ADVERTISEMENT

ಇಳಕಲ್ | ‘ಪ್ರತಿಧ್ವನಿ’ಸುವ ರಂಗಮಂದಿರ; ಬಳಕೆಗೆ ಅನುಪಯುಕ್ತ

ಅಗತ್ಯ ಸೌಲಭ್ಯಗಳ ಕೊರತೆ, ಕ್ರಮವಹಿಸದ ಅಧಿಕಾರಿಗಳು: ರಂಗಕರ್ಮಿಗಳ ಅಸಮಾಧಾನ

ಬಸವರಾಜ ಅ.ನಾಡಗೌಡ
Published 7 ಅಕ್ಟೋಬರ್ 2024, 7:03 IST
Last Updated 7 ಅಕ್ಟೋಬರ್ 2024, 7:03 IST
ಅಗತ್ಯ ಸೌಲಭ್ಯಗಳಿಲ್ಲದೇ ಬಾಗಿಲು ಮುಚ್ಚಿರುವ ಇಳಕಲ್‌ ಸುವರ್ಣ ರಂಗಮಂದಿರ
ಅಗತ್ಯ ಸೌಲಭ್ಯಗಳಿಲ್ಲದೇ ಬಾಗಿಲು ಮುಚ್ಚಿರುವ ಇಳಕಲ್‌ ಸುವರ್ಣ ರಂಗಮಂದಿರ   

ಇಳಕಲ್: ನಗರದಲ್ಲಿ ನಗರಸಭೆ ಹತ್ತಿರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಿರ್ಮಿಸಲಾಗಿರುವ ಸುವರ್ಣ ರಂಗಮಂದಿರ ಅವೈಜ್ಞಾನಿಕ ಕಾಮಗಾರಿ ಹಾಗೂ ಅಗತ್ಯ ಸೌಲಭ್ಯಗಳ ಕೊರತೆಯಿಂದ ನಲುಗುತ್ತಿದ್ದು, ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯದಂತಾಗಿ, ರಂಗಮಂದಿರ ಇದ್ದೂ ಇಲ್ಲದಂತಾಗಿದೆ.

ರಂಗಮಂದಿರ ನಿರ್ಮಾಣಗೊಂಡು 4 ವರ್ಷ ಕಳೆದಿವೆ. ಉದ್ಘಾಟನೆ ಸಂದರ್ಭದಲ್ಲಿಯೇ ಸಭಾಂಗಣದಲ್ಲಿ ಪ್ರತಿಧ್ವನಿ ಕೇಳುವುದನ್ನು ಗಮನಿಸಿದ ಅನೇಕರು ‘ಕಟ್ಟಿರುವುದು ರಂಗಮಂದಿರ ಅಲ್ಲ, ಉಗ್ರಾಣ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಧ್ವನಿ ತಜ್ಞರನ್ನು ಕರೆಯಿಸಿ, ಪ್ರತಿಧ್ವನಿ ಆಗುವುದನ್ನು ತಪ್ಪಿಸಲು ಅಗತ್ಯ ಕಾಮಗಾರಿ ಮಾಡುವಂತೆ ಒತ್ತಾಯಿಸಿದ್ದರು.

ADVERTISEMENT

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಗಿನ ಸಹಾಯಕ ನಿರ್ದೇಶಕರು, ಧ್ವನಿ, ಬೆಳಕು ಹಾಗೂ ಸ್ಥಿರ ಆಸನಗಳನ್ನು ಅಳವಡಿಸುವ ಕೆಲಸಗಳು ಬಾಕಿ ಇದ್ದು, ಈ ಬಗ್ಗೆ ಪ್ರಸ್ತಾಪನೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದರು. ಆದರೆ ಈವರೆಗೆ ಯಾವುದೇ ಕೆಲಸಗಳು ಆಗಿಲ್ಲ.

ಸುಸಜ್ಜಿತ ರಂಗಮಂದಿರ ಎನಿಸಿಕೊಳ್ಳಲು ಇನ್ನೂ ಅನೇಕ ಕೆಲಸಗಳು ಬಾಕಿ ಇವೆ. ಅಪೂರ್ಣವಾಗಿರುವ ರಂಗಮಂದಿರದ ನಿರ್ವಹಣೆಯ ಜವಾಬ್ದಾರಿಯನ್ನು ನಗರಸಭೆಗೆ ವಹಿಸಲಾಗಿದೆ. ಪ್ರತಿಧ್ವನಿಸುವ ಕಾರಣ ಇಲ್ಲಿ ನಾಟಕ ಪ್ರದರ್ಶನಕ್ಕೆ ಯಾರೂ ಮುಂದೆ ಬರುತ್ತಿಲ್ಲ. ಬಾಡಿಗೆ ರೂಪದಲ್ಲಿ ಆದಾಯ ಸಂಗ್ರಹವಾಗುತ್ತಿಲ್ಲ. ಈಗ 16 ಸಾವಿರ ವಿದ್ಯುತ್‌ ಬಿಲ್‌ ಬಾಕಿ ಇದೆ. ರಂಗಮಂದಿರದ ತುಂಬೆಲ್ಲಾ ದೂಳೇ ಆವರಿಸಿಕೊಂಡಿದೆ.

ಮೂಲತಃ ಇಳಕಲ್‌ನವರಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರಣಕುಮಾರ‌ ಹಾಗೂ ರಂಗಮಂದಿರದ ನಿರ್ವಹಣೆ ಮಾಡುತ್ತಿರುವ ನಗರಸಭೆಯ ಪೌರಾಯುಕ್ತರಿಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಆದರೆ ಈವರೆಗೂ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ.

ಅಧಿಕಾರಿಗಳು ಅಂದಾಜು ವೆಚ್ಚದೊಂದಿಗೆ ಪ್ರಸ್ತಾವನೆ ಸಲ್ಲಿಸಿಲ್ಲ. ರಂಗಮಂದಿರ ಸುಸಜ್ಜಿತಗೊಂಡು ಕಲಾವಿದರ ಬಳಕೆಗೆ ಲಭ್ಯವಾಗುವ ಲಕ್ಷಣಗಳು ಸದ್ಯಕ್ಕೆ ಗೋಚರಿಸುತ್ತಿಲ್ಲ ಎಂದು ರಂಗಾಸಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಗತ್ಯ ಸೌಲಭ್ಯಗಳಿಲ್ಲದೇ ಬಾಗಿಲು ಮುಚ್ಚಿರುವ ಇಳಕಲ್‌ ಸುವರ್ಣ ರಂಗಮಂದಿರ
ರಂಗಮಂದಿರವನ್ನು ನಗರಸಭೆಗೆ ಹಸ್ತಾಂತರಿಸಿದ್ದೇವೆ. ಪೌರಾಯುಕ್ತರು ಆಗಬೇಕಿರುವ ಕಾಮಗಾರಿಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸಿದರೆ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುವುದು
ಕರಣಕುಮಾರ ಸಹಾಯಕ ನಿರ್ದೇಶಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಳಕಲ್‌
ಹೆಸರಿಗಷ್ಟೇ ರಂಗಮಂದಿರವಿದೆ. ಬಯಲಿನಲ್ಲಿ ರಂಗಸಜ್ಜಿಕೆ ನಿರ್ಮಿಸಿ ನಾಟಕ ಪ್ರದರ್ಶಿಸುವುದು ತಪ್ಪಿಲ್ಲ. ಕೂಡಲೇ ರಂಗಮಂದಿರವನ್ನು ಸುಸಜ್ಜಿತಗೊಳಿಸಿ ಬಳಕೆಗೆ ಯೋಗ್ಯವಾಗಿಸಬೇಕು
ಮಹಾಂತೇಶ ಗಜೇಂದ್ರಗಡ ರಂಗಕರ್ಮಿ
₹2.5 ಕೋಟಿ ಅನುದಾನದಲ್ಲಿ ನಿರ್ಮಾಣ
2006ರಲ್ಲಿ ಸುವರ್ಣ ಕರ್ನಾಟಕ ವರ್ಷಾಚರಣೆ ಸಂದರ್ಭದಲ್ಲಿ ರಂಗಭೂಮಿಯಲ್ಲಿ ಹೆಸರು ಮಾಡಿದ್ದ ಇಳಕಲ್‌ ನಗರಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸುವರ್ಣ ರಂಗಮಂದಿರ ಮಂಜೂರು ಮಾಡಿತ್ತು. ವಿವಿಧ ಕಾರಣಗಳಿಗಾಗಿ ಅನೇಕ ವರ್ಷ ಕಾಮಗಾರಿ ಆರಂಭವಾಗಲಿಲ್ಲ. ಕೊನೆಗೆ 15 ವರ್ಷಗಳ ನಂತರ ₹2.5 ಕೋಟಿ ಅನುದಾನದಲ್ಲಿ ಸುವರ್ಣ ರಂಗಮಂದಿರ ನಿರ್ಮಾಣಗೊಂಡು 2021ರ ಸೆ.27ರಂದು ಲೋಕಾರ್ಪಣೆಗೊಂಡಿತು. ರಂಗಮಂದಿರದ ನಿರ್ವಹಣೆಯ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸ್ಪಷ್ಟ ಮಾರ್ಗಸೂಚಿ ನೀಡಲಿಲ್ಲ. ವರ್ಷದ ಹಿಂದಷ್ಟೇ ನಗರಸಭೆಗೆ ರಂಗಮಂದಿರ ಹಸ್ತಾಂತರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.