ADVERTISEMENT

ರಾಂಪುರ | ರಸ್ತೆಯಲ್ಲೇ ವಾರದ ಸಂತೆ: ಸಂಚಾರಕ್ಕೆ ಅಡಚಣೆ

ಸ್ಥಳಾಂತರಕ್ಕೆ ಲೋಕೋಪಯೋಗಿ ಇಲಾಖೆ ಸೂಚನೆ

ಪ್ರಕಾಶ ಬಾಳಕ್ಕನವರ
Published 6 ಜುಲೈ 2024, 5:55 IST
Last Updated 6 ಜುಲೈ 2024, 5:55 IST
ನಾಯನೇಗಲಿ ಗ್ರಾಮದಲ್ಲಿ ರಸ್ತೆಯ ಮೇಲೆಯೇ ವಾರದ ಸಂತೆ ನಡೆಯುತ್ತಿದೆ
ನಾಯನೇಗಲಿ ಗ್ರಾಮದಲ್ಲಿ ರಸ್ತೆಯ ಮೇಲೆಯೇ ವಾರದ ಸಂತೆ ನಡೆಯುತ್ತಿದೆ   

ರಾಂಪುರ: ಸಮೀಪದ ನಾಯನೇಗಲಿ ಗ್ರಾಮದಲ್ಲಿ ಪ್ರತಿ ಗುರುವಾರ ವಾರದ ಸಂತೆ ನಡೆಯುತ್ತಿದ್ದು, ಎಲ್ಲ ವ್ಯಾಪಾರವೂ ಮುಖ್ಯ ರಸ್ತೆಯಲ್ಲೇ ನಡೆಯುತ್ತದೆ.

ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಮನಹಳ್ಳಿ-ಕೂಡಲಸಂಗಮ ಜಿಲ್ಲಾ ಮುಖ್ಯ ರಸ್ತೆಯಲ್ಲೇ ಸಂತೆ ನಡೆಯುತ್ತಿರುವುದರಿಂದ ವಾಹನಗಳ ಓಡಾಟಕ್ಕೆ ಬಹಳಷ್ಟು ಅಡಚಣೆಯಾಗುತ್ತದೆ. ಟ್ರಾಫಿಕ್ ಜಾಮ್ ಆಗಿ ಜನರಿಗೂ ಸಂತೆಯಲ್ಲಿ ಖರೀದಿಗೆ ತೊಂದರೆಯಾಗುತ್ತಿದೆ.

ತರಕಾರಿ ಮಾರುವವರು, ಬಟ್ಟೆ ಅಂಗಡಿಗಳು ಹಾಗೂ ಇತರ ವ್ಯಾಪಾರಸ್ಥರು ರಸ್ತೆಯ ಇಕ್ಕೆಲಗಳಲ್ಲಿ ಡಾಂಬರ್‌ ರಸ್ತೆಗೆ ತಾಗಿ ಕುಳಿತೇ ವ್ಯಾಪಾರ ನಡೆಸುತ್ತಾರೆ. ಜನರು ರಸ್ತೆಯಲ್ಲಿ ನಿಂತೇ ಖರೀದಿ ಮಾಡಬೇಕಾಗುತ್ತದೆ. ಹೀಗಾಗಿ ಬಸ್, ಟ್ರ್ಯಾಕ್ಟರ್, ಟ್ರಕ್ ಮತ್ತಿತರ ವಾಹನಗಳು ಸಂಚರಿಸಲು ಅಡೆತಡೆ ಎದುರಾಗಿದೆ.

ADVERTISEMENT

ಅನೇಕ ಸಲ ವಾಹನ ಓಡಿಸುವವರು ಮತ್ತು ವ್ಯಾಪಾರಸ್ಥರ ನಡುವೆ ಜಗಳಗಳಾಗುತ್ತವೆ. ವಸ್ತುಗಳನ್ನು ಖರೀದಿಸುವಾಗ ಜನರಿಗೆ ವಾಹನಗಳು ತಾಗಿ ವಾಗ್ವಾದ ಉಂಟಾಗುತ್ತದೆ. ಹೀಗಾಗಿ ಪ್ರತಿ ಗುರುವಾರ ಮನಹಳ್ಳಿ-ಕೂಡಲಸಂಗಮ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಹಾಗೂ ಸವಾರರಿಗೆ ಕಿರಿಕಿರಿ ಉಂಟಾಗುತ್ತಿದೆ.

ನಾಯನೇಗಲಿ ಸುತ್ತಮುತ್ತ ಬಹಳಷ್ಟು ಹಳ್ಳಿಗಳಿದ್ದು, ಗುರುವಾರದ ಸಂತೆಗೆ ಬಹಳ ಜನ ಬರುತ್ತಾರೆ. ಹೀಗಾಗಿ ಗದ್ದಲವುಂಟಾಗುವುದು ಸಹಜ. ಆದರೆ ಮುಖ್ಯ ರಸ್ತೆಯಲ್ಲೇ ಎಲ್ಲವೂ ನಡೆಯುವುದರಿಂದ ತೊಂದರೆಯಂತೂ ತಪ್ಪಿದ್ದಲ್ಲ. ಮಕ್ಕಳು, ಮಹಿಳೆಯರು ಅತ್ತ ಇತ್ತ ಓಡಾಡಿ ಸಂತೆ ಮಾಡುತ್ತಿರುವಾಗ ಯಾವುದಾದರೂ ವಾಹನ ತಗುಲಿ ಅವಘಡ ಸಂಭವಿಸುವ ಸನ್ನಿವೇಶ ಇರುತ್ತದೆ. ಹೀಗಾಗಿ ಸಂತೆಯ ಜಾಗವನ್ನು ಬೇರೆಡೆ ಸ್ಥಳಾಂತರಿಸಬೇಕೆನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ

ಲೋಕೋಪಯೋಗಿ ಇಲಾಖೆಗೆ ದೂರು: ಪ್ರತಿ ವಾರ ರಸ್ತೆಯ ಮೇಲೆಯೇ ಸಂತೆ ನಡೆಯುವುದರಿಂದ ತೊಂದರೆಯಾಗುತ್ತಿರುವುದರ ಬಗ್ಗೆ ಅನೇಕ ದೂರುಗಳು ಸಾರ್ವಜನಿಕರು ಮತ್ತು ಗ್ರಾಮಸ್ಥರಿಂದ ಲೋಕೋಪಯೋಗಿ ಇಲಾಖೆಗೆ ಬಂದಿರುವುದಾಗಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ರಸ್ತೆ ಸಾರಿಗೆ ಸಂಸ್ಥೆಯವರಿಂದಲೂ ದೂರು ಸಲ್ಲಿಕೆಯಾಗಿದೆ.

ಗ್ರಾಮ ಪಂಚಾಯಿತಿಗೆ ಪತ್ರ: ದೂರುಗಳನ್ನು ಆಧರಿಸಿ ಲೋಕೋಪಯೋಗಿ ಇಲಾಖೆಯ ಬಾಗಲಕೋಟೆ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಗುರುವಾರವೇ ನಾಯನೇಗಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಪತ್ರ ಬರೆದು ಸುಗಮ ಸಂಚಾರಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಮತ್ತು ಯಾವುದೇ ಅವಘಡಗಳು ಸಂಭವಿಸದಿರಲು ಸಂತೆ ಜಾಗವನ್ನು ಬೇರೆಡೆ ಸ್ಥಳಾಂತರಿಸುವಂತೆ ಸೂಚಿಸಿದ್ದಾರೆ.

ನಾಯನೇಗಲಿ ಗ್ರಾಮದಲ್ಲಿ ರಸ್ತೆಯ ಮೇಲೆಯೇ ವಾರದ ಸಂತೆ ನಡೆಯುತ್ತಿದೆ
ಸಂತೆ ದಿನ ಗುರುವಾರ ಜನದಟ್ಟಣೆಯಿಂದಾಗಿ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ಸಂತೆ ಸ್ಥಳಾಂತರಕ್ಕೆ ಸೂಚಿಸಿ ಪತ್ರ ಸುರಕ್ಷತೆಯ ದೃಷ್ಟಿಯಿಂದ ರಸ್ತೆಯ ಮೇಲೆ ಸಂತೆ ಮಾಡುವುದು ಸೂಕ್ತವಲ್ಲ. ಇದರಿಂದ ಅಪಘಾತ ಅವಘಡ ಸಂಭವಿಸುವ ಸಾಧ್ಯತೆಗಳಿವೆ. ಮುಂದಿನ ಗುರುವಾರದಿಂದ ಸಂತೆ ಸ್ಥಳವನ್ನು ಬೇರೆಡೆ ಸ್ಥಳಾಂತರಿಸುವಂತೆ ಗ್ರಾಮ ಪಂಚಾಯಿತಿ ಪಿಡಿಒಗೆ ಪತ್ರ ಬರೆದು ತಿಳಿಸಲಾಗಿದೆ ಎಂದು ಪಿಡಬ್ಲ್ಯುಡಿ ಬಾಗಲಕೋಟೆ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ನಾರಾಯಣ ಕುಲಕರ್ಣಿ ತಿಳಿಸಿದರು. ಸಂತೆ ಸ್ಥಳಾಂತಕ್ಕೆ ಕ್ರಮ ಸಂತೆ ಸ್ಥಳವನ್ನು ಬೇರೆಡೆ ಸ್ಥಳಾಂತರಿಸುವ ಚಿಂತನೆ ಮಾಡಲಾಗಿದೆ. ಸಾಕಷ್ಟು ಬಾರಿ ತಿಳಿ ಹೇಳಿದರೂ ವ್ಯಾಪಾರಸ್ಥರು ಕೇಳುತ್ತಿಲ್ಲ. ಮುಂದಿನ ವಾರ ಪೊಲೀಸರ ಸಹಕಾರದೊಂದಿಗೆ ಸಂತೆ ಜಾಗವನ್ನು ಬೇರೆಡೆ ಮಾಡಲಾಗುವುದು ಎಂದು ನಾಯನೇಗಲಿ ಗ್ರಾಮ ಪಂಚಾಯಿತಿ ಪಿಡಿಒ ಮುತ್ತು ಡೋಣಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.