ADVERTISEMENT

ಬಾದಾಮಿ: ಸಮಸ್ಯೆಗಳ ಸುಳಿಯಲ್ಲಿ ಪಾರಂಪರಿಕ ತಾಣ, ಸಿಗದ ಮೂಲಸೌಕರ್ಯ

ಎರಡು ಬಾರಿ ಭಾರಿ ಪ್ರವಾಹಕ್ಕೆ ನಲುಗಿದ ಪಟ್ಟದಕಲ್ಲು

ಎಸ್.ಎಂ ಹಿರೇಮಠ
Published 30 ಆಗಸ್ಟ್ 2023, 5:31 IST
Last Updated 30 ಆಗಸ್ಟ್ 2023, 5:31 IST
ಬಾದಾಮಿ ಸಮೀಪದ ಪಟ್ಟದಕಲ್ಲು ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ತಗಡಿನ ಶೆಡ್ಡಿನಲ್ಲಿ ವಾಸವಿರುವ ನೆರೆ ಸಂತ್ರಸ್ತರು
ಬಾದಾಮಿ ಸಮೀಪದ ಪಟ್ಟದಕಲ್ಲು ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ತಗಡಿನ ಶೆಡ್ಡಿನಲ್ಲಿ ವಾಸವಿರುವ ನೆರೆ ಸಂತ್ರಸ್ತರು   

ಬಾದಾಮಿ: ವಿಶ್ವ ಪರಂಪರೆ ತಾಣ ಪಟ್ಟದಕಲ್ಲಿನ ಜನ, ನೆರೆ ಪ್ರವಾಹ ಭೀತಿ, ಶೌಚಾಲಯ, ಮೂತ್ರಾಲಯ ಕೊರತೆ, ಶೆಡ್‌ನಲ್ಲೇ ವಾಸ, ವೈದ್ಯರ ಕೊರತೆ, ಹದಗೆಟ್ಟ ರಸ್ತೆ, ಅಸ್ವಚ್ಛ ಚರಂಡಿ, ಸೊಳ್ಳೆಗಳ ಕಾಟದಿಂದ ಬಳಲುತ್ತಿದ್ದಾರೆ.

ಚಾಲುಕ್ಯರ ಕಾಲದ ಪಟ್ಟದಕಲ್ಲು ಶಿಲ್ಪಕಲೆಯ ತೊಟ್ಟಿಲಾಗಿದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಖುಷಿಪಡುವುದು ಒಂದೆಡೆಯಾದರೆ, ಮತ್ತೊಂದೆಡೆ ಇಲ್ಲಿನ ನಿವಾಸಿಗಳು ಅನೇಕ ಕುಂದುಕೊರತೆಗಳನ್ನು ಅನುಭವಿಸುತ್ತಿದ್ದಾರೆ.

2009 ಮತ್ತು 2019ರಲ್ಲಿ ಮಲಪ್ರಭಾ ನದಿ ಪ್ರವಾಹಕ್ಕೆ ಇಲ್ಲಿನ ಜನರು ನಲುಗಿಹೋಗಿದ್ದಾರೆ. ಮನೆಗಳು ನೆಲಸಮವಾಗಿ ಬೆಳೆ ಕೊಚ್ಚಿ ಹೋಗಿತ್ತು. ಆಡಳಿತ ಈವರೆಗೆ ಪ್ರವಾಹ ತಡೆಗೆ ಕ್ರಮ ವಹಿಸದ ಕಾರಣ ಮತ್ತೆ ಯಾವಾಗ ಪ್ರವಾಹ ಬರುತ್ತದೋ ಎಂಬ ಆತಂಕದಲ್ಲೇ ಜನರು ದಿನ ಕಳೆಯುವಂತಾಗಿದೆ.

ADVERTISEMENT

2019ರ ಪ್ರವಾಹದಲ್ಲಿ ಪಟ್ಟದಕಲ್ಲಿನ 80ಕ್ಕೂ ಅಧಿಕ ಮನೆಗಳು ಕುಸಿಸಿದಿದ್ದವು. ಗ್ರಾಮದಿಂದ 8 ಕಿ.ಮೀ. ದೂರದ ಶಂಕರಲಿಂಗ ಕೊಳ್ಳದಲ್ಲಿ 40 ಸಂತ್ರಸ್ತರ ಕುಟುಂಬಗಳು ಮತ್ತು ಪಟ್ಟದಕಲ್ಲು ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ 36 ಸಂತ್ರಸ್ತ ಕುಟುಂಬಗಳು ತಗಡಿನ ಶೆಡ್ಡಿನಲ್ಲಿ ವಾಸವಿದ್ದಾರೆ.

‘ಮನಿ ಕಟ್ಟಾಕ ₹5 ಲಕ್ಷ ಕೊಡತೀವಿ ಅಂತ ಸರ್ಕಾರ ಹೇಳಿತ್ತು. ₹1 ಲಕ್ಷ ಕೊಟ್ಟರು,₹4 ಲಕ್ಷ ಕೊಡಲಿಲ್ಲ. ಇದರಾಗ ಮನಿ ಹೆಂಗ ಕಟ್ಟಿಸಬೇಕರಿ. ಹ್ಯಾಂಗರ ಮನಿ ಕಟ್ಟಬೇಕಂದರ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಒಪ್ಪಗಿ ಕೊಡವಲ್ಲದು. ಏನ ಮಾಡಬೇಕೆಂಬೂದ ನಮಗ ತಿಳಿವಲ್ಲದರಿ’ ಎಂದು ಶೆಡ್ಡಿನಲ್ಲಿ ವಾಸಿಸುತ್ತಿರುವ ವೃದ್ಧ ಮಹಿಳೆ ಅಯ್ಯಮ್ಮ ಮತ್ತು ಸೋಮಶೇಖರ ಮೋಜಿ ತಮ್ಮ ನೋವು ತೋಡಿಕೊಂಡರು.

‘ಪ್ರವಾಹ ಬಂದಾಗ ಗ್ರಾಮ ಸ್ಥಳಾಂತರಕ್ಕೆ ಧರಣಿ ಕೈಗೊಂಡಾಗ ಅಂದಿನ ಶಾಸಕರಾಗಿದ್ದ ಸಿದ್ದರಾಮಯ್ಯ ಅವರು, ಇಲ್ಲಿಗೆ ಭೇಟಿ ನೀಡಿ, ಸ್ಥಳಾಂತರದ ಭರವಸೆ ನೀಡಿದ್ದರು. ಈಗ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಸಂಪೂರ್ಣ ಸ್ಥಳಾಂತರದ ಹೊಣೆ ಅವರದ್ದೇ ಆಗಿದೆ’ ಎಂದು ಮುತ್ತಣ್ಣ ತೋಟಗೇರ ಒತ್ತಾಯಿಸಿದರು.

‘ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೊದಲು ಇಬ್ಬರು ವೈದ್ಯರಿದ್ದರು. ಈಗ ಒಬ್ಬರೇ ವೈದ್ಯರಿದ್ದಾರೆ. ಶವಾಗಾರ ಬಿದ್ದು ಅನೇಕ ವರ್ಷಗಳು ಗತಿಸಿವೆ. ನೂತನ ಶವಾಗಾರ ಕಟ್ಟಡ ನಿರ್ಮಾಣವಾಗಬೇಕಿದೆ. ಜಿಲ್ಲಾ ಮತ್ತು ತಾಲ್ಲೂಕು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಗಿದೆ’ ಎಂದು ಚೌರಪ್ಪ ಮಾದರ ಹೇಳಿದರು.

‘ಸ್ಮಾರಕಗಳನ್ನು ವೀಕ್ಷಿಸಲು ಬಂದ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸುವುದರಿಂದ ಸಂಚಾರಕ್ಕೆ ತೊಂದರೆಯಾಗಿದೆ. ಸ್ಮಾರಕ ಸಮೀಪ ಪ್ರವಾಸೋದ್ಯಮ ಇಲಾಖೆಯ ಎರಡೂವರೆ ಎಕರೆ ಖಾಲಿ ನಿವೇಶನವಿದ್ದು, ಇಲ್ಲಿ ಪಾರ್ಕಿಂಗ್ ಸೌಲಭ್ಯ ಕಲ್ಪಿಸಬೇಕು. ರೈತರು ಹೊಲಕ್ಕೆ ಹೋಗುವ ದಾರಿ ಬಂದ್‌ ಆಗಿದೆ’ ಎಂದು ರೈತರಾದ ಬಸವರಾಜ ಅಂಗಡಿ ಮತ್ತು ಶ್ರೀಶೈಲ ಹಂಚನಾಳ ಅಲವತ್ತುಕೊಂಡರು.

‘ಪುರುಷರಿಗೆ ಮತ್ತು ಮಹಿಳೆಯರಿಗೆ ಶೌಚಾಲಯವಿಲ್ಲ. ಪ್ರವಾಹದಿಂದ ನೆಲಸಮವಾಗಿವೆ. ಜೆಜೆಎಂ ಯೋಜನೆಯಡಿ ರಸ್ತೆ ಅಗೆದು ಮುಚ್ಚದಿರುವ ಕಾರಣ ರಸ್ತೆಗಳು ಹದಗೆಟ್ಟಿವೆ. ಚರಂಡಿಗಳ ಸ್ವಚ್ಛತಾ ಕಾರ್ಯ ನಡೆಯದೇ, ಸೊಳ್ಳೆಗಳ ಕಾಟ ವಿಪರೀತವಾಗಿದೆ’ ಎಂದು ಗ್ರಾಮಸ್ಥರು ದೂರಿದರು.

ಪಟ್ಟದಕಲ್ಲು ಗ್ರಾಮದಲ್ಲಿ  ಸ್ಮಾರಕದ ಸಮೀಪದ ರಸ್ತೆಯಲ್ಲಿ ಕೊಳಚೆ ನೀರು ಹರಿಯಿತು
ಪಟ್ಟದಕಲ್ಲು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಿಥಿಲಗೊಂಡ ಶವಾಗಾರ ಕಟ್ಟಡ.

ಸಮಸ್ಯೆ ಪರಿಹರಿಸಲು ಯತ್ನ

‘ಎರಡು ಬಾರಿ ದೊಡ್ಡ ಪ್ರಮಾಣದಲ್ಲಿ ಪ್ರವಾಹ ಬಂದು 357 ಶೌಚಾಲಯಗಳು ಬಿದ್ದಿವೆ. ಹೊಸ ಶೌಚಾಲಯ ನಿರ್ಮಿಸಲು ಭಾರತೀಯ ಪುರಾತತ್ವ ಇಲಾಖೆ ನೋಟಿಸ್ ಮೂಲಕ ತಡೆಹಿಡಿಯುತ್ತದೆ. ಸಾಮೂಹಿಕ ಶೌಚಾಲಯದಲ್ಲಿ ಹೂಳು ತುಂಬಿದೆ. ಮತ್ತಿತರ ಸಮಸ್ಯೆಗಳ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಲಾಗುತ್ತದೆ ’ ಎಂದು ಪಿಡಿಒ ಎಸ್.ಎನ್. ತೋಟರ ಹೇಳಿದರು.

ವೈದ್ಯರ ನೇಮಕಾತಿ ಪ್ರಕ್ರಿಯೆ ನಡೆಯುತ್ತದೆ. ಶೀಘ್ರದಲ್ಲೇ ಇನ್ನೊಬ್ಬ ವೈದ್ಯರು ಬರಲಿದ್ದಾರೆ
ಎಂ.ಬಿ. ಪಾಟೀಲ ಟಿಎಚ್ಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.