ADVERTISEMENT

ಮೂಲ ಸೌಕರ್ಯಗಳ ಕೊರತೆ: ಬನಹಟ್ಟಿ ಪ್ರೌಢಶಾಲೆಗೆ ಬೇಕಿದೆ ಕಾಯಕಲ್ಪ

ಮೂಲ ಸೌಕರ್ಯಗಳ ಎದುರಿಸುತ್ತಿರುವ ವಿದ್ಯಾರ್ಥಿಗಳು

ವಿಶ್ವಜ ಕಾಡದೇವರ
Published 1 ಅಕ್ಟೋಬರ್ 2024, 5:16 IST
Last Updated 1 ಅಕ್ಟೋಬರ್ 2024, 5:16 IST
<div class="paragraphs"><p>ಶಾಲೆಯ ಆವರಣದಲ್ಲಿರುವ ಹಾಳು ಬಿದ್ದ ಹಳೆಯ ಕಟ್ಟಡಗಳು</p></div>

ಶಾಲೆಯ ಆವರಣದಲ್ಲಿರುವ ಹಾಳು ಬಿದ್ದ ಹಳೆಯ ಕಟ್ಟಡಗಳು

   

ರಬಕವಿ ಬನಹಟ್ಟಿ: ಬನಹಟ್ಟಿಯಲ್ಲಿ 1982ರಲ್ಲಿ ಸ್ಥಾಪನೆಯಾದ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂದು ಹಲವಾರು ಸಮಸ್ಯೆಗಳಿವೆ. 4 ದಶಕಗಳಿಗಿಂತ ಹೆಚ್ಚು ಕಾಲದ ಶಾಲೆಗೆ ಮೂಲ ಸೌಕರ್ಯಗಳ ಕೊರತೆ ಇದ್ದು, ಇಲ್ಲಿ ಓದುತ್ತಿರುವ ನೂರಾರು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.

ಶಾಲೆಯ ಸುತ್ತಲೂ ಕಾಂಪೌಂಡ್ ಇಲ್ಲದೆ ಇರುವುದರಿಂದ ಕಳ್ಳರು ಶಾಲೆಯಲ್ಲಿರುವ ಹಾಲಿನ ಪೌಡರ್, ಅಕ್ಕಿ ಬೇಳೆಗಳನ್ನು ಸೇರಿದಂತೆ ಬಿಸಿಯೂಟಕ್ಕೆ ಬೇಕಾದ ಆಹಾರ ಪದಾರ್ಥಗಳನ್ನು ಕದಿಯುತ್ತಿದ್ದಾರೆ. ಒಂದೂವರೆ ತಿಂಗಳಲ್ಲಿ ಮೂರು ಬಾರಿ ಆಹಾರ ದಾಸ್ತಾನು ಕೋಣೆಯನ್ನು ಮುರಿದು ಕಳ್ಳತನ ಮಾಡಲಾಗಿದೆ.

ADVERTISEMENT

ಏಳು ಅಕ್ಕಿ ಚೀಲಗಳನ್ನು ಹೊತ್ತುಕೊಂಡು ಹೋಗಲು ಸಾಧ್ಯವಾಗದೆ ಇರುವುದರಿಂದ ಶಾಲೆಯ ಹಿಂಬದಿಯಲ್ಲಿ ಬಿಟ್ಟು ಹೋಗಿ‍ದ್ದಾರೆ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಲಾಗಿದೆ. ಕಳ್ಳರು ಮತ್ತು ಕಿಡಿಗೇಡಿಗಳು ಶಾಲೆ ಪ್ರವೇಶ ಮಾಡದಂತೆ ₹ 15 ಸಾವಿರ ವೆಚ್ಚದಲ್ಲಿ ತಂತಿ ಬೇಲಿ ನಿರ್ಮಾಣ ಮಾಡಲಾಗಿತ್ತು. ಆದರೆ ಅದನ್ನು ಕತ್ತರಿಸಿ ಒಳಗೆ ಬರುತ್ತಿದ್ದಾರೆ. ಶಾಲೆಯ ಗೋಡೆಗಳು ತಂಬಾಕು ತಿಂದು ಉಗಳಿದ ಕಲೆಗಳಿಂದ ತುಂಬಿದೆ. ಶಾಲೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಕಿಡಿಗೇಡಿಗಳು ಹಾಳು ಮಾಡಿದ್ದಾರೆ.

ಶಾಲೆಯಲ್ಲಿ ಬಾಲಕರ ಮತ್ತು ಬಾಲಕಿಯರ ಶೌಚಾಲಯಗಳು ಸಂಪೂರ್ಣವಾಗಿ ಹಾಳು ಬಿದ್ದಿವೆ. ಬಾಲಕಿಯರ ಶೌಚಾಲಯಕ್ಕೆ ಸರಿಯಾದ ನೀರಿನ ಸಂಪರ್ಕ ಇಲ್ಲದೆ ಇರುವುದರಿಂದ ಸಮಸ್ಯೆಯಾಗಿದೆ. 300ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಇಲ್ಲಿ ಓದುತ್ತಿದ್ದು, ಇಲ್ಲಿರುವ ಶೌಚಾಲಯಗಳಲ್ಲಿ ಸರಿಯಾದ ವ್ಯವಸ್ಥೆ ಇಲ್ಲ. ಇಲ್ಲಿನ ಶಿಕ್ಷಕರಿಗೂ ಶೌಚಾಲಯ ಸಮಸ್ಯೆಯಿದೆ.

ಶಾಲೆಯ ಮೈದಾನ ಸಮತಟ್ಟಾಗಿ ಇಲ್ಲ. ಹಳೆಯ ಕಟ್ಟಡಗಳ ಅವಶೇಷಗಳನ್ನು ಹಾಗೆಯೇ ಬಿಡಲಾಗಿದೆ. ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಸಮಸ್ಯೆಯೂ ಇದೆ. ಒಟ್ಟಿನಲ್ಲಿ ಇಲ್ಲಿನ ಸರ್ಕಾರಿ ಶಾಲೆ ಮೂಲಭೂತ ಸಮಸ್ಯೆಗಳಿಂದ ಬಳಲುತ್ತಿದೆ.

ಕಾಮಗಾರಿ ಇನ್ನೂ ಆರಂಭವಾಗಿಲ್ಲ

ಶಾಲೆಯಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಲು ಮಂಜೂರಾತಿ ದೊರೆತಿದೆ. ಆದರೂ ಕಟ್ಟಡ ಕಾಮಗಾರಿಗಳು ಇನ್ನೂ ಆರಂಭವಾಗಿಲ್ಲ. ಶಾಲೆಯ ಆವರಣದಲ್ಲಿರುವ ಹಳೆಯ ಕಟ್ಟಡಗಳನ್ನು ಕೆಡವಲು ಮೇಲಾಧಿಕಾರಿಗಳಿಗೆ ಪರವಾನಗಿ ಕೇಳಿ ಪತ್ರ ಬರೆಯಲಾಗಿದೆ. ತುರ್ತಾಗಿ ಕಾಂಪೌಂಡ್‌ ನಿರ್ಮಾಣವಾಗಬೇಕಾಗಿದೆ ಎಂದು ಶಾಲೆಯ ಮುಖ್ಯ ಶಿಕ್ಷಕ ಪ್ರಕಾಶ ದಾಸರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.