ಕೂಡಲಸಂಗಮ (ಬಾಗಲಕೋಟೆ ಜಿಲ್ಲೆ) : ‘ಲಿಂಗಾಯತ ಧರ್ಮ ಹೋರಾಟ ನಿಂತಿಲ್ಲ. ಪುನಃ ಸ್ಫೋಟಿಸಲಿದೆ. ಈ ಸಿದ್ಧಾಂತ ಆಶಾವಾದಿಯಾಗಿದ್ದು, ನಿರಾಸೆ ಎಂಬುದು ಇಲ್ಲ. ಎಲ್ಲ ಬಸವ ಭಕ್ತರಿಗೆ ಬಸವಣ್ಣನೇ ಗುರು, ವಚನ ಸಾಹಿತ್ಯವೇ ಗ್ರಂಥ’ ಎಂದು ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿದರು.
ಕೂಡಲಸಂಗಮ ಬಸವ ಧರ್ಮಪೀಠ ಆವರಣದಲ್ಲಿ ಶುಕ್ರವಾರ ಆರಂಭಗೊಂಡ 37ನೇ ಶರಣ ಮೇಳದ ರಾಷ್ಟ್ರೀಯ ಬಸವ ದಳದ 33ನೇ ಅಧಿವೇಶನ ಸಮಾರಂಭದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
‘ಲಿಂಗಾಯತ ಸ್ವತಂತ್ರ ಧರ್ಮ, ಸರ್ಕಾರ ಮಾನ್ಯತೆ ಕೊಡಬೇಕು ಎಂದು ರಾಜ್ಯದ ಪ್ರತಿ ಗ್ರಾಮಗಳಿಗೆ ಹೋಗಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಾವೆಲ್ಲರೂ ಮಾಡಬೇಕು’ ಎಂದರು.
‘ಬಸವಣ್ಣನ ಐಕ್ಯ ಸ್ಥಳ ಕೂಡಲಸಂಗಮ ಎಂದು ಯಾರಿಗೂ ಗೊತ್ತಿರಲಿಲ್ಲ. ಲಿಂಗಾನಂದ ಸ್ವಾಮೀಜಿ, ಮಾತೆ ಮಹಾದೇವಿ ಬಸವಣ್ಣನ ಐಕ್ಯಸ್ಥಳ ಕೂಡಲಸಂಗಮ ಎಂದು ಗುರುತಿಸಿ ಜಾಗತಿಕ ಮಟ್ಟದಲ್ಲಿ ಕೀರ್ತಿ ತಂದರು. ಶರಣ ಮೇಳ ಕಾರ್ಯಕ್ರಮದ ಮೂಲಕ ಎಲ್ಲ ಲಿಂಗಾಯತರನ್ನು ಒಂದು ಕಡೆ ಸೇರಿಸಿದ್ದು ಬಸವ ಧರ್ಮ ಪೀಠ’ ಎಂದರು.
ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಕಾರ್ಯಕ್ರಮ ಉದ್ಘಾಟಿಸಿದರು. ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಸಾನ್ನಿಧ್ಯ ವಹಿಸಿದ್ದರು.
ಸಮಾರಂಭದಲ್ಲಿ ಮಹದೇಶ್ವರ ಸ್ವಾಮೀಜಿ, ಬಸವಯೋಗಿ ಸ್ವಾಮೀಜಿ, ಬಸವಕುಮಾರ ಸ್ವಾಮೀಜಿ, ಬಸವ ಪ್ರಕಾಶ ಸ್ವಾಮೀಜಿ, ರಾಷ್ಟ್ರೀಯ ಬಸವ ದಳ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ ಪಾಲ್ಗೊಂಡಿದ್ದರು.
ಪ್ರಶಸ್ತಿ ಪ್ರದಾನ ಇಂದು
ಶರಣ ಮೇಳ ಕಾರ್ಯಕ್ರಮವನ್ನು ಶನಿವಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸುವರು. ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಸ್ವಾಮಿ ಲಿಂಗಾನಂದ ಶ್ರೀ ಮತ್ತು ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರಿಗೆ ಬಸವಾತ್ಮಜೆ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಂಜೆ 6 ಗಂಟೆಗೆ ಪೀಠಾರೋಹಣ ಸಮಾರಂಭ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.