ಬಾಗಲಕೋಟೆ: ಕಾಂಗ್ರೆಸ್ ಹೈಕಮಾಂಡ್, ರಾಜ್ಯ ನಾಯಕರು ಲೋಕಸಭಾ ಚುನಾವಣೆ ಸ್ಪರ್ಧೆಗೆ ಅವಕಾಶ ನೀಡಿದರೆ ಸರಿ, ಇಲ್ಲದಿದ್ದರೆ ಪಕ್ಷೇತರಾಗಿ ಸ್ಪರ್ಧಿಸಿರಿ. ನಿಮ್ಮೊಂದಿಗೆ ನಾವಿದ್ದೇವೆ ಎಂದು ಮುಖಂಡರು, ಕಾರ್ಯಕರ್ತರು ಶುಕ್ರವಾರ ಚರಂತಿಮಠದಲ್ಲಿ ನಡೆದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ವೀಣಾ ಕಾಶಪ್ಪನವರ ಅಭಿಮಾನಿಗಳ ಬಳಗದಿಂದ ಶುಕ್ರವಾರ ಆಯೋಜಿಸಿದ್ದ ಸ್ವಾಭಿಮಾನಿ ಕಾರ್ಯಕರ್ತರ ಸಭೆಯಲ್ಲಿ ಆಗ್ರಹಿಸಿದರು.
‘ಬೇಕೇ, ಬೇಕೇ ಬೇಕು, ನ್ಯಾಯ ಬೇಕು’ ಎಂದು ಘೋಷಣೆ ಕೂಗಿದ ಬೆಂಬಲಿಗರು, ಐದು ವರ್ಷಗಳ ಕಾಲ ಕ್ಷೇತ್ರದಾದ್ಯಂತ ಸಂಚರಿಸಿ ಸಂಘಟನೆ ಮಾಡಿದವರಿಗೆ ಟಿಕೆಟ್ ನೀಡದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಅಭ್ಯರ್ಥಿ ಬದಲಾಯಿಸಿ ವೀಣಾ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.
ಮುಖಂಡ ವಿಜಯ ಮಹಾಂತೇಶ ಗದ್ದನಕೇರಿ ಮಾತನಾಡಿ, ಬಾಗಲಕೋಟೆ ಜಿಲ್ಲೆ ಟಿಕೆಟ್‌ನಿಂದ ವಂಚಿತವಾಗಿದೆ. ವೀಕ್ಷಕರು ಬಂದಾಗ ಸಂಯುಕ್ತಾ ಪಾಟೀಲ ಇದ್ದರಾ? ಇಲ್ಲದವರಿಗೆ ನೀಡುವುದಾದರೆ, ಅಭಿಪ್ರಾಯ ಕೇಳುವ ಅವಶ್ಯಕತೆ ಏನಿತ್ತು. ಜಿಲ್ಲೆಯ ಅಸ್ಮಿತೆ ಪರಿಗಣಿಸಿ, ವೀಣಾ ಅವರಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು.
ಮುಖಂಡ ಬಲರಾಮ ನಾಯಕ ಮಾತನಾಡಿ, ‘ವಿಜಯಪುರಕ್ಕೆ ನಾನು ಟಿಕೆಟ್ ಕೇಳಿದಾಗ ಇದೇ ಸಚಿವ ಶಿವಾನಂದ ಪಾಟೀಲ ಬಾಗಲಕೋಟೆ ಜಿಲ್ಲಯವರಾಗಿ ಇಲ್ಲೇಕೆ ಟಿಕೆಟ್ ಕೇಳುತ್ತೀರಿ ಎಂದು ಬೈದು ಕಳುಹಿಸಿದ್ದರು. ಈಗ ಅವರ ಮಗಳಿಗೇಕೆ ಇಲ್ಲಿ ಎಂದು ಪ್ರಶ್ನಿಸಿದರು. ಶಾಸಕರು ಅಡ್ಜ್‌ಸ್ಟ್‌ಮೆಂಟ್ ಆಗಿದ್ದಾರೆ. ಟಿಕೆಟ್ ನೀಡಿಕೆಯಲ್ಲಿ ತಪ್ಪಾಗಿದೆ ಎಂದು ಹೇಳಲಿಕ್ಕೆ ಶಾಸಕರಿಗೆ ಏನಾಗಿದೆ ಎಂದರು.
ಮುಖಂಡ ಅಶೋಕ ಲಾಗಲೋಟಿ ಮಾತನಾಡಿ, ಪಕ್ಷಕ್ಕೆ ದುಡಿದವರಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು.
ಹನುಮಂತ ರಾಕುಂಪಿ, ಗಿರೀಶ ಅಂಕಲಗಿ, ಬಸವರಾಜ ಧರ್ಮಂತಿ, ವಿಠ್ಠಲ ತುಂಬರಮಟ್ಟಿ, ಬಸವರಾಜ ಜಮಖಂಡಿ, ಮಲ್ಲಣ್ಣ ಯಲಿಗಾರ, ರಸೂಲ್, ರಜಾಕ ಪಟಗಾರ ಮತ್ತಿತರರು ಮಾತನಾಡಿ, ವಿಧಾನಸಭೆ ಚುನಾವಣೆಯಲ್ಲಿ ನಿಮ್ಮ ಪರವಾಗಿ ವೀಣಾ ಕಾಶಪ್ಪನವರ ಕೆಲಸ ಮಾಡಿದ್ದಾರೆ. ಈಗ ಅವರ ಪರವಾಗಿ ಶಾಸಕರು ಮಾತನಾಡಬೇಕಿತ್ತು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಪೆಟ್ಟು ತಿನ್ನಬೇಕಾಗುತ್ತದೆ. ಟಿಕೆಟ್ ನೀಡಿದ್ದನ್ನು ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ಎಲ್ಲಿ ಹೋಗಿ ಕೇಳಬೇಕು?: ವೀಣಾ
ಬಾಗಲಕೋಟೆ: ಜಿಲ್ಲಾ ನಾಯಕರು ಹೆಸರು ಕಳಿಸಿದ್ದೆವು ಎಂದರೆ ರಾಜ್ಯ ನಾಯಕರು ಹೈಕಮಾಂಡ್ ತೀರ್ಮಾನ ಎನ್ನುತ್ತಾರೆ. ರಾಷ್ಟ್ರ ನಾಯಕರು ನಿಮ್ಮ ಹೆಸರನ್ನೇ ಶಿಫಾರಸು ಮಾಡಿಲ್ಲ ಎಂದರು. ಹಾಗಾದರೆ ನ್ಯಾಯವನ್ನು ಎಲ್ಲಿ ಹೋಗಿ ಕೇಳಬೇಕು ಎಂದು ವೀಣಾ ಕಾಶಪ್ಪನವರ ಪ್ರಶ್ನಿಸಿದರು.
ಕಣ್ಣೀರಿಡುತ್ತಲೇ ಮಾತು ಆರಂಭಿಸಿದ ಅವರು ನನ್ನ ಜಿಲ್ಲೆ ನನ್ನ ಕುಟುಂಬ ನನ್ನ ಮನೆ ಎಂದುಕೊಂಡು ಜಿಲ್ಲೆಯ ಅಭಿವೃದ್ಧಿ ಕನಸು ಕಂಡಿದ್ದೆ. ಸರ್ವೆಯಲ್ಲಿ ನಿಮ್ಮ ಹೆಸರಿಲ್ಲ. ಟಿಕೆಟ್ ಕೊಟ್ಟವರ ಹೆಸರು ಮೊದಲ ಸ್ಥಾನದಲ್ಲಿದೆ ಎಂದಾಗ ನೋವಾಯಿತು. ದುಡಿದವರಿಗೆ ಅನ್ಯಾಯ ಮಾಡಿ ಬೇರೆ ಜಿಲ್ಲೆಯವರಿಗೆ ನೀಡುವುದು ಪ್ರಜಾಪ್ರಭುತ್ವವೇ ಎಂದು ಕೇಳಿದರು.
ಕೊನೆ ಅವಕಾಶ ಮಾಡಿಕೊಡಬೇಕು. ಬೆಂಬಲಿಗರ ತೀರ್ಮಾನಕ್ಕೆ ಬದ್ಧಳಾಗಿದ್ದೇನೆ ಎಂದರು. ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ ಪಕ್ಷಕ್ಕೆ ದುಡಿದವರಿಗೆ ನ್ಯಾಯ ಕೊಡಬೇಕು. ಪತ್ನಿ ಕಾಶಪ್ಪನವರ ಸೊಸೆ ಎಂದು ಕೇಳುವುದಿಲ್ಲ. ಕುಟುಂಬ ರಾಜಕಾರಣ ಮಾಡಲು ಬಂದಿಲ್ಲ. ಯಾವುದೇ ಶಾಸಕರು ವೀಣಾ ಪರವಾಗಿ ಹೇಳಿಲ್ಲ ಎನ್ನುತ್ತಾರೆ. ನನ್ನ ಅಭಿಪ್ರಾಯ ಕೇಳಿದ್ದಾರೆಯೇ ನಾನೂ ಒಬ್ಬ ಶಾಸಕ ಎನ್ನುವುದನ್ನೇ ಮರೆತಿದ್ದಾರೆ ಎಂದು ಟೀಕಿಸಿದರು.
2019ರ ಲೋಕಸಭಾ ಚುನಾವಣೆಯಲ್ಲಿ ಮೋದಿಗೆ ಹೆದರಿದ್ದರು. ನಮಗೆ ಯಾವ ಅಲೆಯೂ ಸಿಗುವುದಿಲ್ಲ. ತಾಕತ್ತು ಪ್ರಶ್ನಿಸುವವರು ನಿಮ್ಮ ತಾಕತ್ತು ತೋರಿಸಿ. ನನ್ನ ತಾಕತ್ತು ತೋರಿಸುತ್ತೇನೆ ಎಂದು ಸವಾಲು ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.