ADVERTISEMENT

ಸತ್ತರೂ ಬಿಜೆಪಿ ಧ್ವಜ ಮೈಮೇಲಿರುತ್ತದೆ: ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2024, 16:29 IST
Last Updated 21 ಸೆಪ್ಟೆಂಬರ್ 2024, 16:29 IST
ಕೆ.ಎಸ್. ಈಶ್ವರಪ್ಪ
ಕೆ.ಎಸ್. ಈಶ್ವರಪ್ಪ   

ಬಾಗಲಕೋಟೆ: ‘ಸಾಯುವವರೆಗೂ ರಾಜಕಾರಣ ಮಾಡುತ್ತೇನೆ. ಬಿಜೆಪಿಯಲ್ಲಿ ಶುದ್ಧೀಕರಣ ಆಗಬೇಕು ಎನ್ನುವುದು ನನ್ನ ಹೋರಾಟದ ಉದ್ಧೇಶ. ಇದು ರಾಜ್ಯ ಬಿಜೆಪಿಯ ಹಲವು ನಾಯಕರ ಆಸೆಯೂ ಆಗಿದೆ. ನಾನು ಸತ್ತರೂ ಸಹ ಬಿಜೆಪಿ ಧ್ವಜ ಮೈಮೇಲಿರುತ್ತದೆ. ಯಾವುದೇ ಕಾರಣಕ್ಕೂ ಬಿಜೆಪಿಯಿಂದ ಹೊರಗೆ ಇರುವವನಲ್ಲ’ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.

ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಶುದ್ಧೀಕರಣ ಆಗಬೇಕು ಎಂದು ಕೆಲವರು ಬಹಿರಂಗವಾಗಿ ಹೇಳುತ್ತಿಲ್ಲ. ನಾನು ಅದನ್ನು ಹೇಳಿ ಹೊರಬಂದಿದ್ದೇನೆ. ಈಗ ಯತ್ನಾಳ್, ಲಿಂಬಾವಳಿ, ಜಾರಕಿಹೊಳಿ ಹೇಳುತ್ತಿದ್ದಾರೆ. ನನ್ನ ವಿಚಾರಕ್ಕೆ ಪೂರಕವಾಗಿ ಕೆಲವರು ಮಾತನಾಡುತ್ತಿದ್ದಾರೆ ಎನ್ನುವುದೇ ಯಶಸ್ಸು’ ಎಂದರು.

‘ಈ ಹಿಂದೆ ನನಗೆ ಅಖಿಲೇಶ್ ಯಾದವ್ ಫೋನ್ ಮಾಡಿದಾಗ ಪೋನ್ ಮಾಡಬೇಡಿ ಎಂದಿದ್ದೆ. ಕಾಂಗ್ರೆಸ್ ನಾಯಕರು ಸಹ ಫೋನ್ ಮಾಡಿದ್ದರು. ಕುತ್ತಿಗೆ ಕೊಯ್ದರೂ ಬಿಜೆಪಿ ಬಿಟ್ಟು ಹೋಗಲ್ಲ. ಪಕ್ಷದಲ್ಲಿ ಶುದ್ಧೀಕರಣ ಆಗಬೇಕು ಎಂದು ಮೊದಲ ಹೆಜ್ಜೆ ಇಟ್ಟಿದ್ದೇನೆ. ಅದು ಆಗಿಯೇ ಆಗುತ್ತದೆ’ ಎಂದರು.

ADVERTISEMENT

ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು ಕಲಬೆರಕೆಯಲ್ಲಿ ವಿದೇಶಿ ಕ್ರಿಶ್ಚಿಯನ್‌ ಪಾದ್ರಿಗಳ ಷಡ್ಯಂತ್ರ ಇದೆ ಎಂದು ಆರೋಪ ಮಾಡಿದರು.

ತಿರುಪತಿ ಲಡ್ಡು ಪ್ರಸಾದ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಲಡ್ಡು ಕಲಬೆರಕೆ ಜಗನ್ ಮೋಹನ್ ರೆಡ್ಡಿ ಕಾಲದಲ್ಲೆ ಯಾಕೆ ಆಯಿತು ಎಂದು ಪ್ರಶ್ನಿಸಿದರು.

ಹಿಂದೂ ಸಮಾಜದ ಮೇಲೆ ಆಗುತ್ತಿರೋ ಈ ಷಡ್ಯಂತ್ರ, ಗಣಪತಿ ಮೆರವಣಿಗೆ, ಲಡ್ಡು ಪ್ರವಾಸ ಇರಬಹುದು, ರಾಷ್ಟ್ರದ ಧ್ವಜಗಳ ಬಗ್ಗೆ ಇರಬಹುದು. ಹೀಗೆ ದೇಶದಲ್ಲಿ ಎಲ್ಲ ರೂಪದಲ್ಲೂ ಹಿಂದೂ ಸಮಾಜದ ಮೇಲೆ ಆಕ್ರಮಣ ನಡೆಯುತ್ತಿದೆ. ಧ್ವಜ ಹಾರಿಸಿದ ಬಗ್ಗೆ ಹೇಳಿಕೆ ನೀಡಿರುವ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಂಧಿಸಿ ಎನ್ನುವವರು ಪ್ಯಾಲಿಸ್ಟೀನ್ ಧ್ವಜ ಹಾರಿಸಿದವರನ್ನು ಬಂಧಿಸಿ ಎಂದಿದ್ದಾರೆಯೇ ಎಂದು ಪ್ರಶ್ನಿಸಿದರು.

ವೀರಣ್ಣ ಹಳೇಗೌಡರ, ರಾಜು ಬಿರಾದಾರ, ರುದ್ರಣ್ಣ ಗುಳಗುಳಿ, ಸಿದ್ದರಾಮ ಭಜನೆ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.