ADVERTISEMENT

ಕಿತ್ತೂರು ಚನ್ನಮ್ಮ ಭಾವಚಿತ್ರದ ಭವ್ಯ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2024, 15:15 IST
Last Updated 11 ನವೆಂಬರ್ 2024, 15:15 IST
ಶಿರೂರಿನಲ್ಲಿ ಭಾನುವಾರ ಕಿತ್ತೂರ ಚನ್ನಮ್ಮ ಭಾವಚಿತ್ರದ ಮೆರವಣಿಗೆ ನಡೆಯಿತು
ಶಿರೂರಿನಲ್ಲಿ ಭಾನುವಾರ ಕಿತ್ತೂರ ಚನ್ನಮ್ಮ ಭಾವಚಿತ್ರದ ಮೆರವಣಿಗೆ ನಡೆಯಿತು   

ರಾಂಪುರ: ಸಮೀಪದ ಶಿರೂರ ಪಟ್ಟಣದಲ್ಲಿ ಭಾನುವಾರ ವೀರಶೈವ ಲಿಂಗಾಯತ ಪಂಚಮಸಾಲಿ ಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ವೀರರಾಣಿ ಕಿತ್ತೂರು ಚನ್ನಮ್ಮಳ 200ನೇ ವಿಜಯೋತ್ಸವ ಕಾರ್ಯಕ್ರಮ ಭಾನುವಾರ ಸಂಭ್ರಮದಿಂದ ನಡೆಯಿತು.

ಬೆಳಿಗ್ಗೆ ಪಟ್ಟಣದಲ್ಲಿ ಚನ್ನಮ್ಮಳ ಭಾವಚಿತ್ರದ ಅದ್ದೂರಿ ಮೆರವಣಿಗೆ ನಡೆಯಿತು. ಸ್ಥಳೀಯ ಸಿದ್ದೇಶ್ವರ ಪ್ರೌಢಶಾಲೆಯ ಮೈದಾನದಿಂದ ಆರಂಭವಾದ ಭವ್ಯ ಮೆರವಣಿಗೆಗೆ ಗುಳೇದಗುಡ್ಡ ಮರಡಿ ಮಠದ ಅಭಿನವ ಕಾಡಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

‘ಇಂದಿನ ಯುವ ಸಮೂಹ ಕಿತ್ತೂರು ಚನ್ನಮ್ಮಳ ಸಾಹಸ, ಶೌರ್ಯದ ಗುಣಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಸ್ವಾಮೀಜಿ ಹೇಳಿದರು. ನಂತರ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.

ADVERTISEMENT

ಬೃಹತ್ ಆಕಾರದ ವಿವಿಧ ಬೊಂಬೆಗಳ ಕುಣಿತ, ಕಹಳೆ, ಡೊಳ್ಳು ಕುಣಿತ, ರಾಮದುರ್ಗದ ಶಂಕ್ರವ್ವ ಮುಗಳಿ ಮಹಿಳಾ ಕಲಾ ತಂಡದ ಡೊಳ್ಳು ಕುಣಿತ, ಕಮತಗಿಯ ಸೋಮಶೇಖರ ಹೂಟಿಯವರ ವೀರಗಾಸೆ ಸೇರಿದಂತೆ ವಿವಿಧ ಪ್ರಕಾರದ ಜನಪದ ಕಲಾ ತಂಡಗಳು ಮೆರವಣಿಗೆಗೆ ಸಾಥ್ ನೀಡಿದವು.

ವಿದ್ಯಾರ್ಥಿನಿ ಶ್ರೀರಕ್ಷಾ ಇಳಕಲ್ಲ ಕಿತ್ತೂರ ಚನ್ನಮ್ಮಳಾಗಿ ಕುದುರೆ ಮೇಲೆ ಕುಳಿತು ಕೈಯಲ್ಲಿ ಕತ್ತಿ ಹಿಡಿದು ಸಾಗಿದ ದೃಶ್ಯ ನೋಡುಗರ ಗಮನ ಸೆಳೆಯಿತು. ಸಮಾಜದ ಯುವಕರು ಡಿಜೆ ಹಾಡಿಗೆ ನರ್ತಿಸಿದರು.

ವೀರಶೈವ ಲಿಂಗಾಯತ ಪಂಚಮಸಾಲಿ ಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಎಲ್. ಮೆಣಸಗಿ, ಉಪಾಧ್ಯಕ್ಷ ಎಸ್.ಎಸ್. ಕಲಗುಡಿ, ಕಾರ್ಯದರ್ಶಿ ಎಸ್.ಬಿ. ಕಟಗಿ, ಸಮಾಜದ ಹಿರಿಯರಾದ ಸಿ.ಎನ್. ಕಟಗಿ, ಚಂದ್ರಶೇಖರ ಕೋಟಿ, ಸಿ.ಎಂ. ಪ್ಯಾಟಿಶೆಟ್ಟರ, ಶ್ರೀಶೈಲ ಕರಿಶಂಕರಿ, ರಾಜು ಚಿತ್ತವಾಡಗಿ, ಕಲ್ಲಪ್ಪ ಭಗವತಿ, ರಾಜಶೇಖರ ಅಂಗಡಿ, ಸಿದ್ದಪ್ಪ ಪಟ್ಟಣಶೆಟ್ಟಿ, ಸಿದ್ದಪ್ಪ ಹಳ್ಳೂರ, ಎಂ.ಎಸ್.ಕಲಗುಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.