ಮುಸ್ಲಿಮರು ಬತಾ೯ರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.