ADVERTISEMENT

ಕೆರೂರ: ಕುರಿ, ಮೇಕೆ ಭರ್ಜರಿ ವ್ಯಾಪಾರ

ಒಂದು ವರ್ಷದ ಜೋಡಿ ಟಗರಿಗೆ ₹ 70 ಸಾವಿರ ದವರೆಗೂ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 22 ಮೇ 2024, 5:21 IST
Last Updated 22 ಮೇ 2024, 5:21 IST
ಕೆರೂರು ಪಟ್ಟಣದಲ್ಲಿ ಮಂಗಳವಾರ ಸಂತೆಯಲ್ಲಿ ಟಗರು ಹಾಗೂ ಕುರಿ ವ್ಯಾಪಾರ ಜೋರಾಗಿತ್ತು
ಕೆರೂರು ಪಟ್ಟಣದಲ್ಲಿ ಮಂಗಳವಾರ ಸಂತೆಯಲ್ಲಿ ಟಗರು ಹಾಗೂ ಕುರಿ ವ್ಯಾಪಾರ ಜೋರಾಗಿತ್ತು   

ಕೆರೂರ: ಪಟ್ಟಣದ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಆವರಣದಲ್ಲಿ ಪ್ರತಿ ಮಂಗಳವಾರ ನಡೆಯುವ ಕುರಿ ಹಾಗೂ ಮೇಕೆಯ ವಾರದ ಸಂತೆಯಲ್ಲಿ ಲಕ್ಷಾಂತರ ರೂಪಾಯಿ ವರೆಗೆ ಭರ್ಜರಿ ವ್ಯಾಪಾರ– ವಹಿವಾಟು ನಡೆಯಿತು.

ಕೆರೂರ ಸಂತೆಯು ದೊಡ್ಡ ಮಟ್ಟದಲ್ಲಿ ನಡೆಯುವುದರಿಂದ ವ್ಯಾಪಾರಕ್ಕೆ ಅಕ್ಕ ಪಕ್ಕದ ರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶ, ತಮಿಳನಾಡು, ಮಹಾರಾಷ್ಟ್ರ ಹಾಗೂ ರಾಜ್ಯದ ಬೆಂಗಳೂರು, ದಾವಣಗೆರೆ ಹೀಗೆ ವಿವಿಧ ಪ್ರದೇಶಗಳಿಂದ ಕುರಿ ಹಾಗೂ ಮೇಕೆ ಖರೀದಿಗೆ ಜನ ಬರುತ್ತಾರೆ.

ಸಾಮಾನ್ಯವಾಗಿ ಹಬ್ಬದ ದಿನ, ಜಾತ್ರೆ, ಗ್ರಾಮ ದೇವತೆಗಳ ಉತ್ಸವ ಇಂತಹ ದಿನಗಳಲ್ಲಿ ಕುರಿ, ಮೇಕೆ, ಟಗರು ವ್ಯಾಪಾರಕ್ಕೆ ಬೇಡಿಕೆ ಹೆಚ್ಚಾಗಿರುತ್ತದೆ. ದೇವರಿಗೆ ಹರಕೆ ತೀರಿಸಲು ಜನರು ಕುರಿ ಹಾಗೂ ಮೇಕೆಗಳನ್ನು ಖರೀದಿಸುತ್ತಾರೆ.

ADVERTISEMENT

ಮೇ 23 ರಂದು ಪಟ್ಟಣದ ಗ್ರಾಮ ದೇವತೆಗಳಿಗೆ ಉಡಿ ತುಂಬವ ಕಾರ್ಯಕ್ರಮ ಇರುವುದರಿಂದ ಮಂಗಳವಾರ ಸಂತೆಯಲ್ಲಿ ವ್ಯಾಪಾರ ಜೋರಾಗಿತ್ತು.

‘ಒಂದು ವರ್ಷದ ಜೋಡಿ ಟಗರಿಗೆ ₹70 ಸಾವಿರ ದವರೆಗೂ ಬೇಡಿಕೆ ಇತ್ತು. ಇನ್ನೆರಡು ದಿನಕ್ಕೆ ಹಬ್ಬ ಇರುವುದರಿಂದ ಬೇಡಿಕೆ ಹೆಚ್ಚಾಗಿತ್ತು. ಇಂತಹ ದಿನಗಳಲ್ಲಿ ವ್ಯಾಪಾರ ಚನ್ನಾಗಿ ನಡೆದರೆ ಉತ್ತಮ ಆದಾಯ ಪಡೆಯಬಹುದು’ ಎಂದು ಟಗರು ವ್ಯಾಪಾರಿ ಮಲ್ಲಪ್ಪ ಚಿಕ್ಕನವರ ಹೇಳಿದರು.

ನಿರ್ವಹಣೆ ಇಲ್ಲದೆ ಪಾಳು ಬಿದ್ದ ಕುರಿ ವೈಜ್ಞಾನಿಕ ಮಾರುಕಟ್ಟೆ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕುರಿಗಳ ವೈಜ್ಞಾನಿಕ ಮಾರುಕಟ್ಟೆ ನಿರ್ಮಾಣ ಮಾಡಿ 2 ವರ್ಷ ಕಳೆದರೂ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ. ಲಕ್ಷಾಂತ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿದ ಮಾರುಕಟ್ಟೆಗೆ ದಿಕ್ಕೆ ಇಲ್ಲದಂತಾಗಿದೆ.

ಮಾರುಕಟ್ಟೆ ಆವರಣದಲ್ಲಿ ಕುರಿಗಳಿಗೆ ಕುಡಿಯುವ ನೀರು, ರಸ್ತೆ, ತೂಕದ ವ್ಯವಸ್ಥೆ, ನಿಲ್ಲಲು ನೆರಳು, ಚರಂಡಿ, ವಾಣಿಜ್ಯ ಮಳಿಗೆ, ಶೌಚಾಲಯ ವ್ಯವಸ್ಥೆ ಇಲ್ಲದೆ ವ್ಯಾಪಾರ– ವಹಿವಾಟಕ್ಕೆ ಬಂದ ಜನರು ಪರದಾಡುವಂತಾಯಿತು.

ಕುರಿ, ಮೇಕೆಯ ತಳಿ, ಗಾತ್ರ ನೋಡಿ ವ್ಯಾಪಾರ ಮಾಡುವ ಪದ್ಧತಿ ಈಗಲೂ ಚಾಲ್ತಿಯಲ್ಲಿದೆ. ಆದರೆ ಇಲ್ಲಿಯ ಮಾರುಕಟ್ಟೆ ನಿರ್ವಹಣೆ ಸರಿಯಾಗಿ ಇಲ್ಲದ ಕಾರಣ ಖರೀದಿದಾರರು ಹಾಗೂ ವ್ಯಾಪಾರಸ್ಥರು ಮೋಸ ಹೋಗುತ್ತಾರೆ. ಇದರಿಂದ ಮಧ್ಯವರ್ತಿಗಳಿಗೆ ಲಾಭ ಮಾಡಿದಂತಾಗುತ್ತದೆ.

ಸ್ಥಳೀಯ ಕುರಿ ಸಾಕಾಣಿಕೆ ಹಾಗೂ ಉಣ್ಣೆ ಉತ್ಪಾದಕರ ಸಂಘದವರು ಮಾರುಕಟ್ಟೆಯನ್ನು ಅಭಿವೃದ್ದಿ ಪಡಿಸದೆ ಹಾಗೇಯೇ ಬಿಟ್ಟಿದ್ದಾರೆ.

ನಿರ್ವಹಣೆ ಇಲ್ಲದೆ ಪಾಳು ಬಿದ್ದಿರುವ ಕೆರೂರಿನ ಕುರಿ ವೈಜ್ಞಾನಿಕ ಮಾರುಕಟ್ಟೆ
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕೆರೂರಿನ ಕುರಿ ವೈಜ್ಞಾನಿಕ ಮಾರುಕಟ್ಟೆಯನ್ನು ಅಭಿವೃದ್ದಿ ಪಡಿಸಿ ಶೀಘ್ರ ಪ್ರಾರಂಭಿಸಬೇಕು.
–ಪಡಿಯಪ್ಪ ಬೀರನ್ನವರ, ಕುರಿಗಾಹಿ ಫಕೀರ ಬೂದಿಹಾಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.