ADVERTISEMENT

ಬಾಗಲಕೋಟೆ | ಜೋಳ, ಅಕ್ಕಿ ನೀರು ಪಾಲು; ತಪ್ಪದ ಸಂಕಷ್ಟ

ಘಟಪ್ರಭಾ ನದಿಯ ನೆರೆಯಲ್ಲಿ ಮುದುಡಿದ ಗ್ರಾಮಸ್ಥರ ಬದುಕು

ಪ್ರಜಾವಾಣಿ ವಿಶೇಷ
Published 31 ಜುಲೈ 2024, 7:19 IST
Last Updated 31 ಜುಲೈ 2024, 7:19 IST
ಮುಧೋಳ ತಾಲ್ಲೂಕಿನ ಮಳಲಿ ಗ್ರಾಮಕ್ಕೆ ನೀರು ನುಗ್ಗಿರುವುದರಿಂದ ಮಂಗಳವಾರ ಗ್ರಾಮಸ್ಥರು ಸಾಮಾನುಗಳನ್ನು ಸಾಗಿಸುತ್ತಿರುವುದು
ಮುಧೋಳ ತಾಲ್ಲೂಕಿನ ಮಳಲಿ ಗ್ರಾಮಕ್ಕೆ ನೀರು ನುಗ್ಗಿರುವುದರಿಂದ ಮಂಗಳವಾರ ಗ್ರಾಮಸ್ಥರು ಸಾಮಾನುಗಳನ್ನು ಸಾಗಿಸುತ್ತಿರುವುದು   

ಬಾಗಲಕೋಟೆ: ‘ಜೋಳ, ಅಕ್ಕಿ, ಕಾಳು ಬೇಳೆ ನೀರು ಪಾಲಾಗಿವೆ. ಅಡುಗೆ ಮಾಡಾಕೂ ಏನು ಉಳಿದಿಲ್ಲ. ಎರಡು, ಮೂರು ವರ್ಷಕ್ಕೊಮ್ಮೆ ಇದೇ ಗೋಳಾಗಿದೆ’ ಎಂದು ಮುಧೋಳ ತಾಲ್ಲೂಕಿನ ಮಳಲಿ ಗ್ರಾಮದ ಸವಿತಾ ಸೂಗಾವಿ ಘಟಪ್ರಭಾ ನದಿಯಿಂದ ಉಂಟಾದ ಸಂಕಷ್ಟ ಬಿಚ್ಚಿಟ್ಟರು.

ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿದಾಗ ಮಳಲಿಯ ಅರ್ಧ ಗ್ರಾಮ ಜಲಾವೃತವಾಗಿತ್ತು. ನೀರು ದಾಟಿಕೊಂಡು, ಮುಂದೆ ನಿರ್ಮಿಸಿರುವ ಸೇತುವೆ ದಾಟಿಕೊಂಡು ಗ್ರಾಮದೊಳಕ್ಕೆ ಬರಬೇಕು.

‘ಅಕ್ಕ–ಪಕ್ಕದ ಮನೆಯವರು ತಮ್ಮ ಮನೆಯಲ್ಲಿದ್ದ ಟ್ರಜರಿ, ಫ್ರಿಡ್ಜ್, ಟಿವಿ ಮುಂತಾದ ವಸ್ತುಗಳನ್ನು ಮನೆಯ ಮೇಲಿನ ಕೊಠಡಿಗೆ ಸಾಗಿಸಿದ್ದಾರೆ. ಇನ್ನು ಕೆಲವರು ಊರಿನ ಮುಳುಗಡೆಯಾಗದ ಮನೆಗಳಲ್ಲಿ, ಸಂಬಂಧಿಕರ ಮನೆಗಳಲ್ಲಿ ಇರಿಸಿದ್ದಾರೆ. ರಾತ್ರಿ ಬಹಳಷ್ಟು ಜನರು ದೇವಸ್ಥಾನದ ಆವರಣದಲ್ಲಿ ಮಲಗುತ್ತಾರೆ’ ಎಂದು ವಿವರಿಸಿದರು.

ADVERTISEMENT

1994ರಿಂದ ಹಲವಾರು ಬಾರಿ ಈ ಗ್ರಾಮಕ್ಕೆ ಪ್ರವಾಹ ಬಂದಿದೆ. ಆದರೆ, ಪೂರ್ಣ ಪ್ರಮಾಣದಲ್ಲಿ ಜನರ ಸ್ಥಳಾಂತರವಾಗಿಲ್ಲ. 1994ರಲ್ಲಿ ಮುಳುಗಡೆಯಾದ ಸಂತ್ರಸ್ತರಿಗೆ 2006ರಲ್ಲಿ ಎರಡು ಕೊಠಡಿಗಳ 174 ಮನೆಗಳನ್ನು ಆಶ್ರಯ ಮನೆಗಳನ್ನು ನಿರ್ಮಿಸಿ ಕೊಡಲಾಗಿದೆ. ಸಣ್ಣ ಮನೆ, ಮೂಲಸೌಲಭ್ಯಗಳಿಲ್ಲ ಎಂದು ದೂರುವ ಬಹುತೇಕ ಜನರು ಅಲ್ಲಿಗೆ ಸ್ಥಳಾಂತರಗೊಂಡಿಲ್ಲ.

‘ಇಡೀ ಗ್ರಾಮವನ್ನೇ ಸ್ಥಳಾಂತರ ಮಾಡಬೇಕು ಎಂದು ಹಲವಾರು ಬಾರಿ ಮನವಿ ಮಾಡಿಕೊಂಡಿದ್ದೇವೆ. ಪ್ರವಾಹ ಬಂದಾಗ ಭೇಟಿ ನೀಡುವ ಜನಪ್ರತಿನಿಧಿಗಳು, ಅಧಿಕಾರಿಗಳು ಭರವಸೆ ನೀಡುತ್ತಾರೆ. ನಂತರ ಮರಳಿ ಇತ್ತ ತಲೆ ಹಾಕುವುದಿಲ್ಲ. ಮತ್ತೆ ಪ್ರವಾಹ ಬಂದಾಗಲೇ ಬರುತ್ತಾರೆ’ ಎಂದು ಗ್ರಾಮಸ್ಥರು ದೂರಿದರು.

ಗ್ರಾಮದ ಗ್ರಾಮ ಪಂಚಾಯಿತಿ, ಕಲ್ಮೇಶ್ವರ ಪ್ರಾಥಮಿಕ, ಪ್ರೌಢಶಾಲೆ, ಅಂಚೆ ಕಚೇರಿ, ದನದ ದವಾಖಾನೆ ನೀರಿನಿಂದ ಸುತ್ತುವರೆದಿವೆ. ಬಟ್ಟೆ ತೊಳೆಯುವುದು, ಪಾತ್ರೆಗಳನ್ನು ತಿಕ್ಕುವ ಕೆಲಸ ಮನೆ ಬಾಗಿಲಿಗೆ ಬಂದಿರುವ ನೀರಿನಲ್ಲೇ‌ ಮಾಡುತ್ತಿದ್ದಾರೆ. ನೀರು ಹೆಚ್ಚಾದರೆ ಮುಂದೆ ಹೇಗೆ? ಎಂಬ ಆತಂಕ ಅವರನ್ನು ಕಾಡುತ್ತಿದೆ.

ಮಲಕಾರಿ ಕೋಟೆ
ಮುಧೋಳ ತಾಲ್ಲೂಕಿನ ಮಳಲಿ ಗ್ರಾಮಕ್ಕೆ ಘಟಪ್ರಭಾ ನೀರು ನುಗ್ಗಿರುವುದು
ಶಾಲೆ ಮುಳುಗಿರುವುದರಿಂದ ಎರಡು ದಿನಗಳಿಂದ ಶಾಲೆಗೆ ರಜೆ ನೀಡಿದ್ದಾರೆ. ಇನ್ನು ಎಷ್ಟು ದಿನ ಗೊತ್ತಿಲ್ಲ
–ವಿದ್ಯಾರ್ಥಿ ಮಲಕಾರಿ ಕೋಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.