ವಿನಾಯಕ ದಾಸಮನಿ
ಕೆರೂರ: ಪಟ್ಟಣದಲ್ಲಿ ನಿತ್ಯ 50 ಕ್ಕೂ ಹೆಚ್ಚು ಬಿಡಾಡಿ ದನಗಳು ರಸ್ತೆಗಳಲ್ಲಿಯೇ ಮಲಗಿರುತ್ತವೆ. ಇದರಿಂದ ಸಾರ್ವಜನಿಕರ ತಿರುಗಾಟಕ್ಕೆ ತೊಂದರೆಯಾಗಿದೆ. ದಾಳಿ ಮಾಡಿದರೆ ಹೇಗೆ ಎಂಬ ಭೀತಿಯೂ ಇದೆ. ರಾಷ್ಟ್ರೀಯ ಹೆದ್ದಾರಿಯೂ ಹಾದು ಹೋಗಿರುವುದರಿಂದ ಅಲ್ಲಿ ಸಾಗುವ ವಾಹನಗಳಿಂದಾಗಿ ಸಂಚಾರ ದಟ್ಟಣೆಯೂ ಆಗಾಗ ಉಂಟಾಗುತ್ತದೆ.
ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ, ಪಟ್ಟಣ ಪಂಚಾಯ್ತಿ, ಸರ್ಕಾರಿ ಆಸ್ಪತ್ರೆ, ಪ್ರೌಢಶಾಲೆಯ ಮುಖ್ಯ ರಸ್ತೆಗಳಲ್ಲಿ ಬಿಡಾಡಿ ದನಗಳು ನಿಂತಿರುತ್ತವೆ. ಕೆಲವೊಮ್ಮೆ ಮಲಗಿರುತ್ತವೆ. ವಾಹನಗಳವರು ಹಾರ್ನ್ ಹಾಕುತ್ತಿದ್ದಂತೆಯೇ ಕೆಲವೊಮ್ಮೆ ಏಕಾಏಕಿ ಬೆದರಿ ಅಡ್ಡಾದಿಡ್ಡಿ ಓಡಿ ಬರುತ್ತವೆ. ಇದರಿಂದ ಕೆಲವೊಮ್ಮೆ ಅಪಘಾತಗಳೂ ಆಗಿರುವುದುಂಟು.
ಮುಖ್ಯವಾಗಿ ರಾಷ್ಟ್ರೀಯ ಹೆದ್ದಾರಿಗೆ ಹತ್ತಿಕೊಂಡು ಶಾಲಾ– ಕಾಲೇಜುಗಳಿವೆ. ದನಗಳ ಹಾವಳಿಯಿಂದಾಗಿ ವಿದ್ಯಾರ್ಥಿಗಳು ಭಯದಲ್ಲಿಯೇ ರಸ್ತೆಗಳಲ್ಲಿ ಸಾಗುವಂತಾಗಿದೆ.
ರಸ್ತೆ ಪಕ್ಕದಲ್ಲಿನ ಹೂವು, ಹಣ್ಣಿನ ಅಂಗಡಿ ಹಾಗೂ ಬೀದಿ ಬದಿಯ ತಳ್ಳು ಗಾಡಿ ವ್ಯಾಪಾರಿಗಳಿಗೆ ಬಿಡಾಡಿ ದನಗಳ ಹಾವಳಿಯಿಂದ ಕಿರಿ ಕಿರಿಯಾಗಿದೆ. ಗಾಡಿಯಲ್ಲಿರುವ ಸೊಪ್ಪು, ಹಣ್ಣುಗಳನ್ನು ಏಕಾಏಕಿ ನುಗ್ಗಿ ತಿಂದು ಬಿಡುತ್ತವೆ ಎನ್ನುತ್ತಾರೆ ಹಣ್ಣಿನ ವ್ಯಾಪಾರಿ ಮೈಬುಸಾಬ್ ರಾಘಾಪೂರ.
ಬಿಡಾಡಿ ದನಗಳನ್ನು ರಸ್ತೆಯಲ್ಲಿ ಬಿಡದಂತೆ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ ಅವರು ಎಚ್ಚತ್ತುಗೊಳ್ಳದಿದ್ದರೆ ದನಗಳನ್ನು ಗೋ ಶಾಲೆಗೆ ಬಿಡಲಾಗುವುದು.ಕೃಷ್ಣಾ ಕಟ್ಟಿಮನಿ, ಮುಖ್ಯಾಧಿಕಾರಿ, ಪಟ್ಟಣ ಪಂಚಾಯ್ತಿ ಕೆರೂರ
ತರಕಾರಿ ಮಾರುಕಟ್ಟೆಯ ವ್ಯಾಪಾರಿಗಳು ಸಂಜೆ ಆಗುತ್ತಿದ್ದಂತೆ ತ್ಯಾಜ್ಯವನ್ನು ರಸ್ತೆಯಲ್ಲಿ ಬಿಸಾಡುತ್ತಾರೆ. ಅದನ್ನು ತಿನ್ನಲು ದನಗಳ ಹಿಂಡೆ ಸೇರುತ್ತದೆ. ತಿಂದ ಮೇಲೆ ಅಲ್ಲಿಯೇ ಬಿಡಾರ ಹೋಡುತ್ತವೆ.
ಕಸವನ್ನು ಪಟ್ಟಣ ಪಂಚಾಯ್ತಿ ಸಿಬ್ಬಂದಿಗೆ ಕಸ ನೀಡಬೇಕು ಎಂದು ಹಲವಾರು ಬಾರಿ ಜನರಿಗೆ ತಿಳಿಸಿದ್ದರೂ, ರಸ್ತೆ ಬದಿಯಲ್ಲಿ ಕಸ ಚೆಲ್ಲುತ್ತಾರೆ. ಅಲ್ಲಲ್ಲಿ ತ್ಯಾಜ್ಯ ಎಸೆಯುವುದರಿಂದ ಜಾನುವಾರುಗಳು ಅಲ್ಲಿಯೇ ಸುತ್ತುತ್ತಿರುತ್ತವೆ. ಬಿಡಾಡಿ ದನಗಳ ಬಗ್ಗೆ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.