ADVERTISEMENT

ಸಿದ್ದರಾಮಯ್ಯ ಭಂಡ, ಡಬಲ್ ಸ್ಟ್ಯಾಂಡರ್ಡ್ ವ್ಯಕ್ತಿ: ಸಚಿವ ಶ್ರೀರಾಮುಲು ಟೀಕೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2022, 10:37 IST
Last Updated 1 ಜನವರಿ 2022, 10:37 IST
ಬಿ.ಶ್ರೀರಾಮುಲು ಮತ್ತು ಸಿದ್ದರಾಮಯ್ಯ
ಬಿ.ಶ್ರೀರಾಮುಲು ಮತ್ತು ಸಿದ್ದರಾಮಯ್ಯ    

ಬಾಗಲಕೋಟೆ: ಮುಖ್ಯಮಂತ್ರಿ ಆಗಿದ್ದಾಗ ಮತಾಂತರ ನಿಷೇಧ ಮಸೂದೆಗೆ ಸಹಿ ಹಾಕಿದ್ದ ಸಿದ್ದರಾಮಯ್ಯ ಈಗ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅವರೊಬ್ಬ ಭಂಡ ಹಾಗೂ ಡಬಲ್ ಸ್ಟ್ಯಾಂಡರ್ಡ್ ವ್ಯಕ್ತಿ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಶನಿವಾರ ಇಲ್ಲಿ ವಾಗ್ದಾಳಿ ನಡೆಸಿದರು.

ಈ ಹಿಂದೆ ಮಸೂದೆಗೆ ಸಹಿ ಹಾಕಿದ್ದ ಸಿದ್ದರಾಮಯ್ಯ ಈಗ ಸಹಿ ಮಾಡಿಲ್ಲ ಅಂತ ಒಮ್ಮೆ ಹೇಳುತ್ತಾರೆ. ಇನ್ನೊಮ್ಮೆ ಮಾಡಿದ್ದೀನಿ ಏನು ಮಾಡ್ತೀರಿ ಅಂತಾರೆ. ನಾವೇನು ಅವರೊಂದಿಗೆ ಜಗಳಾ ಮಾಡ್ತೀವಾ? ಹೀಗೆ ಬೇಕಾಬಿಟ್ಟಿ ಮಾತನಾಡೋ ಸಿದ್ದರಾಮಯ್ಯ ಒಬ್ಬ ಭಂಡ ವ್ಯಕ್ತಿ ಎಂದರು.

ಕಾಂಗ್ರೆಸ್ ನಾಯಕರ ಮುಗಿಸಿದರು: ‘ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ, ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಅವರನ್ನು ಸಿದ್ದರಾಮಯ್ಯ ರಾಜಕೀಯವಾಗಿ ಮುಗಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಎಲ್ಲ ಕಾಂಗ್ರೆಸ್ ನಾಯಕರನ್ನ ಮುಗಿಸುವ ಕೆಲಸ ಮಾಡುತ್ತಿದ್ದಾರೆ.ಜಿಲ್ಲೆಯ ಜನರು ಯಾವತ್ತು ಸಿದ್ದರಾಮಯ್ಯ ವಿರುದ್ಧ ಎದ್ದು ನಿಲ್ಲುತ್ತಾರೊ ಗೊತ್ತಿಲ್ಲ, ಜಿಲ್ಲೆ ಬಿಟ್ಟು ತೊಲಗಬೇಕು ಅನ್ನೋ ಪರಿಸ್ಥಿತಿ ಸಿದ್ದರಾಮಯ್ಯ ಅವರಿಗೆ ಬರಬಹುದು’ಎಂದು ಭವಿಷ್ಯ ನುಡಿದರು.

ADVERTISEMENT

ಎಸ್. ಆರ್. ಪಾಟೀಲ ಕಾಂಗ್ರೆಸ್ ಪಕ್ಷದ ಭೀಷ್ಮ. ಬಾಗಲಕೋಟೆ ಜಿಲ್ಲೆಯಲ್ಲಿ ಕಾಂಗ್ರೆಸ್ ಉಳಿದಿದ್ದರೆ ಅದಕ್ಕೆ ಎಸ್. ಆರ್. ಪಾಟೀಲ ಕಾರಣ.ಆದರೆ ಅವರಿಗೆ ಟಿಕೆಟ್ ಸಿಗದಂತೆ ಷಡ್ಯಂತ್ರ ಮಾಡಿದ್ದು ಸಿದ್ದರಾಮಯ್ಯ ಎಂದು ಹೇಳಿದರು.

'ಬೇರೆ ಬೇರೆ ಕಾರಣದಿಂದ ಬಾದಾಮಿಯಲ್ಲಿ ಗೆದ್ದು, ಜನರ ಕೈಗೆ ಸಿಗದಂತಾಗಿರುವ ಸಿದ್ದರಾಮಯ್ಯ, ತಮಗೆ ಮಾತಾಡಲು ಬರುತ್ತದೆ ಅಂತ ಯಾರಿಗೆ ಬೇಕಾದರೂ ಏಕವಚನದಲ್ಲಿ ಮಾತನಾಡಿ, ಟೀಕೆ ಮಾಡುತ್ತಾರೆ. ನನಗೆ ಯಾರು ಸಾಟಿಯಿಲ್ಲ, ನಾನು ಮಾತನಾಡಿದ್ದೇ ವೇದವಾಕ್ಯ ಅಂತ ಭಾವಿಸಿದ್ದಾರೆ. ಈಗಾಗಲೇ ಸಿದ್ದರಾಮಯ್ಯಗೆ ಅವರ ಪಕ್ಷದಲ್ಲಿಯೇ ವಿರೋಧ ವ್ಯಕ್ತವಾಗುತ್ತಿದೆ' ಎಂದರು.

'ಮೇಕೆದಾಟು ಪಾದಯಾತ್ರೆ ಮಾಡಬೇಕು ಅಂತ ಪಾಪ ಎಲ್ಲೋ ಫೋಟೊ ಶೂಟಿಂಗ್ ಮಾಡುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈಗಾಗಲೇ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿ ಆಗಿಬಿಟ್ಟಿದ್ದೇನೆ ಎಂಬ ಭ್ರಮೆಯಲ್ಲಿದ್ದಾರೆ' ಎಂದು ಶ್ರೀರಾಮುಲು ವ್ಯಂಗ್ಯವಾಡಿದರು.

‘ಅದೇ ಕಾರಣಕ್ಕೆ ಡಿ.ಕೆ.ಶಿವಕುಮಾರ್ಫೇಸ್‌ಬುಕ್, ವಾಟ್ಸ್‌ಆ್ಯಪ್‌ನಲ್ಲಿ ಟ್ರೋಲ್ ಆಗುತ್ತಿದ್ದಾರೆ. ಸದ್ಯ ಕೆಲಸ ಇಲ್ಲದ ಅವರು 2023ಕ್ಕೆ ಅಧಿಕಾರಕ್ಕೆ ಬರುವ ಹಗಲು ಕನಸು ಕಾಣುತ್ತಿದ್ದಾರೆ. ಅವರು ಏನೇ ನಾಟಕ ಮಾಡಿದರೂ ಕೂಡ ಅದೆಲ್ಲ ವ್ಯರ್ಥ ಆಗಲಿದೆ. ಈಗಿರುವುದು ಪ್ರದೇಶ ಕಾಂಗ್ರೆಸ್ ಪಕ್ಷ ಅಲ್ಲ. ಅದು ಪರದೇಸಿ ಕಾಂಗ್ರೆಸ್ ಪಕ್ಷ. ಅದಕ್ಕೆ ನಾಯಕ ದುಡ್ಡು ಇರುವ ಡಿ.ಕೆ.ಶಿವಕುಮಾರ್’ಎಂದು ಲೇವಡಿ ಮಾಡಿದರು.

‘ಕೆಪಿಸಿಸಿ ಅಧ್ಯಕ್ಷರು ಕೇವಲ ಫೋಸ್ ಕೊಟ್ಟು, ಅಲ್ಲೆಲ್ಲೋ ರೈತರ ಜತೆ ಫೋಟೊ ತೆಗೆಸಿಕೊಂಡು ಪ್ರಚಾರ ಪಡೆಯುತ್ತಾರೆ. ಹೀಗೆ ಲುಂಗಿ ಉಟ್ಕೊಂಡು ನದಿ ಹತ್ರ ಓಡಾಡಿದರೆ ಜನರ ಒಲವು ಗಳಿಸಲು ಸಾಧ್ಯವಿಲ್ಲ’ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.