ಕೂಡಲಸಂಗಮ: ಕೂಡಲಸಂಗಮ ಅರ್ಚಕ ಕಾಲೊನಿಯ (ಮಹೇಶ್ವರ ನಗರ) ಜನರು ಮೂಲ ಸೌಲಭ್ಯಗಳ ಕೊರತೆಯಿಂದ ನಿತ್ಯವೂ ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.
ನಾರಾಯಣಪುರ ಜಲಾಶಯದ ಹಿನ್ನೀರಿನಿಂದ ಬಾಧಿತವಾದ ಕೂಡಲಸಂಗಮ ದೇವಾಲಯದ ಬಳಿ ವಾಸ ಇದ್ದ ಅರ್ಚಕರಿಗಾಗಿಯೇ ಅರ್ಚಕ ಕಾಲೊನಿ ಎಂಬ ಪುನರ್ವಸತಿ ಕೇಂದ್ರವನ್ನು ಪುನರ್ವಸತಿ ಹಾಗೂ ಪುನರ್ನಿರ್ಮಾಣ ಇಲಾಖೆ 1978ರಲ್ಲಿ ನಿರ್ಮಿಸಿದೆ. ಈ ಕಾಲೊನಿಯ ಕೆಲವು ಭಾಗಗಳಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಮುಳ್ಳುಕಂಟಿಗಳು ರಸ್ತೆಗೆ ಚಾಚಿಕೊಂಡಿರುವುದರಿಂದ ಜನರ ಸಂಚಾರಕ್ಕೂ ಅಡ್ಡಿಯಾಗಿದೆ.
ಕೆಲವು ಭಾಗಗಳಲ್ಲಿ ರಸ್ತೆಗೆ ಚರಂಡಿ ನಿರ್ಮಿಸಲಾಗಿದೆ. ಆದರೆ ಚರಂಡಿ ನೀರು ಸಾಗಲು ಮುಂದೆ ಮಾರ್ಗ ಇಲ್ಲದೇ ನೀರು ಚರಂಡಿಯಲ್ಲಿಯೇ ಸಂಗ್ರಹವಾಗಿ ನಿಂತಿದ್ದು, ಎಲ್ಲೆಡೆ ಸೊಳ್ಳೆಗಳ ತಾಣವಾಗಿದೆ. ಮಳೆ ಬಂದಾಗ ರಸ್ತೆಯಲ್ಲಿ ಹರಿಯುವ ನೀರು ಕಾಲೊನಿಯ ಮನೆಗಳಿಗೆ ನುಗ್ಗುತ್ತಿದೆ. ಜನರು ಸಂಚರಿಸಲು ಹರಸಾಹಸ ಪಡುವಂತಾಗಿದೆ.
ಕಾಲೊನಿಯ ಜನರಿಗೆ ಕುಡಿಯುವ ನೀರು ಸರಬರಾಜಿಗಾಗಿ ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಅಳವಡಿಸಿರುವ ನಳಗಳಿಗೆ ಸಮರ್ಪಕವಾಗಿ ನೀರು ಸರಬರಾಜಾಗುತ್ತಿಲ್ಲ. ಕಾಲೊನಿಯಲ್ಲಿ ಸುಮಾರು 200 ಕುಟುಂಬಗಳು ಇವೆ. ಕಸ ಸಂಗ್ರಹಣೆಗೆ ಗ್ರಾಮ ಪಂಚಾಯತಿಯಿಂದ ತಿಪ್ಪೆಗುಂಡಿ ನಿರ್ಮಿಸಲಾಗಿದ್ದು ಅಲ್ಲಿ ಸಂಗ್ರಹವಾದ ಕಸವನ್ನು ಗ್ರಾಮ ಪಂಚಾಯಿತಿ ಕಾರ್ಮಿಕರು ವಿಲೇವಾರಿ ಮಾಡದೇ ಇರುವುದರಿಂದ ತಿಪ್ಪೆಗುಂಡಿ ತ್ಯಾಜ್ಯ ವಸ್ತುಗಳ ಸಂಗ್ರಹಣಾ ಕೇಂದ್ರವಾಗಿ ದುರ್ವಾಸನೆ ಬೀರುತ್ತಿದೆ.
ರಸ್ತೆಗಳು ಹಾಳಾಗಿರುವ ಕಾರಣ ಮಳೆ ಬಂದಾಗ ಸಂಚರಿಸಲು ವಯೋವೃದ್ಧರು ತೊಂದರೆ ಅನುಭವಿಸುತ್ತಿದ್ದಾರೆ. ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ಇಲ್ಲದೇ ಸಮೂಹ ಸಂಪನ್ಮೂಲ ಕೇಂದ್ರದಲ್ಲಿ ನಡೆಯುತ್ತಿದೆ.
ಸಮರ್ಪಕ ರಸ್ತೆ ಚರಂಡಿಗಳು ಇಲ್ಲದೇ ಕಾಲೊನಿಯ ಜನ ತೊಂದರೆ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಿ ಬಹಳ ಸಮಸ್ಯೆ ಎದುರಾಗುತ್ತಿದ್ದು ಕೂಡಲೇ ಸರ್ಕಾರ ಸೂಕ್ತ ರಸ್ತೆ ಚರಂಡಿ ನಿರ್ಮಿಸಬೇಕು–ಕೆ.ಎನ್. ಕೋಟೂರ, ಕಾಲೊನಿ ನಿವಾಸಿ
ಚರಂಡಿಯಲ್ಲಿ ನೀರು ಸಂಗ್ರಹವಾಗಿರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಚರಂಡಿ ನೀರು ಹರಿದು ಹೋಗುವಂತೆ ಸೂಕ್ತ ಯೋಜನೆಯನ್ನು ಪಂಚಾಯಿತಿ ಅಧಿಕಾರಿಗಳು ಮಾಡಬೇಕು–ಕರಸಂಗಯ್ಯ ಗುಡಿ, ಕಾಲೊನಿ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.