ADVERTISEMENT

ಗುಳೇದಗುಡ್ಡ | ಸಮಸ್ಯೆಗಳ ಆಗರ ಲಾಯದಗುಂದಿ

3 ಸಾರ್ವಜನಿಕ ಶೌಚಾಲಯಗಳಿದ್ದರೂ ವ್ಯರ್ಥ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 5:10 IST
Last Updated 10 ಜುಲೈ 2024, 5:10 IST
ಲಾಯದಗುಂದಿ ಗ್ರಾಮದಲ್ಲಿ ಚರಂಡಿ ಇರದ ಮುಖ್ಯ ರಸ್ತೆ
ಲಾಯದಗುಂದಿ ಗ್ರಾಮದಲ್ಲಿ ಚರಂಡಿ ಇರದ ಮುಖ್ಯ ರಸ್ತೆ   

ಗುಳೇದಗುಡ್ಡ: ಪಟ್ಟಣದಿಂದ 8 ಕಿ.ಮೀ ದೂರದಲ್ಲಿರುವ ತಾಲ್ಲೂಕಿನ ಲಾಯದಗುಂದಿ ಗ್ರಾಮ ಮೂಲ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿದೆ.

ಗ್ರಾಮದಲ್ಲಿ 600ಕ್ಕೂ ಹೆಚ್ಚು ಮನೆಗಳಿದ್ದು 5000ದಷ್ಟು ಜನಸಂಖ್ಯೆ ಹೊಂದಿದೆ. ಗ್ರಾಮ ಪಂಚಾಯಿತಿ ಕಾರ್ಯಾಲಯ ಗ್ರಾಮದಲ್ಲೇ ಇದ್ದು ಒಟ್ಟು 6 ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಆದರೂ ಯಾವುದೇ ಮಹತ್ವದ ಕೆಲಸಗಳಾಗಿಲ್ಲ. ಚರಂಡಿ ವ್ಯವಸ್ಥೆ, ಕುಡಿಯುವ ನೀರು, ರಸ್ತೆ, ಶೌಚಾಲಯ ಸಮಸ್ಯೆಗಳು ಗ್ರಾಮದಲ್ಲಿ ಇಂದಿಗೂ ಜೀವಂತವಾಗಿವೆ.

ದುರಸ್ತಿಯಲ್ಲಿರುವ ಕುಡಿಯುವ ನೀರಿನ ಘಟಕ:

ADVERTISEMENT

ಗ್ರಾಮದಲ್ಲಿ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಅದರಲ್ಲಿ ಒಂದು ಘಟಕ ಎರಡು ವರ್ಷಗಳಿಂದ ಹಾಳಾಗಿದ್ದು, ಇದುವರೆಗೂ ದುರಸ್ತಿ ಕಾರ್ಯ ಆಗಿಲ್ಲ.

ಜಲಜೀವನ್ ಮಿಷನ್‌ನಲ್ಲಿ ಉತ್ತಮ ನೀರು ಇಲ್ಲ:

ಗ್ರಾಮದಲ್ಲಿ ಮನೆ–ಮನೆಗೆ ಕುಡಿಯಲು ಶುದ್ಧ ನೀರು ಪೂರೈಸುವುದಕ್ಕಾಗಿ ಜಲಜೀವನ್‌ ಮಿಷನ್‌ ಯೋಜನೆಯ ಅಡಿ ನಳ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಅಲ್ಲಿ ಬರುವ ನೀರು ಕುಡಿಯಲು ಯೋಗ್ಯವಾಗಿಲ್ಲದ ಕಾರಣ ಜನ ಇದನ್ನು ಇತರ ಬಳಕೆಗೆ ಮಾತ್ರ ಬಳಸುತ್ತಾರೆ. ಸಮೀಪದ ಆಸಂಗಿ ಕೆರೆಯಿಂದ ನೀರನ್ನು ಬಿಡುತ್ತಿದ್ದು, ಕೆರೆಯಲ್ಲಿ ಆಪು ಎಂಬ ಸಸ್ಯ ಬೆಳೆದಿದೆ. ಹಸಿರು ಜೊಂಡು ಕೆರೆ ತುಂಬ ಇದೆ. ಸ್ವಚ್ಛಗೊಳಿಸುವ ಕೆಲಸ ಮಾಡದ ಕಾರಣ ಶುದ್ಧ ನೀರು ಬರುತ್ತಿಲ್ಲ.

ಬಯಲು ಬಹಿರ್ದೆಸೆ ಇನ್ನೂ ಜೀವಂತ:

ಇದುವರೆಗೂ ಗ್ರಾಮ ಪಂಚಾಯತಿಯಿಂದ 3 ಸಾರ್ವಜನಿಕ ಶೌಚಾಲಯಗಳನ್ನು ಅಲ್ಲಲ್ಲಿ ನಿರ್ಮಿಸಿದ್ದಾರೆ. ಆದರೇ ನೀರು ಹಾಗೂ ಸ್ವಚ್ಛತೆ ಇರದೇ ಇರುವುದರಿಂದ ಅಲ್ಲಿ ಯಾರೂ ಹೋಗುತ್ತಿಲ್ಲ. ಈ ಕಟ್ಟಡಗಳ ಸುತ್ತ ಜಾಲಿ ಕಂಟಿ ಬೆಳೆದಿವೆ. ಗ್ರಾಮಸ್ಥರು ಬಯಲು ಬಹಿರ್ದೆಸೆಯನ್ನೇ ರೂಢಿಸಿಕೊಂಡಿದ್ದಾರೆ. ಗ್ರಾಮ ಪಂಚಾಯತಿಯಿಂದ ಅನುದಾನ ಪಡೆದು ಕೆಲವರು ಶೌಚಾಲಯ ಕಟ್ಟಿಕೊಂಡಿದ್ದರೂ, ಅವು ಬಳಸಲು ಸಾಧ್ಯವಾಗದಂತಿವೆ.

ಸ್ಮಶಾನ ಸಮಸ್ಯೆ:

2 ಕಿ.ಮೀ ದೂರವಿರುವ ಕೊಟ್ನಳ್ಳಿ ಗ್ರಾಮದ ಹತ್ತಿರ ಸ್ಮಶಾನಕ್ಕೆ ಸರ್ಕಾರಿ ಜಾಗ ನೀಡಿದ್ದಾರೆ. ಅಷ್ಟು ದೂರ ಶವಗಳನ್ನು ತೆಗೆದುಕೊಂಡು ಹೋಗಲು ಜನರು ಸಿದ್ಧರಿಲ್ಲ. ಮತ್ತೊಂದು ಊರಿನ ಶವ ತಮ್ಮೂರಿಗೆ ತರುವುದು ಬೇಡವೆಂಬ ಕೊಟ್ನಳ್ಳಿ ಗ್ರಾಮಸ್ಥರ ತಕರಾರು ಸಹ ಇದೆ. ಇದುವರೆಗೆ ಗ್ರಾಮದ ಸಮೀಪದಲ್ಲೇ ಇರುವ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿರುವ ಮಲಪ್ರಭಾ ನದಿಗೆ ಹೊಂದಿಕೊಂಡಿರುವ ವಡಾವು ಜಮೀನಿನಲ್ಲಿ ಅಂತ್ಯಕ್ರಿಯೆ ಮಾಡುತ್ತ ಬರಲಾಗುತ್ತಿತ್ತು. ಆದರೆ ಈಗ ಅಲ್ಲಿಯ ಸ್ಮಶಾನಕ್ಕೆ ಹೊಂದಿಕೊಂಡಿರುವ ಪ್ರಭಾವಿ ರೈತರೊಬ್ಬರು ಅಲ್ಲಿ ಅಂತ್ಯಸಂಸ್ಕಾರ ಮಾಡಲು ಅಡ್ಡಿಪಡಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. ಹೀಗಾಗಿ ಗ್ರಾಮಸ್ಥರು ಗ್ರಾಮಕ್ಕೆ ಹೊಂದಿಕೊಂಡ ಹಳ್ಳ ಇಲ್ಲವೇ ಅಂತ್ಯ ಸಂಸ್ಕಾರವನ್ನು ತಮ್ಮ ಹೊಲಗಳ ಬದುವಿನಲ್ಲೇ ಮಾಡುತ್ತಿದ್ದಾರೆ.

ಗಬ್ಬು ನಾರುವ ಚರಂಡಿಗಳು:

ಗ್ರಾಮದಲ್ಲಿ ಕೆಲವು ಓಣಿಗಳಲ್ಲಿ ಚರಂಡಿ ನಿರ್ಮಿಸಿದ್ದಾರೆ. ಇನ್ನೂ ಕೆಲವು ಕಡೆ ಚರಂಡಿ ನಿರ್ಮಿಸಬೇಕಾದ ಅಗತ್ಯ ಇದೆ. ಆದರೇ ಚರಂಡಿ ನೀರು ಸುಸೂತ್ರವಾಗಿ ಹೋಗಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ವರ್ಷಕೊಮ್ಮೆ ಚರಂಡಿಯ ಕೊಳಚೆ ತೆಗೆದು ಹೊರಗೆ ಹಾಕುತ್ತಾರೆ. ಗ್ರಾಮದ ರಸ್ತೆ ಪಕ್ಕ, ಎಲ್ಲೆಂದರಲ್ಲಿ ಸಾರ್ವಜನಿಕರು ಕಸ ಎಸೆಯುತ್ತಾರೆ. ಅದನ್ನು ನಿರ್ವಹಣೆ ಮಾಡಲು ಗ್ರಾಮ ಪಂಚಾಯಿತಿ ಕೆಲಸಗಾರರು ಇಲ್ಲದ್ದರಿಂದ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಇದೆ.

ಗ್ರಂಥಾಲಯ, ಪಶು ಚಿಕಿತ್ಸಾಲಯ: ಗ್ರಾಮದಲ್ಲಿ ಗಂಥಾಲಯವಿದೆ. ಆದರೆ ಹೊಸ ಪುಸ್ತಕಗಳಿಲ್ಲ. ಶೌಚಾಲಯ ಮತ್ತು ಮೂಲ ಸೌಲಭ್ಯ ಕಲ್ಪಿಸಿಲ್ಲ. ಉತ್ತಮ ಕಟ್ಟಡವಿಲ್ಲ. ಗ್ರಾಮದಲ್ಲಿ ಪಶು ಚಿಕಿತ್ಸಾಲಯವಿದ್ದು ವೈದ್ಯರು ಸರಿಯಾಗಿ ಬರುವುದಿಲ್ಲ. ಬಂದರೂ ಒಂದು ತಾಸು ಇದ್ದು ಹೋಗಿಬಿಡುತ್ತಾರೆ ಎಂದು ಸಾರ್ವಜನಿಕರ ದೂರಿದ್ದಾರೆ.

ಸೋರುತ್ತಿರುವ ಶಾಲೆ

ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಳೆ ಬಂದರೆ ಸಾಕು 3 ಕೊಠಡಿಗಳು ಸೋರುತ್ತಿವೆ. ಶಾಲೆಗೆ ಸಂಬಂಧಿಸಿ ಒಟ್ಟು 10 ಕೊಠಡಿಗಳಿವೆ. ಅದರಲ್ಲಿ 2 ಕೊಠಡಿಗಳು ಹಳೆ ಗ್ರಾಮದಲ್ಲಿವೆ. ಗುಳೇದಗುಡ್ಡ ಪಟ್ಟದಕಲ್ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ 8 ಕೊಠಡಿಗಳಿವೆ. 8 ಕೊಠಡಿಗಳಲ್ಲಿ ಮೂರು ಸೋರುತ್ತಿವೆ. ಇನ್ನು ಹಳೇ ಗ್ರಾಮದಲ್ಲಿರುವ 2 ಕೊಠಡಿಗಳಲ್ಲಿ ಪಾಠ ಕೇಳಲು ಎರಡು ತರಗತಿಯ ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ. ಮಕ್ಕಳು ಬಿಸಿ ಊಟಕ್ಕಾಗಿ ಮರಳಿ ಬರಬೇಕು. ಪಾಠಕ್ಕೆ ಮತ್ತೆ ಅಲ್ಲಿಯೇ ಹೋಗಬೇಕು. ಹಳೇ ಗ್ರಾಮದಲ್ಲಿ ಮಕ್ಕಳಿಗೆ ಶೌಚಾಲಯವಿಲ್ಲದೇ ಪರದಾಡುವ ಸ್ಥಿತಿ ಇದೆ. ಆಟದ ಮೈದಾನವಿಲ್ಲ. ಶಾಲೆಯ ಮುಂದೆಯೇ ಟ್ರ್ಯಾಕ್ಟರ್‌, ಟ್ರೈಲರ್, ಬಂಡಿ ನಿಲ್ಲಿಸಲಾಗುತ್ತದೆ. ಅದಕ್ಕೇ ದನಕರು ಕಟ್ಟುತ್ತಾರೆ. ದನಗಳ ಸಗಣಿ ಹಾಗೂ ಇತರ ಗಲೀಜಿನಿಂದ ಮಕ್ಕಳಿಗೆ ಕಿರಿ ಕಿರಿಯಾಗಿದೆ. ಸ್ವಚ್ಛಗೊಳಿಸುವಂತೆ ಹೇಳಿದರೆ ಜನ ಕೇಳುತ್ತಿಲ್ಲ. ಪಂಚಾಯತಿಯವರು ಆಸಕ್ತಿ ವಹಿಸುತ್ತಿಲ್ಲ’ ಎಂದು ಎಸ್.ಡಿ.ಎಂ.ಸಿ ಸದಸ್ಯರೊಬ್ಬರು ದೂರಿದರು.

ಅಂಗನವಾಡಿಗಳಲ್ಲಿ ಮಕ್ಕಳಿಗೆ ಶುದ್ಧ ಕುಡಿಯುವ ನೀರು, ಆಟದ ಮೈದಾನ, ಶೌಚಾಲಯ ಮುಂತಾದ ಸೌಲಭ್ಯಗಳಿಲ್ಲದೇ ಬಳಲುವಂತಾಗಿದೆ. ಲಾಯದಗುಂಡಿ–ಕೊಟ್ನಳ್ಳಿ ಮಧ್ಯೆ ಕೂಡು ರಸ್ತೆ ರಿಪೇರಿ, ಸ್ವಚ್ಛತೆ, ಕಂಟಿಗಳು ಬೆಳೆದಿರುವುದರಿಂದ ಅಭಿವೃದ್ಧಿಯಿಲ್ಲದೇ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ.

ಗ್ರಾಮಸ್ಥರ ಆಕ್ರೋಶ

‘ಪಿಡಿಒ ಪದ್ಮಾವತಿಯವರು 10ಕ್ಕೂ ಹೆಚ್ಚು ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದು. ಸರಿಯಾಗಿ ಕೆಲಸಕ್ಕೆ ಬರುತ್ತಿರಲಿಲ್ಲ. ಈಚೆಗೆ 2 ತಿಂಗಳಿಂದ ಬೂಯೊಮೆಟ್ರಿಕ್ ವ್ಯವಸ್ಥೆ ಮಾಡಿರುವುದರಿಂದ ಈಗ ಬರುತ್ತಿದ್ದಾರೆ. ಇದುವರೆಗೂ ಗ್ರಾಮದಲ್ಲಿ ಸಂಚರಿಸಿ ಸಮಸ್ಯೆಗಳನ್ನು ಆಲಿಸಿಲ್ಲ’ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚರಂಡಿ ನಿರ್ಮಾಣ ಕುಡಿಯುವ ನೀರು ಅಂಗನವಾಡಿಗಳ ಸಮಸ್ಯೆಗಳಿಗೆ ಗ್ರಾಮ ಪಂಚಾಯಿತಿಯಿಂದ ಅನುದಾನ ನೀಡಿ ಅಭಿವೃದ್ದಿ ಕಾರ್ಯ ಮಾಡಲಾಗುವುದು
ಪದ್ಮಾವತಿ, ಪಿಟಿಒ, ಲಾಯದಗುಂದಿ ಗ್ರಾ.ಪಂ
ಗ್ರಾಮ ಅಭಿವೃದ್ಧಿಗಾಗಿ ಈಗಾಗಲೇ ಹಲವು ಕಡೆ ಅನುದಾನದ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಕೆಲಸ ಮಾಡಿಸಲಾಗುವುದು
ಯಲ್ಲವ್ವ ಹನಮಂತ ಕೂಚಲ, ಅಧ್ಯಕ್ಷರು ಲಾಯದಗುಂದಿ ಗ್ರಾ.ಪಂ
ಗ್ರಾಮದಲ್ಲಿ ಬಹಳಷ್ಟು ಸಮಸ್ಯೆಗಳಿವೆ. ಅಧ್ಯಕ್ಷರು ಮತ್ತು ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅನುದಾನದ ಭರವಸೆ ನೀಡಿದ್ದು ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು.
ಬಸವರಾಜ ಜಂಗಮರ, ಸದಸ್ಯರು, ಲಾಯದಗುಂದಿ ಗ್ರಾ.ಪಂ
ಲಾಯದಗುಂದಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎದುರು ವಾಹನಗಳನ್ನು ನಿಲ್ಲಿಸಲಾಗುತ್ತಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.