ADVERTISEMENT

ಕಲಾದಗಿ | ಸ್ವಚ್ಛತೆ ಮರೀಚಿಕೆ; ಆತಂಕದಲ್ಲಿ ನಿವಾಸಿಗಳು

ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 5:12 IST
Last Updated 23 ಅಕ್ಟೋಬರ್ 2024, 5:12 IST
ಕಲಾದಗಿ ಸಮೀಪದ ಹಿರೇಶೆಲ್ಲಿಕೇರಿ ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಬಂದ್ ಆಗಿರುವುದು
ಕಲಾದಗಿ ಸಮೀಪದ ಹಿರೇಶೆಲ್ಲಿಕೇರಿ ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಬಂದ್ ಆಗಿರುವುದು   

ಕಲಾದಗಿ: ಸಮೀಪದ ಹಿರೇಶೆಲ್ಲಿಕೇರಿ ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು, ಸಾರ್ವಜನಿಕರು ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಕಾಲ ಕಳೆಯುವಂತಾಗಿದೆ.

ಸರ್ಕಾರಿ ಶಾಲೆ ಕಾಂಪೌಂಡ್ ಹತ್ತಿರ ತ್ಯಾಜ್ಯ ವಸ್ತುಗಳನ್ನು ಎಸೆಯಲಾಗುತ್ತಿದೆ. ಮಳೆ ಆದರೆ ಶಾಲೆ ಬಳಿ ನೀರು ನಿಲ್ಲುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ.

ಗ್ರಾಮದ ಆರೋಗ್ಯ ಉಪ ಕೇಂದ್ರದ ಸುತ್ತಲೂ ಪಾರ್ಥೇನಿಯಂ ಬೆಳೆದು ನಿಂತು ಹಲವು ತಿಂಗಳೇ ಆದರೂ ಸ್ವಚ್ಛತೆಗೆ ಗ್ರಾಮ ಪಂಚಾಯಿತಿ ಮುಂದಾಗಿಲ್ಲ. ಸರಿಯಾಗಿ ಕರ್ತವ್ಯ ಮಾಡಬೇಕಾದ ಸಿಬ್ಬಂದಿ ವಾರದಲ್ಲಿ ಒಂದು ದಿನ ಮಾತ್ರ ಬರುತ್ತಾರೆ ಎಂದು ಗ್ರಾಮಸ್ಥರು ದೂರಿದರು.

ADVERTISEMENT

ಗ್ರಾಮದ ಅಂಗನವಾಡಿ ಕೇಂದ್ರಗಳಿಗೆ ಕಾಂಪೌಂಡ್ ವ್ಯವಸ್ಥೆ ಇಲ್ಲದೇ ಇರುವುದು, ಬಡ ಜನರಿಗೆ ಸರ್ಕಾರದಿಂದ ವಸತಿ ಯೋಜನೆ ಮಂಜೂರಾದರೆ ಮನೆ ಕಟ್ಟಿಕೊಳ್ಳಲು ಜಾಗ ಇಲ್ಲ ಎನ್ನುತ್ತಾರೆ ಗ್ರಾಮಸ್ಥ ಮಾರುತಿ ಸಂಗಳದ.

ಶುದ್ಧ ಕುಡಿಯುವ ನೀರಿನ ಘಟಕ ಬಂದ್: ಹಿರೇ ಶೆಲ್ಲಿಕೇರಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಬಂದಾಗಿ ಹಲವು ವರ್ಷಗಳೇ ಕಳೆದರೂ ಅಧಿಕಾರಿಗಳು ನೀರಿನ ಘಟಕ ದುರುಸ್ತಿ ಮಾಡಿಸಿಲ್ಲ. ಗ್ರಾಮಸ್ಥರು ಶುದ್ಧ ಕುಡಿಯುವ ನೀರಿಗಾಗಿ ಕಳಸಕೊಪ್ಪ, ನೀರಬೂದಿಹಾಳ, ಹಾಗೂ ಚಿಕ್ಕಶೆಲ್ಲಿಕೇರಿ ಗ್ರಾಮಕ್ಕೆ ಹೋಗಿ ನೀರು ತರುವಂತಾಗಿದೆ ಎಂದು ಗ್ರಾಮಸ್ಥ ಮಡ್ಯಪ್ಪ ಬೆಳಗಲಿ ತಿಳಿಸಿದರು.

ಯುವಕರಿಗೆ ಓದಲು ಸಮುದಾಯ ಭವನದಲ್ಲಿ ಗ್ರಂಥಾಲಯ ತೆರೆದರೆ ಅನುಕೂಲವಾಗುತ್ತದೆ. ಸ್ಥಳೀಯ ಆಡಳಿತ ಆದ್ಯತೆ ಮೇರೆಗೆ ಗ್ರಾಮದಲ್ಲಿನ ಸ್ವಚ್ಛತೆಗೆ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯ ಪುಂಡಲೀಕ ಹುನ್ನಳ್ಳಿ ಒತ್ತಾಯಿಸಿದರು.

ಗ್ರಾಮದ ತ್ಯಾಜ್ಯ ಹಾಗೂ ಸ್ವಚ್ಛತೆಯನ್ನು ಮಾಡುವ ಕೆಲಸವನ್ನು ಕೂಡಲೇ ಕೈಗೆತ್ತಿಕೊಳ್ಳಲಾಗುವುದು
–ಗೀತಾ ದುಂಡಪ್ಪ ನಾಯ್ಕರ, ಚಿಕ್ಕಶಲ್ಲಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.