ಹುನಗುಂದ: ತಾಲ್ಲೂಕಿನ ಮಲಪ್ರಭಾ ನದಿ ತೀರ ಪ್ರದೇಶದ ಜಮೀನುಗಳಿಗೆ ನೀರು ನುಗ್ಗಿದ್ದು, ಜನರಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಕಳೆದ ಎರಡು ಮೂರು ದಿನಗಳಿಂದ ಮಲಪ್ರಭಾ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ.
ನದಿ ತೀರದ ಜಮೀನುಗಳಲ್ಲಿ ಬೆಳೆದಿದ್ದ ಕಬ್ಬು, ಗೋವಿನ ಜೋಳ, ತೊಗರಿ ಸೇರಿದಂತೆ ಇತರ ಬೆಳೆಗಳಿಗೆ ನೀರು ನುಗ್ಗಿದೆ. ಜಮೀನುಗಳಲ್ಲಿ ಅಳವಡಿಸಿರುವ ಪಂಪಸೆಟ್‌ಗಳನ್ನು ಟ್ರ್ಯಾಕ್ಟರ್ ಮತ್ತು ಎತ್ತಿನ ಬಂಡಿಗಳ ಸಹಾಯದಿಂದ ಸುರಕ್ಷಿತ ಸ್ಥಳಕ್ಕೆ ತೆಗದುಕೊಂಡು ಹೋಗುತ್ತಿದ್ದಾರೆ.
ಈಗ ಜಮೀನಿನಲ್ಲಿ ಗೋವಿನ ಜೋಳ ಬಹುತೇಕ ಕಟಾವಿಗೆ ಬಂದಿದೆ. ಅದೇ ರೀತಿ ತೊಗರಿ ಬೆಳೆ ಹೂವು ಮತ್ತು ಕಾಯಿ ಕಟ್ಟುವ ಹಂತದಲ್ಲಿದೆ. ಕಬ್ಬಿನ ಬೆಳೆ ನೀರಿನಲ್ಲಿ ನಿಂತಿದೆ. ಇಂತಹ ಸಮಯದಲ್ಲಿ ಎರಡು ಮೂರು ದಿನಗಳಿಂದ ಬೆಳೆಗಳಲ್ಲಿ ನೀರು ನಿಂತಿದೆ. ಎಲ್ಲಿ ಬೆಳೆ ಹಾಳಾಗುತ್ತದೋ ಎಂಬ ಭಯ ಕಾಡುತ್ತಿದೆ ಎಂದು ಬೆಳೆಗಲ್ಲ ಗ್ರಾಮದ ಜುಮ್ಮಣ್ಣ ಅಸಹಾಯಕತೆ ವ್ಯಕ್ತಪಡಿಸಿದರು.
‘ಮಲಪ್ರಭಾ ನದಿಯಲ್ಲಿ ನೀರು ಹೆಚ್ಚಾಗಿರುವುದರ ಬಗ್ಗೆ ನದಿ ತೀರದ ಜನರಿಗೆ ಜಾಗೃತೆ ವಹಿಸುವಂತೆ ಸೂಚಿಸಲಾಗಿದೆ. ಗ್ರಾಮ ಆಡಳಿತಾಧಿಕಾರಿ ಸ್ಥಳದಲ್ಲಿದ್ದು ಮಾಹಿತಿ ನೀಡುತ್ತಿದ್ದಾರೆ. ಒಂದರೆಡು ದಿನಗಳಲ್ಲಿ ನದಿ ನೀರು ಕಡಿಮೆಯಾಗುತ್ತದೆ’ ಎಂದು ತಹಶೀಲ್ದಾರ್ ನಿಂಗಪ್ಪ ಬಿರಾದಾರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.