ಮಹಾಲಿಂಗಪುರ: ನಿರೀಕ್ಷೆಗೂ ಮೀರಿ ಆಗುತ್ತಿರುವಪ್ರವೇಶಾತಿ ಒಂದೆಡೆಯಾದರೆ, ನಿರೀಕ್ಷೆಗೆ ತಕ್ಕಂತೆ ಇಲ್ಲದ ಮೂಲಸೌಲಭ್ಯ ಇನ್ನೊಂದೆಡೆ. ಇವೆರಡರ ಮಧ್ಯೆ ಹಸ್ತಾಂತರಗೊಳ್ಳದ ಹೊಸ ಕಟ್ಟಡ ಸಮಸ್ಯೆ. ಹೀಗಾಗಿ, ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದೆ.
ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ಬಂದಿದ್ದರಿಂದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರವೇಶಕ್ಕೆ ಬೇಡಿಕೆ ಹೆಚ್ಚಿದೆ. ಮೊದಲ ದಿನ ಸೋಮವಾರವೇ 30ಕ್ಕೂ ಹೆಚ್ಚು ಪ್ರವೇಶ ಫಾರಂಗಳು ಬಿಕರಿಯಾಗಿವೆ. ಅಲ್ಲದೆ, ಹೆಚ್ಚಿನ ಸಂಖ್ಯೆಯ ಪಾಲಕರು ಪ್ರವೇಶಾತಿಯ ಮಾಹಿತಿ ಕೇಳುತ್ತಿದ್ದಾರೆ. ಜೂನ್ 1 ರಿಂದ ಪ್ರವೇಶಾತಿ ದೊರೆಯಲಿದ್ದು, ಜೂನ್ 9 ರಿಂದ ಕಾಲೇಜ್ ತರಗತಿಗಳು ಆರಂಭವಾಗಲಿವೆ. ಪೂರ್ವ ಸಿದ್ಧತೆಯಾಗಿ ಪ್ರವೇಶ ಫಾರಂಗಳನ್ನು ಸದ್ಯ ನೀಡಲಾಗುತ್ತಿದೆ.
ಲೋಕೋಪಯೋಗಿ ಇಲಾಖೆಯಿಂದ ₹96 ಲಕ್ಷ ವೆಚ್ಚದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹೊಸ ಕಟ್ಟಡ ನಿರ್ಮಿಸಲಾಗಿದೆ. ಕಾಮಗಾರಿ ಮುಗಿದು ವರ್ಷವಾದರೂ ಉದ್ಘಾಟನೆ ಕಾಣದೇ ಇದ್ದಾಗ ಕಳೆದ ಮಾರ್ಚ್‌ನಲ್ಲಿ ಕಟ್ಟಡ ಉದ್ಘಾಟಿಸಲಾಗಿದೆ. ಆದರೆ, ಇಲ್ಲಿಯವರೆಗೆ ಲೋಕೋಪಯೋಗಿ ಇಲಾಖೆಯು ಶಿಕ್ಷಣ ಇಲಾಖೆಗೆ ಕಟ್ಟಡ ಹಸ್ತಾಂತರಿಸಿಲ್ಲ. ಹೀಗಾಗಿ, ಕಾಲೇಜ್ ಆರಂಭವಾಗುತ್ತಿದ್ದಂತೆ ಕೋಣೆಗಳ ಕೊರತೆಯನ್ನು ಸರ್ಕಾರಿ ಪದವಿ ಪೂರ್ವ ಕಾಲೇಜು ಎದುರಿಸಲಿದೆ.
ವಿದ್ಯಾರ್ಥಿಗಳ ಸಂಖ್ಯೆ: ಕಾಲೇಜಿನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗ ಹೊಂದಿದ್ದು, ಕಲಾ ವಿಭಾಗದಲ್ಲಿ 169, ವಾಣಿಜ್ಯ ವಿಭಾಗದಲ್ಲಿ 29 ಹಾಗೂ ವಿಜ್ಞಾನ ವಿಭಾಗದಲ್ಲಿ 19 ವಿದ್ಯಾರ್ಥಿಗಳು ಪ್ರಥಮ ವರ್ಷ ಉತ್ತೀರ್ಣಗೊಂಡಿದ್ದು, ದ್ವಿತೀಯ ವರ್ಷಕ್ಕೆ ಪ್ರವೇಶ ಪಡೆಯಲಿದ್ದಾರೆ. ಕಚೇರಿ ಸೇರಿದಂತೆ ಒಟ್ಟು 7 ಕೋಣೆಗಳಿವೆ. ಒಂದು ತರಗತಿ ಕೋಣೆಗೆ 100 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿದರೂ ಹೊಂದಾಣಿಕೆ ಸಾಧ್ಯವಾಗುತ್ತಿಲ್ಲ. ಲ್ಯಾಬೊರೇಟರಿ, ಗ್ರಂಥಾಲಯಕ್ಕೆ ಕೋಣೆಗಳೇ ಇಲ್ಲ. ಹಸ್ತಾಂತರವಾಗದ ನೂತನ ಕಟ್ಟಡದಲ್ಲಿ ಸದ್ಯ ಆರು ಕೋಣೆಗಳಿವೆ. ಹೊಸ ಕಟ್ಟಡ, ಹಳೆಯ ಕಟ್ಟಡ ಸೇರಿದಂತೆ 10 ಕೋಣೆಗಳು ಲಭ್ಯವಾಗಲಿವೆ. ಇವುಗಳಲ್ಲಿ ಗ್ರಂಥಾಲಯ, ಲ್ಯಾಬೊರೇಟರಿ, ಕಚೇರಿ, ಸಿಬ್ಬಂದಿ ಕೋಣೆ, ತರಗತಿ ಕೋಣೆಗಳನ್ನು ಸಜ್ಜುಗೊಳಿಸಬೇಕಿದೆ.
ಶಿಕ್ಷಕರ ಕೊರತೆ: ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕರ ಕೊರತೆ ಇದೆ. ಮಂಜೂರಾದ 12 ಹುದ್ದೆಗಳಲ್ಲಿ ಎಂಟು ಹುದ್ದೆಗಳು ಭರ್ತಿಯಾಗಿವೆ. ಗಣಿತ, ಕನ್ನಡ, ವಾಣಿಜ್ಯ ವಿಷಯದ ಶಿಕ್ಷಕರೇ ಇಲ್ಲ. ಕಾಲೇಜು ಆರಂಭವಾಗುತ್ತಿದ್ದಂತೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತದೆ. ಭೌತಶಾಸ್ತ್ರ, ಜೀವಶಾಸ್ತ್ರ, ಅರ್ಥಶಾಸ್ತ್ರ ವಿಷಯದ ಶಿಕ್ಷಕರು ಹಾಗೂ ಕ್ಲರ್ಕ್ ಹೆಚ್ಚುವರಿಯಾಗಿ ಬೇರೆ ಕಾಲೇಜಿಗೆ ತೆರಳುತ್ತಾರೆ. ಮೂರು ದಿನ ಇಲ್ಲಿ ಇನ್ನುಳಿದ ಮೂರು ದಿನ ಅಲ್ಲಿ ಕಾರ್ಯ ನಿರ್ವಹಣೆ ಮಾಡಬೇಕಿರುವುದರಿಂದ ವಿಷಯಗಳನ್ನು ಹೊಂದಿಸುವುದು ಕಷ್ಟವಾಗಲಿದೆ.ಸದ್ಯ ಕಾಲೇಜು ಅಧ್ಯಾಪಕರು ಮೌಲ್ಯಮಾಪನಕ್ಕೆ ತೆರಳಿದ್ದು, ಎಫ್‌ಡಿಸಿ, ಅಟೆಂಡರ್ ಮಾತ್ರ ಇದ್ದಾರೆ. ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶವೂ ಉತ್ತಮವಾಗಿದ್ದು, ಸಹಜವಾಗಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯಲಿದ್ದಾರೆ. ಆದರೆ, ಪ್ರವೇಶಾತಿ ತಕ್ಕಂತೆ ಇಡೀ ಕಾಲೇಜಿಗೆ ಅಗತ್ಯವಾದ ಡೆಸ್ಕ್, ಕೋಣೆಗಳು ಇಲ್ಲ.
*
ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗಿದೆ. ಕಾಲೇಜ್ ಆರಂಭವಾಗುವ ಮುನ್ನವೇ ಹಸ್ತಾಂತರಿಸಿದರೆ ತರಗತಿ ಕೋಣೆಗಳನ್ನು ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
-ಎಸ್.ಎಸ್.ಚನ್ನಾಳ, ಸರ್ಕಾರಿ ಪಪೂ ಕಾಲೇಜ್, ಮಹಾಲಿಂಗಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.