ADVERTISEMENT

‘ವಿದ್ಯಾರ್ಥಿಗಳು ಸಂಸ್ಕೃತಿ ಮೈಗೂಡಿಸಿಕೊಳ್ಳಿ’

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2023, 15:52 IST
Last Updated 22 ನವೆಂಬರ್ 2023, 15:52 IST
ಮಹಾಲಿಂಗಪುರ ಸಮೀಪದ ಸಮೀರವಾಡಿಯ ಶಿವಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಹಮ್ಮಿಕೊಂಡ ಹೆಲ್ಪ್ ಎ ಚೈಲ್ಡ್ ಯೋಜನೆಯ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಫಲಾನುಭವಿ ವಿದ್ಯಾರ್ಥಿಗೆ ಚೆಕ್ ವಿತರಿಸಲಾಯಿತು
ಮಹಾಲಿಂಗಪುರ ಸಮೀಪದ ಸಮೀರವಾಡಿಯ ಶಿವಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಹಮ್ಮಿಕೊಂಡ ಹೆಲ್ಪ್ ಎ ಚೈಲ್ಡ್ ಯೋಜನೆಯ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಫಲಾನುಭವಿ ವಿದ್ಯಾರ್ಥಿಗೆ ಚೆಕ್ ವಿತರಿಸಲಾಯಿತು   

ಮಹಾಲಿಂಗಪುರ: ಸಮೀಪದ ಸಮೀರವಾಡಿಯ ಗೋದಾವರಿ ರಿಫೈನರೀಸ್‌ನ ಸೋಮೈಯಾ ಗ್ರಾಮೀಣ ವಿಕಾಸ ಕೇಂದ್ರ ಹಾಗೂ ಮುಂಬೈನ ಸೋಮೈಯಾ ವಿದ್ಯಾವಿಹಾರ ಸಂಯುಕ್ತಾಶ್ರಯದಲ್ಲಿ ಶಿವಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ‘ಹೆಲ್ಪ್ ಎ ಚೈಲ್ಡ್’ ಯೋಜನೆಯ ಪ್ರತಿಭಾ ಪುರಸ್ಕಾರ ಸಮಾರಂಭ ಬುಧವಾರ ನಡೆಯಿತು.

2023ರ ಎಂಜಿನಿಯರಿಂಗ್, ವೈದ್ಯಕೀಯ, ಪಿ.ಜಿ.ಕೋರ್ಸ್, ಬಿಬಿಎ, ಬಿಎಡ್, ನರ್ಸಿಂಗ್, ಬಿ.ಎಸ್ಸಿ, ಡಿಪ್ಲೊಮಾ, ಬಿ.ಕಾಂ, ಬಿ.ಎ ಸೇರಿದಂತೆ ವಿವಿಧ ಕೋರ್ಸ್‌ನ 778 ವಿದ್ಯಾರ್ಥಿ ಫಲಾನುಭವಿಗಳಿಗೆ ₹51.08 ಲಕ್ಷ ಶಿಷ್ಯವೇತನದ ಸಹಾಯಧನದ ಚೆಕ್, ಲ್ಯಾಪ್‌ಟಾಪ್ ಹಾಗೂ ಪಠ್ಯಪುಸ್ತಕ ವಿತರಿಸಲಾಯಿತು.

ಯೋಜನೆಯ ಫಲಾನುಭವಿ ವಿದ್ಯಾರ್ಥಿಗಳಾದ ಗೌರಿ ಕೊಕಟನೂರ, ರೇಣುಕಾ ಬ್ಯಾಕೋಡ, ಬಸವರಾಜ ಅರಭಾವಿ, ಕಾವೇರಿ ತೇಲಸಂಗ, ದೀಪಾ ಸುತಾರ ತಮ್ಮ ಅನಿಸಿಕೆ ಹಂಚಿಕೊಂಡರು.

ADVERTISEMENT

ಕಾರ್ಖಾನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಬಿ.ಆರ್.ಭಕ್ಷಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಂಸ್ಕೃತಿ, ಆಚಾರ-ವಿಚಾರ, ನಡೆ-ನುಡಿ, ಹಿರಿಯರಿಗೆ ಗೌರವ ನೀಡುವುದನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು. ಆರಂಭದಲ್ಲಿ ಈ ಯೋಜನೆಗೆ ಇಬ್ಬರೇ ಫಲಾನುಭವಿ ವಿದ್ಯಾರ್ಥಿಗಳಿದ್ದು, ಈಗ ನೂರಾರು ವಿದ್ಯಾರ್ಥಿಗಳು ಸದುಪಯೋಗ ಪಡೆಯುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.

ಯೋಜನೆಯ ಪ್ರಮುಖ ಡಾ.ವಿಜಯಕುಮಾರ ಕಣವಿ ಮಾತನಾಡಿ, ಇದೊಂದು ಆರ್ಥಿಕ ಬಲವಿಲ್ಲದ ಕುಟುಂಬಗಳಿಗೆ ಆಸರೆಯಾಗುವ ಯೋಜನೆಯಾಗಿದೆ. ಕಲಿಕಾ ಹಂತದಲ್ಲಿಯೇ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಯೋಜನ ಒದಗಿಸಿ ಅವರ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡಿದೆ. ಯೋಜನೆಯ ಸದುಪಯೋಗ ಪಡೆದ ಶೇ 56ರಷ್ಟು ವಿದ್ಯಾರ್ಥಿಗಳು ಸರ್ಕಾರಿ, ಅರೆ ಸರ್ಕಾರಿ, ವಿದೇಶಿ ಕಂಪನಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವುದು ಹೆಮ್ಮೆ ಎನಿಸಿದೆ ಎಂದರು.

ಎ.ಆರ್.ನಂದಕುಮಾರ, ಪ್ರಕಾಶ ಬೋಂದಳೆ, ಮಹಮ್ಮದ್ ಚಾವೂಸ್, ಡಾ.ರಮೇಶ ಶೆಟ್ಟರ, ರಾಮಚಂದ್ರ, ಸಂಜು ಬ್ಯಾಳಿ, ರೇಖಾ ಮಠಪತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.