ADVERTISEMENT

ಆರಂಭವಾಗದ ಮಾಂಸ ಮಾರುಕಟ್ಟೆ ಮಳಿಗೆಗಳು: ಪುರಸಭೆಗೆ ಬರುವ ಆದಾಯಕ್ಕೆ ಕತ್ತರಿ

ಎಸ್.ಎಂ ಹಿರೇಮಠ
Published 11 ಡಿಸೆಂಬರ್ 2023, 5:20 IST
Last Updated 11 ಡಿಸೆಂಬರ್ 2023, 5:20 IST
ಬಾದಾಮಿ ಮೇಣಬಸದಿ ರಸ್ತೆ ಪಕ್ಕದಲ್ಲಿ ಪುರಸಭೆಯು ನಿರ್ಮಿಸಿದ ಮಾಂಸದ ಮಾರುಕಟ್ಟೆ ಬೀಗ ಹಾಕಿರುವುದು.
ಬಾದಾಮಿ ಮೇಣಬಸದಿ ರಸ್ತೆ ಪಕ್ಕದಲ್ಲಿ ಪುರಸಭೆಯು ನಿರ್ಮಿಸಿದ ಮಾಂಸದ ಮಾರುಕಟ್ಟೆ ಬೀಗ ಹಾಕಿರುವುದು.   

ಬಾದಾಮಿ: ಸಾರ್ವಜನಿಕರ ಒತ್ತಾಯದ ಮೇರೆಗೆ ಪಟ್ಟಣದ ಮಧ್ಯದಲ್ಲಿದ್ದ ಮಾಂಸದ ಮಾರುಕಟ್ಟೆಯನ್ನು ಸ್ಥಳಾಂತರಿಸಲು ಪುರಸಭೆ ಎರಡು ಕಡೆಗೆ ಹೊಸದಾಗಿ ಮಾಂಸದ ಮಾರುಕಟ್ಟೆ ಮಳಿಗೆಗಳನ್ನು ನಿರ್ಮಿಸಿದೆ. ಆದರೆ ಎರಡೂ ಮಳಿಗೆಗಳಿಗೆ ಸ್ಥಳಾಂತರ ಮಾಡದೇ ಪುರಸಭೆಗೆ ಬರುವ ಆದಾಯಕ್ಕೆ ಹಿನ್ನೆಡೆಯುಂಟಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಇಲ್ಲಿಯ ನೀರಾವರಿ ಇಲಾಖೆಯ ಪಕ್ಕದಲ್ಲಿ ಏಳು ವರ್ಷಗಳ ಹಿಂದೆಯೇ ಪುರಸಭೆಯು ₹ 25 ಲಕ್ಷ ಅನುದಾನದಲ್ಲಿ 16 ಮಳಿಗೆಗಳನ್ನು ನಿರ್ಮಿಸಿದೆ. ಇಲ್ಲಿ ಮಾಂಸದ ಮಾರುಕಟ್ಟೆಯನ್ನು ಸ್ಥಳಾಂತರ ಮಾಡಲಾಗಿತ್ತು. ವ್ಯಾಪಾರ ವಹಿವಾಟು ಕಡಿಮೆಯಾದ ಕಾರಣ ವರ್ತಕರು ಮರಳಿ ಪಟ್ಟಣದ ಮಧ್ಯದಲ್ಲಿಯೇ ಮಾಂಸದ ವ್ಯಾಪಾರ ಮಾಡುತ್ತಿದ್ದಾರೆ. ಜನರು ಮಾಂಸದ ಮಾರುಕಟ್ಟೆಯ ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ಸಂಚರಿಸುವಂತಾಗಿದೆ.

ನೀರಾವರಿ ಇಲಾಖೆಯ ಸಮೀಪ ಪುರಸಭೆಯು ಮಾಂಸದ ಮಳಿಗೆಗಳನ್ನು ರಸ್ತೆಯಲ್ಲಿ ನಿರ್ಮಿಸಿದ್ದರಿಂದ 8 ಅಂಗಡಿಗಳನ್ನು ಪುರಸಭೆಯೇ ತೆರವು ಗೊಳಿಸಿದೆ. ಇಲ್ಲಿ ಸಿ.ಸಿ ರಸ್ತೆ ನಿರ್ಮಿಸಲಾಗಿದೆ. ಉಳಿದ 8 ಅಂಗಡಿಗಳು ಅಕ್ರಮ ಚಟುವಟಿಕೆಯ ತಾಣಗಳಾಗಿವೆ. ಇಲ್ಲಿ ಸಾರ್ವಜನಿಕರ ತೆರಿಗೆ ಹಣ ವ್ಯರ್ಥವಾಗಿದೆ ಎಂದು ನಿಸರ್ಗ ಬಳಗದ ಅಧ್ಯಕ್ಷ ಎಸ್.ಎಚ್. ವಾಸನ ಆರೋಪಿಸಿದರು.

ADVERTISEMENT

ಮೇಣ ಬಸದಿ ರಸ್ತೆಯ ಪಕ್ಕ ಮತ್ತೆ 24 ಮಾಂಸದ ಮಾರುಕಟ್ಟೆ ಮಳಿಗೆಗಳನ್ನು ಪುರಸಭೆ ₹ 48 ಲಕ್ಷದಲ್ಲಿ ನಿರ್ಮಿಸಿ ಮೂರು ವರ್ಷಗಳಾಗಿವೆ. ಹಿಂದಿನ ಶಾಸಕ ಸಿದ್ದರಾಮಯ್ಯ ಉದ್ಘಾಟನೆ ಕೈಗೊಂಡು ಎರಡು ವರ್ಷ ಗತಿಸಿದೆ. ಮಾಂಸದ ಮಳಿಗೆಗಳನ್ನು ವರ್ತಕರಿಗೆ ಬಾಡಿಗೆ ಕೊಡದೇ ಬೀಗ ಹಾಕಿದ್ದಾರೆ.

ಮಾಂಸದ ಮಳಿಗೆಗಳನ್ನು ವರ್ತಕರಿಗೆ ಬಾಡಿಗೆ ಕೊಡಿ. ಪುರಸಭೆಗೆ ಆದಾಯ ಬರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮತ್ತು ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರೂ ಸೂಕ್ತ ಕ್ರಮವನ್ನು ಕೈಗೊಳ್ಳುತ್ತಿಲ್ಲ ಎಂದು ವಾಸನ ಆರೋಪಿಸಿದರು.

ಬಾದಾಮಿ ಹೊರವಲಯದ ನೀರಾವರಿ ಇಲಾಖೆ ಸಮೀಪ ನಿರ್ಮಿಸಿದ ಪುರಸಭೆ ಮಾಂಸದ ಮಾರುಕಟ್ಟೆ ಅಕ್ರಮ ಚಟುವಟಿಕೆಗಳ ತಾಣ.

ಬಾದಾಮಿಯಿಂದ, ಪಟ್ಟಣದ ಹೊರಗೆ ನಿರ್ಮಿಸಿದ ಮಾಂಸದ ಮಳಿಗೆಗೆ ಸ್ಥಳಾಂತರ ಮಾಡಿದ್ದೆವು. ಅಲ್ಲಿಗೆ ಗ್ರಾಹಕರು ಬಾರದ್ದರಿಂದ ಮತ್ತೆ ಹಳೇ ಮಾರುಕಟ್ಟೆಗೆ ಬಂದೆವು ಎಂದು ಮಾಂಸ ಮಾರಾಟಗಾರರಾದ ತುಳಜಾರಾಮ ಕಲಾಲ ಪ್ರತಿಕ್ರಿಯಿಸಿದರು

ನಾಗರಿಕರಿಂದ ವಿರೋಧ: ಮಾಂಸದ ಮಾರುಕಟ್ಟೆಯನ್ನು ಧಾರ್ಮಿಕ ಕೇಂದ್ರದ ಸಮೀಪ ನಿರ್ಮಿಸಿದ್ದಾರೆ. ವಾರ್ಡಿನ ಪುರಸಭೆ ಸದಸ್ಯರು ಮತ್ತು ನಾಗರಿಕರು ಇಲ್ಲಿ ಮಾಂಸದ ಮಾರುಕಟ್ಟೆ ಆರಂಭಿಸುವುದು ಬೇಡ ಎಂದು ಒತ್ತಾಯಿಸಿದ್ದಾರೆ. ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ತೀರ್ಮಾನಿಸಲಾಗುವುದು
–ಬಿ.ಎಂ. ಡಾಂಗೆ ಪುರಸಭೆ ಮುಖ್ಯಾಧಿಕಾರಿ
ಇಚ್ಛಾಶಕ್ತಿಯ ಕೊರತೆ : ಧಾರ್ಮಿಕ ಕೇಂದ್ರಕ್ಕೆ ಮಾಂಸದ ಮಾರುಕಟ್ಟೆಗೆ ಬಹು ದೂರವಿದೆ. ಪುರಸಭೆಗೆ ಬರುವ ಆದಾಯವನ್ನು ತಪ್ಪಿಸಿದ್ದಾರೆ. ಪುರಸಭೆ ಹಿಂದಿನ ಮತ್ತು ಈಗಿನ ಅಧಿಕಾರಿಗಳ ಬೇಜವಾಬ್ದಾರಿ ಮತ್ತು ಇಚ್ಛಾಶಕ್ತಿಯ ಕೊರತೆಯಿಂದ ಮಾರುಕಟ್ಟೆ ಆರಂಭವಾಗಿಲ್ಲ
–ಮಂಜು ಹೊಸಮನಿ ಪುರಸಭೆಯ ಸದಸ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.