ADVERTISEMENT

ಬಾಗಲಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಭರವಸೆಯ ಭಾರ

ನವನಗರ ಹಸ್ತಾಂತರ, ವೈದ್ಯಕೀಯ ಕಾಲೇಜು ಆರಂಭ...

ಬಸವರಾಜ ಹವಾಲ್ದಾರ
Published 17 ನವೆಂಬರ್ 2024, 4:25 IST
Last Updated 17 ನವೆಂಬರ್ 2024, 4:25 IST
ಬಾಗಲಕೋಟೆಯ ನವನಗರದಲ್ಲಿ ನಡೆಯಲಿರುವ ಸಹಕಾರ ಸಪ್ತಾಹ ಕಾರ್ಯಕ್ರಮಕ್ಕೆ ಬೃಹತ್ ವೇದಿಕೆ ನಿರ್ಮಾಣ ಮಾಡಿರುವುದು. ಪೊಲೀಸ್ ಸಿಬ್ಬಂದಿ ಬಂದೋಬಸ್ತ್‌ಗೆ ಸಜ್ಜಾಗಿರುವುದು
ಬಾಗಲಕೋಟೆಯ ನವನಗರದಲ್ಲಿ ನಡೆಯಲಿರುವ ಸಹಕಾರ ಸಪ್ತಾಹ ಕಾರ್ಯಕ್ರಮಕ್ಕೆ ಬೃಹತ್ ವೇದಿಕೆ ನಿರ್ಮಾಣ ಮಾಡಿರುವುದು. ಪೊಲೀಸ್ ಸಿಬ್ಬಂದಿ ಬಂದೋಬಸ್ತ್‌ಗೆ ಸಜ್ಜಾಗಿರುವುದು   

ಬಾಗಲಕೋಟೆ: ಎರಡನೇ ಅವಧಿಗೆ ಮುಖ್ಯಮಂತ್ರಿಯಾದ ನಂತರ ಸಿದ್ದರಾಮಯ್ಯ ಸರ್ಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮೊದಲ ಬಾರಿಗೆ ಬಾಗಲಕೋಟೆಗೆ ಬರುತ್ತಿದ್ದಾರೆ. ನವನಗರ ಹಸ್ತಾಂತರ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ನೀಡಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ ಜಿಲ್ಲೆಯ ಜನತೆ.

ನವನಗರ ಹಸ್ತಾಂತರ, ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಿರುವ ಗ್ರಾಮಗಳ ಅಭಿವೃದ್ಧಿ, ನಗರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭ, ಬಾದಾಮಿ ವಿಧಾನಸಭಾ ಕ್ಷೇತ್ರ ದತ್ತು, ಪ್ರವಾಸೋದ್ಯಮಕ್ಕೆ ಕಾಯಕಲ್ಪ, ನೇಕಾರರಿಗೆ ಸ್ಪಂದನೆ ಸೇರಿದಂತೆ ಹಲವು ನಿರೀಕ್ಷೆಗಳು ಗರಿಗೆದರಿವೆ.

ನವನಗರ ಹಸ್ತಾಂತರ: ನವನಗರ ಯುನಿಟ್‌ 1 ಹಸ್ತಾಂತರ ವಿಷಯ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಈಗ ಯುನಿಟ್ 2 ಸಹ ಸಿದ್ಧವಾಗಿದೆ. ನಿರ್ವಹಣೆ ವೆಚ್ಚ ಭರಿಸಲು ಸಾಧ್ಯವಾಗದೆ ಬಿಟಿಡಿಎ ಸಂಕಷ್ಟ ಎದುರಿಸುತ್ತಿದೆ. ಆಗಾಗ ತ್ಯಾಜ್ಯ ನಿರ್ವಹಣೆಯ ಬಿಕ್ಕಟ್ಟು ಎದುರಾಗಿ ಜನರು ಸಮಸ್ಯೆಗೆ ಈಡಾಗುತ್ತಿದ್ದಾರೆ.

ADVERTISEMENT

ನಿರ್ವಹಣೆಗೆ ಇದ್ದ ಕಾರ್ಪಸ್ ಫಂಡ್ ವಾಪಸ್ ಪಡೆಯಲಾಗಿದೆ. ಹಸ್ತಾಂತರ ಮಾಡಿಕೊಳ್ಳಬೇಕು ಎಂದರೆ ಅನುದಾನ ಹಾಗೂ ಸಿಬ್ಬಂದಿ ನೀಡಬೇಕು ಎಂಬುದು ನಗರಸಭೆಯ ಬೇಡಿಕೆ. ಅವುಗಳನ್ನು ಈಡೇರಿಸಿ, ಜನರ ಸಮಸ್ಯೆಗೆ ಪರಿಹಾರ ಒದಗಿಸಬೇಕಿದೆ.

ಸಂತ್ರಸ್ತರ ಗ್ರಾಮಗಳ ಅಭಿವೃದ್ಧಿ: ಮುಳುಗಡೆ ಹೊಂದಿದ ಗ್ರಾಮಗಳು ಮೂಲಸೌಲಭ್ಯಗಳ ಕೊರತೆ ಎದುರಿಸುತ್ತಿವೆ. ದಶಕಗಳ ಹಿಂದೆ ಡಾಂಬರು ಕಂಡಿದ್ದ ರಸ್ತೆಗಳು ಮತ್ತೆ ಡಾಂಬರ್‌ ಕಂಡಿಲ್ಲ. ಪೂರ್ಣ ಪ್ರಮಾಣದಲ್ಲಿ ಸ್ಥಳಾಂತರ ಕಾರ್ಯವಾಗಿಲ್ಲ. ಕೆಲವು ಗ್ರಾಮಗಳ ಹಸ್ತಾಂತರ ಕಿತ್ತಾಟ ಇನ್ನೂ ಮುಂದುವರೆದಿದೆ. ಇವುಗಳನ್ನು ಪರಿಹರಿಸಬೇಕಿದೆ.

ಸರ್ಕಾರಿ ವೈದ್ಯಕೀಯ ಕಾಲೇಜು ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭವಾಗಬೇಕಾದರೆ ಈಗಿನಿಂದಲೇ ಚಟುವಟಿಕೆಗಳಿಗೆ ಚಾಲನೆ ಸಿಗಬೇಕಿದೆ. ಕಟ್ಟಡ ಗುರುತಿಸುವುದು, ಮೂಲಸೌಲಭ್ಯ ಕಲ್ಪಿಸುವ ಕಾರ್ಯ ಆಗಬೇಕು. 2014–15ನೇ ಸಾಲಿನ ಬಜೆಟ್‌ನಲ್ಲಿ ಬಾಗಲಕೋಟೆಯ ಜೊತೆಗೆ ಗದಗ, ಹಾವೇರಿ, ರಾಯಚೂರು, ಕೊ‍ಪ್ಪಳ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಆರಂಭದ ಘೋಷಣೆ ಮಾಡಲಾಗಿತ್ತು. ಆ ಜಿಲ್ಲೆಗಳಲ್ಲಿ ಕಾಲೇಜು ಆರಂಭಗೊಂಡಿವೆ.

ರಾಜಕೀಯ ಸಂಕಷ್ಟದಲ್ಲಿದ್ದಾಗ ಸಿದ್ದರಾಮಯ್ಯ ಅವರನ್ನು ಬಾದಾಮಿ ವಿಧಾನಸಭಾ ಕ್ಷೇತ್ರದಿಂದ ಗೆಲ್ಲಿಸುವ ಮೂಲಕ ಬಾದಾಮಿ ಜನರು ರಾಜಕೀಯ ಪುನರ್‌ಜನ್ಮ ನೀಡಿದ್ದರು. ಚುನಾವಣೆ ಸಮಯದಲ್ಲಿ ಗೆದ್ದರೆ, ಬಾದಾಮಿ ಕ್ಷೇತ್ರ ದತ್ತು ತೆಗೆದುಕೊಳ್ಳುವುದಾಗಿ ಘೋಷಣೆ ಮಾಡಿದ್ದರು. ಆದರೆ, ಮುಖ್ಯಮಂತ್ರಿಯಾದ ನಂತರ ಒಂದು ಬಾರಿಯೂ ಭೇಟಿ ನೀಡಿಲ್ಲ. ದತ್ತು ಘೋಷಣೆ ಮಾಡಿ, ಅನುದಾನ ನೀಡಬೇಕಿದೆ.

‘ರಾಜಕೀಯ ಪುನರ್ ಜನ್ಮ ನೀಡಿದ ಜಿಲ್ಲೆಯ ಜನರ ಋಣ ತೀರಿಸುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಬೇಕು’ ಎನ್ನುತ್ತಾರೆ ನವನಗರ ನಿವಾಸಿ ಅವಿನಾಶ ಪಾಟೀಲ.

ಸಹಕಾರ ಸಪ್ತಾಹ: ಸಿ.ಎಂ ಭಾಗಿ

ಬಾಗಲಕೋಟೆ: ರಾಜ್ಯ ಸಹಕಾರ ಮಹಾಮಂಡಳ ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿರುವ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ. ಬೆಳಿಗ್ಗೆ 10ಕ್ಕೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಪಕ್ಕದ ಮೈದಾನದಲ್ಲಿ ಸಮಾರಂಭ ನಡೆಯಲಿದ್ದು ರಾಜ್ಯದ 72 ಜನರಿಗೆ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಜವಳಿ ಸಚಿವ ಶಿವಾನಂದ ಪಾಟೀಲ ಪಾಲ್ಗೊಳ್ಳಲಿದ್ದಾರೆ.

ರೈತರೊಂದಿಗೆ ಮಾತುಕತೆ

ಬಾಗಲಕೋಟೆ: ‘ಕಬ್ಬಿನ ಬೆಲೆ ನಿಗದಿಗೆ ಸಂಬಂಧಿಸಿದರೆ ರಾಜ್ಯ ರೈತ ಸಂಘದ ಮುಖಂಡರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತುಕತೆ ನಡೆಸಲಿದ್ದಾರೆ ಎಂದು ಸಚಿವ ಆರ್.ಬಿ. ತಿಮ್ಮಾಪುರ ತಿಳಿಸಿದ್ದಾರೆ’ ಎಂದು ರೈತ ಸಂಘದ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ತಿಳಿಸಿದರು. ‘ಗದ್ದನಕೇರಿ ಕ್ರಾಸ್‌ನಲ್ಲಿ ಪ್ರತಿಭಟನೆ ಮಾಡುವುದಾಗಿ ಹೇಳಿದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ. ತಿಮ್ಮಾಪುರ ಜಿಲ್ಲಾ ಪೊಲೀಸ್ ವರಿಷ್ಠ ಅಮರನಾಥ ರೆಡ್ಡಿ ಮಾತುಕತೆ ನಡೆಸಿದ್ದಾರೆ. ಮುಖ್ಯಮಂತ್ರಿ ಭೇಟಿಗೆ ಅವಕಾಶ ಮಾಡಿಕೊಡುವುದಾಗಿ ಹೇಳಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.