ಬಾದಾಮಿ: ಮಹಾಶಿವರಾತ್ರಿ ಆಚರಣೆ ಅಂಗವಾಗಿ ಶುಕ್ರವಾದ ಭಕ್ತರು ಶ್ರದ್ಧಾಭಕ್ತಿಯಿಂದ ಇಲ್ಲಿನ ಪ್ರಾಚೀನ ಶಿವ ದೇವಾಲಯಗಳಿಗೆ ದರ್ಶನ ನೀಡಿ ಶಿವಲಿಂಗವನ್ನು ಪೂಜಿಸಿದರು.
ಪಟ್ಟಣದಲ್ಲಿರುವ ಮಾಲೆಗಿತ್ತಿ ದೇವಾಲಯ, ಜಂಬುಲಿಂಗ ದೇವಾಲಯ, ವಿರೂಪಾಕ್ಷ, ಮಲ್ಲಿಕಾರ್ಜುನ ಮತ್ತು ಮಾರುತಿ ದೇವಾಲಯ ಬಳಿಯ ಈಶ್ವರ ಶಿವ ದೇವಾಲಯಗಳಿಗೆ ಭಕ್ತರು ಭೇಟಿ ನೀಡಿದರು.
ಶಿವಯೋಗದ ಆಚರಣೆ ಅಂಗವಾಗಿ ಬೆಳಿಗ್ಗೆಯಿಂದ ಉಪವಾಸ ವ್ರತ ಕೈಗೊಂಡು ನಂತರ ಸ್ನಾನ ಮಾಡಿ ದೇವಾಲಯಗಳಿಗೆ ತೆರಳಿ ಶಿವಲಿಂಗಕ್ಕೆ ದ್ರಾಕ್ಷಿ, ಬಾಳೆಹಣ್ಣು, ಖರ್ಜುರ ಮತ್ತು ಹಾಲು ನೈವೇದ್ಯ ಮಾಡಿದರು. ನಂತರ ಹಣ್ಣು, ಹಾಲು ಸೇವಿಸುವ ಮೂಲಕ ಇಂದಿನ ಉಪವಾಸ ಮುಗಿಸಿದರು.
ಏಕಶಿಲೆ ಬೆಟ್ಟದ ಮೇಲಿರುವ ಮಾಲೆಗಿತ್ತಿ ಶಿವಲಿಂಗ ದೇವಾಲಯಕ್ಕೆ ಸಂಜೆ 5ರಿಂದ ರಾತ್ರಿ 8ರವರೆಗೂ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು.
ಪಟ್ಟದಕಲ್ಲು ಮತ್ತು ಸುತ್ತಲಿನ ಭಕ್ತರು ಪಟ್ಟದಕಲ್ಲಿನ ವಿರೂಪಾಕ್ಷ ದೇವಾಲಯ ಮತ್ತು ಬಸವಣ್ಣ ಮೂರ್ತಿಗೆ, ಹಳೇ ಮಹಾಕೂಟೇಶ್ವರ ಮತ್ತು ಹೊಸ ಮಹಾಕೂಟೇಶ್ವರ ದೇವಾಲಯಕ್ಕೂ ಭಕ್ತರು ಬಂದು ಪೂಜೆ ಸಲ್ಲಿಸಿದರು.
ವೀರಶೈವ ಶಿವಯೋಗ ಮಂದಿರದಲ್ಲಿ ಶುಕ್ರವಾರ ರಾತ್ರಿ ನಾಡಿನ ವಿವಿಧ ಸಂಗೀತ ಕಲಾವಿದರಿಂದ ಸಂಗೀತ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.