ಬಾಗಲಕೋಟೆ: ರಾಜಕೀಯ ಪಕ್ಷಗಳು ಚುನಾವಣೆ ಗೆಲ್ಲಲು ಸಮಯ, ಸಂದರ್ಭವನ್ನು ಬಳಸಿಕೊಳ್ಳಲು ಮರೆಯುವುದಿಲ್ಲ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಕೂಡ ಬರ ಪರಿಹಾರದ ಮೂಲಕ ಮತಗಳಿಗೆ ‘ಕೈ’ ಹಾಕುವ ಯತ್ನ ಮಾಡಿತು. ಆದರೆ, ಮತದಾರರು ಕೈ ಹಿಡಿದಿದ್ದಾರೆಯೇ ಎಂಬುದು ಯಕ್ಷಪ್ರಶ್ನೆಯಾಗಿದೆ.
ರಾಜ್ಯ ಸರ್ಕಾರವು ಕೇಂದ್ರ ಸರ್ಕಾರ ಬರ ಪರಿಹಾರ ನೀಡಲಿಲ್ಲ ಎಂದು ಟೀಕೆಗಳನ್ನು ಮಾಡುತ್ತಲೇ ಇತ್ತು. ಕೊನೆಗೆ ನ್ಯಾಯಾಲಯದ ಮೊರೆ ಹೋಯಿತು. ನ್ಯಾಯಾಲಯ ಆದೇಶದ ನಂತರ ಕೇಂದ್ರ ಬಿಡುಗಡೆ ಮಾಡಿದ ಪರಿಹಾರವನ್ನು ಮತದಾನ ದಿನವಾದ ಮೇ 7ಕ್ಕೆ ಹಿಂದಿನ ದಿನ ಮೇ 6 ಹಾಗೂ ಮತದಾನದ ದಿನ ರೈತರ ಖಾತೆಗಳಿಗೆ ಬಿಡುಗಡೆ ಮಾಡಿತು.
ಜಿಲ್ಲೆಯಲ್ಲಿ 1.49 ಲಕ್ಷ ರೈತರಿಗೆ ₹195 ಕೋಟಿ ಬಿಡುಗಡೆ ಮಾಡಲಾಗಿದೆ. ಪರಿಹಾರ ದೊರೆತ ರೈತರಿಗೆ ₹7 ಸಾವಿರದಿಂದ ₹35 ಸಾವಿರವರೆಗೂ ಅವರ ಖಾತೆಗಳಿಗೆ ಜಮಾ ಆಗಿತ್ತು. ಅದಕ್ಕಿಂತ ಕೆಲ ದಿನಗಳ ಮೊದಲಷ್ಟೇ ಗೃಹಲಕ್ಷ್ಮಿಯ ಎರಡು ತಿಂಗಳ ಹಣವೂ ಜಮಾ ಆಗಿತ್ತು.
ಮತದಾನದ ಮೇಲೆ ಕಣ್ಣಿಟ್ಟು ಬರ ಪರಿಹಾರವನ್ನು ಮೇ 6ರಂದು ಬಿಡುಗಡೆ ಮಾಡಲಾಗಿದೆ. ಕೇಂದ್ರದ ಹಣ ಎಂದು ಎಲ್ಲಿಯೂ ಹೇಳಲಿಲ್ಲ. ಕೇಂದ್ರದ ಪರಿಹಾರದ ಜೊತೆಗೆ ರಾಜ್ಯವೂ ಸಮಾನವಾಗಿ ಪರಿಹಾರ ಬಿಡುಗಡೆ ಮಾಡಬೇಕಿತ್ತು ಎಂದು ಬಿಜೆಪಿ ನಾಯಕರು ಆಗ್ರಹಿಸುತ್ತಿದ್ದಾರೆ.
ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಮತಗಳ ಮೇಲೆ ಮೊದಲೇ ಕಣ್ಣಿಟ್ಟಿದ್ದ ರಾಜ್ಯ ಸರ್ಕಾರವು ಅದರೊಂದಿಗೆ ಬರ ಪರಿಹಾರ ಸಂದರ್ಭವನ್ನು ಮತಗಳನ್ನಾಗಿ ಪರಿವರ್ತಿಸಿಕೊಳ್ಳಲು ಮುಂದಾಗುವ ರಾಜಕೀಯ ನಡೆಯನ್ನಿಟ್ಟಿದೆ. ಆದರೆ, ಮಹಿಳಾ ಮತದಾರರು ಹೆಚ್ಚಿನ ಪ್ರಮಾಣದಲ್ಲಿ ಮತಗಟ್ಟೆಗೆ ಬರದಿರುವುದು ಸ್ವಲ್ಪ ನಿರಾಸೆಯುಂಟು ಮಾಡಿದೆ.
ರಾಜ್ಯ ಗ್ಯಾರಂಟಿ ಜಾರಿಗಳ ಜೊತೆಗೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತರುವ ಗ್ಯಾರಂಟಿ ಯೋಜನೆಯ ಕಾರ್ಡ್‌ಗಳನ್ನು ಮನೆ, ಮನೆಗೆ ವಿತರಿಸಲಾಗಿದೆ. ಅವೂ ಮತ ಪರಿವರ್ತನೆಗೆ ಕಾರಣವಾಗಬಹುದು ಎಂಬ ಲೆಕ್ಕಾಚಾರವಿದೆ. ಇದನ್ನರಿತ ಬಿಜೆಪಿ ಸಹ ಮೋದಿ ಗ್ಯಾರಂಟಿಯ ಅಸ್ತ್ರಗಳನ್ನೂ ಪ್ರಯೋಗಿಸಿ, ಕಾರ್ಡ್‌ಗಳನ್ನು ವಿತರಣೆ ಮಾಡಲಾಗಿದೆ.
ಒಟ್ಟಿನಲ್ಲಿ ಗೆಲ್ಲಲು ಎರಡೂ ಪಕ್ಷಗಳು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿವೆ. ಗೆಲುವೊಂದೇ ಮಾನದಂಡವಾಗಿದ್ದರಿಂದ ಜಾತಿ, ಉಪಜಾತಿ, ಪರಿಹಾರ, ಗ್ಯಾರಂಟಿ ಸೇರಿದಂತೆ ಯಾವುದೇ ಅಸ್ತ್ರಗಳನ್ನು ಪ್ರಯೋಗಿಸಲು ಹಿಂದೆ ಬಿದ್ದಿಲ್ಲ. ಆದರೆ, ಮತದಾರನ ಗುಟ್ಟು ಅರಿಯಲು ಜೂನ್ 4ರವರೆಗೆ ಕಾಯಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.