ADVERTISEMENT

ತರಕಾರಿ ವಿದೇಶಕ್ಕೆ ರಫ್ತಾಗಲಿ: ಸಚಿವ ಆರ್.ಬಿ. ತಿಮ್ಮಾಪುರ

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 15:22 IST
Last Updated 24 ಜೂನ್ 2024, 15:22 IST
ಬಾಗಲಕೋಟೆಯ ತೋಟಗಾರಿಕೆ ವಿ.ವಿ.ಯಲ್ಲಿ ಸೋಮವಾರ ಸಸ್ಯಗಳ ಸಂತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಉದ್ಘಾಟಿಸಿದರು
ಬಾಗಲಕೋಟೆಯ ತೋಟಗಾರಿಕೆ ವಿ.ವಿ.ಯಲ್ಲಿ ಸೋಮವಾರ ಸಸ್ಯಗಳ ಸಂತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಉದ್ಘಾಟಿಸಿದರು   

ಬಾಗಲಕೋಟೆ: ‘ವಿಶೇಷ ಔಷಧ ಗುಣಗಳುಳ್ಳ ತರಕಾರಿಗಳತ್ತ ಜನರು ವಾಲುತ್ತಿದ್ದಾರೆ. ಅಂತಹ ಭಾರತೀಯ ತರಕಾರಿ ಜಾಗತಿಕ ಮಟ್ಟದಲ್ಲಿ ಮಾರಾಟ ಆಗುವಂತೆ ಆಗಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಮುಖ್ಯ ತೋಟಗಾರಿಕೆ ಸಂಶೋಧನಾ ವಿಸ್ತರಣಾ ಕೇಂದ್ರದಿಂದ ಮುಖ್ಯ ಆವರಣದಲ್ಲಿ ಸೋಮವಾರದಿಂದ ಆರಂಭವಾದ ಮೂರು ದಿನಗಳ  ಸಸ್ಯ ಸಂತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ತರಕಾರಿ ಬೆಳೆಗಳಿಗೆ ವಿಷಕಾರಿ ಔಷಧ ಉಪಯೋಗಿಸುವುದು ವಾಡಿಕೆಯಾಗಿದೆ. ಜವಾರಿ ಎನಿಸಿಕೊಂಡ ಜೋಳ ಕೂಡ ಕಲಬೆರಕೆಯಾಗತೊಡಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಸಾವಯವ ಕೃಷಿಯೊಂದಿಗೆ ತರಕಾರಿ ಬೆಳೆದು ಬೇರೆ ರಾಷ್ಟ್ರಕ್ಕೆ ರಪ್ತು ಮಾಡಲು ಎಲ್ಲ ವ್ಯವಸ್ಥೆಗಳು ಇದ್ದಾಗ ಆ ಕಡೆ ಹೆಚ್ಚು ಗಮನ ಹರಿಸದೇ ಇರುವುದು ವಿಷಾದನೀಯ ಸಂಗತಿ. ರೈತರು ಬೆಳೆದ ತರಕಾರಿಯನ್ನು ಬೆಳೆದ ಸ್ಥಳದಲ್ಲಿಯೇ ಯೋಗ್ಯ ದರದಲ್ಲಿ ಖರೀದಿಸುವ ವ್ಯವಸ್ಥೆ ಆಗಬೇಕಿದೆ’ ಎಂದರು.

ADVERTISEMENT

‘ರೈತರು ಕೂಡ ಉತೃಷ್ಟ ಹಾಗೂ ಸಾವಯವ ಕೃಷಿ ಪದ್ಧತಿ ಬಳಸಿಕೊಂಡು ಕಲಬೆರಕೆ ರಹಿತ, ರಾಸಾಯನಿಕ ಬಳಸದ ತರಕಾರಿಗಳನ್ನು ಬೆಳೆಯಿರಿ. ನಶಿಸಿ ಹೋಗುತ್ತಿರುವ ದೇಸಿ ತರಕಾರಿ ಹಾಗೂ ಹಣ್ಣುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಆಗಬೇಕು’ ಎಂದು ಹೇಳಿದರು.

ರಾಜ್ಯಸಭಾ ಸದಸ್ಯ ನಾರಾಯಣ ಬಾಂಡಗೆ ಮಾತನಾಡಿ, ‘ರಾಜ್ಯದಲ್ಲಿಯೇ ಪ್ರಥಮ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಇದಾಗಿದೆ. ರೈತರಿಗೆ ಉಪಯುಕ್ತ ಹಾಗೂ ವಿವಿಧ ತಳಿಗಳ ಸಂಶೋಧನೆಗಳೊಂದಿಗೆ ಮಾರ್ಗದರ್ಶನ ನೀಡಬೇಕು’ ಎಂದರು.

ತೋ.ವಿ.ವಿ. ಕಿರಿಯ ಪ್ರಾಧ್ಯಾಪಕ ವಸಂತ ಗಾಣಿಗೇರ ಸಸ್ಯ ಸಂತೆಯ ಮಳಿಗೆಗಳಲ್ಲಿರುವ ಲಿಂಬೆ, ಸೀತಾಫಲ, ನೆಲ್ಲಿ, ಚಿಕ್ಕು, ಮಾವು, ಪೇರು, ನೇರಳೆ, ಹುಣಸೆ, ಡ್ರ್ಯಾಗನ್ ಹೂವಿನ ಸಸಿಗಳು, ಔಷಧ ಸಸಿಗಳು, ಅಂಜುರ ವಿವಿಧ ತಳಿಯ ಸಸಿಗಳ ಮಾಹಿತಿ ನೀಡಿದರು.

ತೋ.ವಿ.ವಿ. ಕುಲಪತಿ ವಿಷ್ಣುವರ್ಧನ, ಸಂಶೋಧನ ನಿರ್ದೇಶಕ ಎಚ್.ಪಿ.ಮಹೇಶ್ವರಪ್ಪ, ವಿಸ್ತರಣಾ ನಿರ್ದೇಶಕ ಲಕ್ಷ್ಮೀ ನಾರಾಯಣ ಹೆಗಡೆ, ಕುಲಸಚಿವ ಟಿ.ಬಿ.ಅಳ್ಳೊಳ್ಳಿ, ಡೀನ್ ರಾಮಚಂದ್ರ ನಾಯಕ, ಸಂಶೋಧನಾ ನಿರ್ದೇಶಕ ಎಂ.ಎಸ್.ಲೋಕೇಶ, ಆನಂದ, ಸತೀಶ ಪಾಟಿ, ಶಶಿಕುಮಾರ, ಎಚ್.ಎಂ.ಪಲ್ಲವಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.