ಬಾದಾಮಿ: ಪಟ್ಟಣದಲ್ಲಿರುವ ಚಾಲುಕ್ಯರ ಸ್ಮಾರಕಗಳಾದ ಗುಹಾಂತರ ದೇವಾಲಯ, ಭೂತನಾಥ ಗುಡಿ ಸಂಕೀರ್ಣ, ಬೆಟ್ಟದ ಮೇಲಿನ ದೇವಾಲಯಗಳು ಮತ್ತು ಅಗಸ್ತ್ಯತೀರ್ಥ ಹೊಂಡವನ್ನು ವೀಕ್ಷಿಸಲು ಭಾನುವಾರ ಮಹಿಳೆಯರು ಕುಟುಂಬ ಸಮೇತರಾಗಿ ಭೇಟಿ ನೀಡಿದರು.
ರಾಜ್ಯ ಸರ್ಕಾರವು ಶಕ್ತಿ ಯೋಜನೆಯಡಿ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ನೀಡಿರುವುದರಿಂದ ತಾಲ್ಲೂಕಿನ ಧಾರ್ಮಿಕ ಕ್ಷೇತ್ರಗಳಾದ ಬನಶಂಕರಿ, ಮಹಾಕೂಟ, ಶಿವಯೋಗಮಂದಿರ, ಕಾಟಾಪೂರ ಶಿರಡಿ ಸಾಯಿಬಾಬಾ ಮಂದಿರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭೇಟಿ ನೀಡಿದರು.
‘ಬಾದಾಮಿ ಸಮೀಪದ ಪಟ್ಟದಕಲ್ಲು ಮತ್ತು ಐಹೊಳೆ ಸ್ಮಾರಕಗಳನ್ನು ಹೆಚ್ಚು ಜನ ವೀಕ್ಷಿಸಿದರು. ಶನಿವಾರ ಮತ್ತು ಭಾನುವಾರ 2,500ಕ್ಕೂ ಅಧಿಕ ಪ್ರವಾಸಿಗರ ಸ್ಮಾರಕಗಳನ್ನು ವೀಕ್ಷಿಸಿದ್ದು, ಇದರಲ್ಲಿ ಮಹಿಳೆಯರ ಸಂಖ್ಯೆ ಅಧಿಕವಾಗಿದೆ. ಉಳಿದ ದಿನಗಳಲ್ಲಿ ಪ್ರೇಕ್ಷಕರ ಸಂಖ್ಯೆ ಕಡಿಮೆ ಇರುವುದು’ ಎಂದು ಪ್ರವಾಸಿ ಮಾರ್ಗದರ್ಶಿ ಚಂದ್ರು ಕಟಗೇರಿ ಹೇಳಿದರು.
‘ಕುಟುಂಬ ಸಮೇತ ಬಸ್ಸಿಗೆ ಬಂದೀವಿ. ಒಮ್ಮಿಯೂ ಇಲ್ಲಿಗೆ ಬಂದಿದ್ದಿಲ್ಲ. ಹೆಣ್ಣುಮಕ್ಕಳಿಗೆ ಬಸ್ ಪ್ರಯಾಣ ಉಚಿತ ಮಾಡಿದ್ದು ಅನುಕೂಲ ಆಗೈತ್ರಿ. ಬನಶಂಕರಿ ದೇವಿ ದರ್ಶನ ಪಡಕೊಂಡು, ಬಾದಾಮಿ ಬಸದಿ ನೋಡಾಕ ಬಂದೀವಿರಿ’ ಎಂದು ಕವಿತಾಳ ಗ್ರಾಮದ ಬಸಲಿಂಗಮ್ಮ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.