ಬಾದಾಮಿ: ನಿಸರ್ಗದ ಹಸಿರು ಸೌಂದರ್ಯದ ಬೃಹತ್ ಬೆಟ್ಟಗಳ ಮಧ್ಯೆ ಕಣಿವೆ ಪ್ರದೇಶದಲ್ಲಿ ಚಾಲುಕ್ಯ ಸಾಮ್ರಾಜ್ಯದ ದೊರೆಗಳು ಶೈವ ಸಂಪ್ರದಾಯದ ಮಹಾಕೂಟೇಶ್ವರ ದೇವಾಲಯವನ್ನು ನಿರ್ಮಿಸಿದ್ದಾರೆ.
ಇದೇ ವೈಶಾಖ ಶುದ್ಧ ಬುದ್ಧ ಪೌರ್ಣಿಮೆ ದಿನ, ಮೇ 23ರಂದು ಹೂವಿನ ತೇರು, ಮೇ 24ರಂದು ದೊಡ್ಡ ರಥೋತ್ಸವ ಸಂಭ್ರಮದಿಂದ ನಡೆಯಲಿದೆ.
ಮಹಾಕೂಟೇಶ್ವರ ದೇವಾಲಯದ ಟ್ರಸ್ಟ್ ಮತ್ತು ಅರ್ಚಕರು ರಥೋತ್ಸವಕ್ಕೆ ಸಕಲ ಸಿದ್ಧತೆ ಕೈಗೊಂಡಿದ್ದಾರೆ.
ಚಾಲುಕ್ಯ ದೊರೆ ಮಂಗಳೇಶ ಕಳಚೂರಿ ವಂಶದ ದೊರೆ ಬುದ್ಧವರ್ಮನನ್ನು ಯುದ್ಧದಲ್ಲಿ ಸೋಲಿಸಿ ಎಲ್ಲ ಸಂಪತ್ತನ್ನು ಮಹಾಕೂಟೇಶ್ವರ ದೇವಾಲಯಕ್ಕೆ ಅರ್ಪಿಸಿದನೆಂದು ಶಾಸನದ ಮೂಲಕ ತಿಳಿಯುತ್ತದೆ.
ಯುದ್ಧದ ವಿಜಯದ ಸಂಕೇತವಾಗಿ ಕ್ರಿ.ಶ. 601ರಲ್ಲಿ ಸಿದ್ಧಾರ್ಥ ವೈಶಾಖ ಪೌರ್ಣಿಮೆ ದಿನ ಶಿಲಾಸ್ತಂಭದಲ್ಲಿ ಶಾಸನವನ್ನು ಬರೆಯಿಸಿ ಧರ್ಮಸ್ತಂಭವನ್ನು ದೇವಾಲಯದ ಎದುರಿಗೆ ಸ್ಥಾಪಿಸಿದನು. ಈ ಶಾಸನ ಸ್ತಂಭವು ಈಗ ವಿಜಯಪುರದ ಮ್ಯುಜಿಯಂನಲ್ಲಿದೆ. ಇದೇ ಕುರುಹಿಗೆ ಪ್ರತಿವರ್ಷ ವೈಶಾಖ ಶುದ್ಧ ಪೌರ್ಣಿಮೆ ದಿನ ರಥೋತ್ಸವ ನಡೆಯುತ್ತದೆ.
6ನೇ ಶತಮಾನದಿಂದ 8ನೇ ಶತಮಾನದ ವರೆಗೆ ಚಾಲುಕ್ಯ ದೊರೆಗಳಾದ ಮೊದಲನೆ ಕೀರ್ತಿವರ್ಮ, ಮಂಗಳೇಶ ಹಾಗೂ ವಿಜಯಾದಿತ್ಯ ಮಹಾಕೂಟೇಶ್ವರ ದೇವಾಲಯಗಳ ಸುತ್ತ ಅನೇಕ ಈಶ್ವರ ದೇವಾಲಯಗಳನ್ನು ನಿರ್ಮಿಸಿ ಪುನರುಜ್ಜೀವನಗೊಳಿಸುತ್ತ ಶೈವ ಧರ್ಮಕ್ಕೆ ಪ್ರಾಮುಖ್ಯತೆ ಕೊಟ್ಟಿರುವುದಕ್ಕೆ ಇಲ್ಲಿನ ದೇವಾಲಯಗಳು ಸಾಕ್ಷಿಯಾಗಿವೆ ಎಂದು ಇತಿಹಾಸ ತಜ್ಞರು ಉಲ್ಲೇಖಿಸಿದ್ದಾರೆ.
ಮಹಾಕೂಟೇಶ್ವರ ದೇವಾಲಯಗಳ ಪರಿಸರದ ಸುತ್ತ 20ಕ್ಕೂ ಅಧಿಕ ದೇವಾಲಯಗಳಿದ್ದವು. ಕಾಲನ ಹೊಡೆತಕ್ಕೆ ಕೆಲವು ಚಿಕ್ಕ ದೇವಾಲಯಗಳು ಶಿಥಿಲವಾಗಿವೆ. ಸಂಗಮೇಶ್ವರ, ಮಲ್ಲಿಕಾರ್ಜುನ, ವಿರೂಪಾಕ್ಷ, ಪಿನಾಕಪಾಣಿ ಮತ್ತು ಶಾರದಾ ಮಂದಿರ ಹೀಗೆ 10ಕ್ಕೂ ಅಧಿಕ ದೇವಾಲಯಗಳನ್ನು ವೀಕ್ಷಿಸಬಹುದು.
ಮಹಾಕೂಟೇಶ್ವರ ದೇವಾಲಯದ ಕೆಳಗಿನ ಭಿತ್ತಿಯಲ್ಲಿ ರಾಮಾಯಣ, ಮಹಾಭಾರತದ ಚಿಕ್ಕ ಚಿಕ್ಕ ಶಿಲಾ ಮೂರ್ತಿಗಳನ್ನು ಕಾಣಬಹುದು. ಮಹಾದ್ವಾರದ ಎದುರಿಗೆ ಗಣೇಶ ಮೂರ್ತಿ, ಬಸವಣ್ಣ, ಅರ್ಧನಾರೀಶ್ವರ, ಭೂವರಾಹ, ಹರಿಹರ, ನರಸಿಂಹ, ಲಕುಲೀಶ, ನಂದಿ ಮೇಲೆ ಕುಳಿತ ಶಿವಪಾರ್ವತಿ, ಭಗ್ನಗೊಂಡ ಲಜ್ಜಾಗೌರಿ, ವೀರಭದ್ರ ಮೂರ್ತಿಗಳಿವೆ.
ದೇವಾಲಯದ ಆವರಣದಲ್ಲಿ ಕಾಶಿ ಪುಷ್ಕರಣಿ ಮತ್ತು ಶಿವ ಪುಷ್ಕರಣಿ ಇದೆ. ಶಿವ ಪುಷ್ಕರಣಿಯಲ್ಲಿ ಚತುರ್ಮುಖ ಬ್ರಹ್ಮನ ಶಿವಲಿಂಗ ಮೂರ್ತಿಯಿದೆ. ಪುಷ್ಕರಣಿ ಒಳಗೆ ಈಜಿ ಹೋದರೆ ಶಂಕರಲಿಂಗ ಚಿಕ್ಕ ದೇವಾಲಯವಿದೆ.
ಮಹಾಕೂಟದಲ್ಲಿ ದ್ರಾವಿಡ, ನಾಗರ ಮತ್ತು ಕದಂಬ ಶೈಲಿಯ ಮೂರು ತೆರನಾದ ಗೋಪುರಗಳ ದೇವಾಲಯಗಳ ಸಮುಚ್ಚಯವಿರುವುದು ವಿಶೇಷ.
ಮಹಾಕೂಟಕ್ಕೆ ಸರಿಯಾಗಿ ರಸ್ತೆ ಸಾರಿಗೆ ಸೌಲಭ್ಯವಿಲ್ಲ. ಪ್ರವಾಸಿಗರು ಆಟೊ ಮೂಲಕವೇ ಹೋಗಬೇಕು. ಪ್ರತಿ ಅಮಾವಾಸ್ಯೆಗೆ ಭಕ್ತರು ಇಲ್ಲಿಗೆ ಬರುತ್ತಾರೆ.
ಮೇ 24ರಂದು ನಡೆಯುವ ದೊಡ್ಡ ರಥೋತ್ಸವಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.