ಬಾಗಲಕೋಟೆ: ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಆಗ್ರಹಿಸಿ ಬಿಜೆಪಿಯ ಜನಸ್ವರಾಜ್ ಯಾತ್ರೆಯ ವೇಳೆ ಬೂಟ್ ಪಾಲಿಶ್ ಮಾಡಿ ದೇಣಿಗೆ ಸಂಗ್ರಹಿಸಲು ಮುಂದಾಗಿದ್ದ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಶನಿವಾರ ಪೊಲೀಸರು ವಶಕ್ಕೆ ಪಡೆದರು.
ಬಾಗಲಕೋಟೆ ನಗರದಲ್ಲಿ ಆಯೋಜಿಸಿರುವ ಜನಸ್ವರಾಜ್ಸಮಾವೇಶದಲ್ಲಿ ಪಾಲ್ಗೊಳ್ಳುವ ಶಾಸಕ ಬಿ.ಎಸ್. ಯಡಿಯೂರಪ್ಪ ಸೇರಿ ಸಚಿವರು, ಶಾಸಕರ ಶೂ ಪಾಲಿಶ್ ಮಾಡಿ ದೇಣಿಗೆ ಸಂಗ್ರಹಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಶಾಸಕ ಚರಂತಿಮಠ ಸವಾಲು ಸ್ವೀಕಾರ:ಬಾಗಲಕೋಟೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ಆರಂಭಿಸಲು ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಕೆಲ ದಿನಗಳ ಹಿಂದೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಬದನೂರ ನೇತೃತ್ವದಲ್ಲಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬೂಟ್ ಪಾಲಿಶ್ ಮಾಡಿ ಹಣ ಸಂಗ್ರಹಿಸಲಾಗಿತ್ತು.
ಇದಕ್ಕೆ ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದ್ದ ಶಾಸಕ ವೀರಣ್ಣ ಚರಂತಿಮಠ ಜಿಲ್ಲಾಧಿಕಾರಿ ಕಚೇರಿ ಎದುರು ಹೆಚ್ಚು ಜನ ಬರೊಲ್ಲ. ಆ ಕೆಲಸ ಜಿಲ್ಲೆಯಾದ್ಯಂತ ಮಾಡಲಿ. ಹೆಚ್ಚು ಹಣ ಸಂಗ್ರಹವಾಗುತ್ತದೆ ಎಂದು ಹೇಳಿದ್ದರು. ಅದನ್ನು ಸವಾಲಾಗಿ ಸ್ವೀಕರಿಸಿದ್ದ ರಕ್ಷಣಾ ವೇದಿಕೆ ಸಂಘಟನೆ ಜಿಲ್ಲೆಯಾದ್ಯಂತ ಸರಣಿ ಬೂಟ್ ಪಾಲಿಶ್ ಚಳವಳಿ ಆರಂಭಿಸಿ ವೀರಣ್ಣ ಚರಂತಿಮಠ ವಿರುದ್ಧ ಹೋರಾಟ ಹಮ್ಮಿಕೊಂಡಿತ್ತು. ಅದರ ಮುಂದುವರೆದ ಭಾಗವಾಗಿ ಜನಸ್ವರಾಜ್ ಯಾತ್ರೆಯಲ್ಲೂ ಬೂಟ್ ಪಾಲಿಶ್ ಚಳವಳಿ ಹಮ್ಮಿಕೊಳ್ಳುವುದಾಗಿ ಘೋಷಿಸಿತ್ತು.
ಮುಂಜಾಗರೂಕತಾ ಕ್ರಮವಾಗಿರಮೇಶ್ ಬದ್ನೂರ, ಬಾಗಲಕೋಟೆ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಧರ್ಮಂತಿ ಸೇರಿ ಮುಖಂಡರನ್ನು ಮನೆಯಲ್ಲೇ ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.