ADVERTISEMENT

ಮುಧೋಳ: ಕಟ್ಟಡವಿದ್ದರೂ ಸ್ಥಳಾಂತರಗೊಳ್ಳದ ಕಚೇರಿಗಳು

ಉದಯ ಕುಲಕರ್ಣಿ
Published 14 ಅಕ್ಟೋಬರ್ 2024, 5:21 IST
Last Updated 14 ಅಕ್ಟೋಬರ್ 2024, 5:21 IST
ಮುಧೋಳದ ನೂತನ ಭವ್ಯವಾದ ತಾಲ್ಲೂಕು ಆಡಳಿತ ಭವನ
ಮುಧೋಳದ ನೂತನ ಭವ್ಯವಾದ ತಾಲ್ಲೂಕು ಆಡಳಿತ ಭವನ   

ಮುಧೋಳ: ಸಾರ್ವಜನಿಕರಿಗೆ ಒಂದೇ ಸೂರಿನಡಿ ಸಕಲ ಸೇವೆ ಒದಗಿಸಬೇಕು ಎಂಬ ಇದ್ದೇಶದಿಂದ ನಿರ್ಮಿಸಿರುವ ತಾಲ್ಲೂಕು ಆಡಳಿತ ಭವನಕ್ಕೆ‌ ವಿವಿಧ ಇಲಾಖೆಗಳ ಕಚೇರಿಗಳು ಸ್ಥಳಾಂತರಗೊಳ್ಳದ ಕಾರಣ ಸಾರ್ವಜನಿಕರು ಪ್ರತಿಯೊಂದು ಕೆಲಸಕ್ಕೂ ನಗರದ ತುಂಬಾ ಓಡಾಡುವಂತಾಗಿದೆ.

₹15 ಕೋಟಿ ವೆಚ್ಚದಲ್ಲಿ ತಾಲ್ಲೂಕು ಆಡಳಿತ ಭವನ ನಿರ್ಮಿಸಲಾಗಿದೆ. ಭವನ ಉದ್ಘಾಟನೆಗೊಂಡು ಎರಡು ವರ್ಷಗಳು ಗತಿಸುತ್ತ ಬಂದರೂ  ಹಲವು ಕಚೇರಿಗಳು ಸ್ಥಳಾಂತರವಾಗಿಲ್ಲ. 

ತಹಶೀಲ್ದಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಅಂಚೆ ಕಚೇರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಭೂ ಮಾಪಕರ ಇಲಾಖೆ ಸೇರಿದಂತೆ ಹಲವು ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಉಪನೋಂದಣಿ, ಅಬಕಾರಿ, ಹಿಂದುಳಿದ ಕಲ್ಯಾಣ ಇಲಾಖೆ, ಕಾರ್ಮಿಕ‌ ಇಲಾಖೆ ಸೇರಿದಂತೆ ಹಲವು ಕಚೇರಿಗಳು ಬೇರೆ ಕಡೆ ಕಾರ್ಯ ನಿರ್ವಹಿಸುತ್ತಿವೆ. 

ADVERTISEMENT

ಬಾಡಿಗೆ ಕಟ್ಟದಲ್ಲಿ ಅಬಕಾರಿ ಇಲಾಖೆ: ಅಬಕಾರಿ ಇಲಾಖೆ ಕಚೇರಿ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಭವನದಲ್ಲಿ ಸಾಕಷ್ಟು ಕೊಠಡಿಗಳಿದ್ದರೂ ಸ್ಥಳಾಂತರಗೊಳ್ಳದೇ ಬಾಡಿಗೆ ಪಾವತಿಸಲಾಗುತ್ತಿದೆ.

ಇಕ್ಕಟ್ಟಾದ ಸ್ಥಳದಲ್ಲಿ ಉಪನೋಂದಣಿ ಕಚೇರಿ: ನಿತ್ಯ ನೂರಾರು ಜನರು ಭೇಟಿ ನೀಡುವ ಉಪನೋಂದಣಿ ಅಧಿಕಾರಿಗಳ ಕಚೇರಿ ಇಕ್ಕಟ್ಟಾದ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಹಳೆಯ ಸರ್ಕಾರಿ ಆಸ್ಪತ್ರೆಯಲ್ಲಿ ಆವರಣದಲ್ಲಿದ್ದು, ಸೂಕ್ತ ಗಾಳಿ, ಬೆಳಕಿನ ವ್ಯವಸ್ಥೆಯೂ‌ ಇಲ್ಲ. ಕಟ್ಟಡ ತಗ್ಗು ಪ್ರದೇಶದಲ್ಲಿರುವ ಕಾರಣ ಪದೇ ಪದೇ ಇಂಟರ್‌ನೆಟ್‌ ಸಮಸ್ಯೆ ಕಾಡುತ್ತಿದ್ದು, ಆಸ್ತಿಪತ್ರ ಕೆಲಸಕ್ಕಾಗಿ ಜನರು ಅಲೆದಾಡುವಂತಾಗಿದೆ.

ನಿರ್ಜನ ಪ್ರದೇಶದಲ್ಲಿ ಹಿಂದುಳಿದ ಕಲ್ಯಾಣ ಇಲಾಖೆ: ಶಾಲೆ, ಕಾಲೇಜು ವಿದ್ಯಾರ್ಥಿಗಳು ಹೆಚ್ಚಾಗಿ ಭೇಟಿ ನೀಡುವ ಹಿಂದುಳಿದ ಕಲ್ಯಾಣ ಇಲಾಖೆ ಅಧಿಕಾರಿಗಳ ಕಚೇರಿ ನಿರ್ಜನ ಪ್ರದೇಶದಲ್ಲಿದೆ. ಗಿರಗಾವ್ ಆರ್.ಸಿ. ಹತ್ತಿರ ತಗ್ಗು ಪ್ರದೇಶದಲ್ಲಿರುವ ಈ ಕಚೇರಿಗೆ ವಿದ್ಯಾರ್ಥಿನಿಯರು ಒಬ್ಬಂಟಿಯಾಗಿ ಓಡಾಡುವುದು ಕಷ್ಟ. ಕಚೇರಿಗೆ ತೆರಳಲು ಸರಿಯಾದ ದಾರಿಯೂ ಇಲ್ಲ. 

ಕಾರ್ಮಿಕ ಇಲಾಖೆ: ಕಾರ್ಮಿಕ ಇಲಾಖೆಗೆ ತಾಲ್ಲೂಕು ಪಂಚಾಯಿತಿ ಕಚೇರಿ ಪಕ್ಕದ ಕಟ್ಟಡ ಹಂಚಿಕೆ ಮಾಡಲಾಗಿದೆಯಾದರೂ ಕಟ್ಟಡ ಚಿಕ್ಕದಾಗಿದೆ ಕಾರ್ಮಿಕರಿಗೆ ನೀಡುವ ಕಿಟ್‌ಗಳನ್ನು ಸಂಗ್ರಹಿಸಲು ಸ್ಥಳಾವಕಾಶದ ಕೊರತೆ ಎದ್ದು ಕಾಣುತ್ತಿದೆ.

ಮೊದಲ ಮಹಡಿ ಖಾಲಿ ಖಾಲಿ: ಸಕಲ ಸೌಲಭ್ಯದೊಂದಿಗೆ ತಲೆ ಎತ್ತಿರುವ ಆಡಳಿತ ಭವನದ ಎರಡನೇ ಮಹಡಿಯ ಬಹುತೇಕ ಕೊಠಡಿಗಳು ಖಾಲಿ ಉಳಿದಿದ್ದು, ಎಲ್ಲ ಕೊಠಡಿಗಳಲ್ಲಿ ದೂಳು ಆವರಿಸಿಕೊಂಡಿದೆ. ಗ್ಲಾಸ್ ಬಾಗಿಲು ಈಗಾಗಲೇ ಮುರಿದು ಬಿದ್ದಿದ್ದು, ಹೀಗೆ ಮುಂದುವರಿದರೆ ಹೊಸ ಭವನ ಹಾಳು ಕೊಂಪೆಯಾಗಲಿದೆ.

ಕೆಲವೊಂದು ಇಲಾಖೆ ಸ್ಥಳಾಂತರಕ್ಕೆ ಇಲಾಖೆ ಅನುಮತಿ ಪಡೆಯುವ ಕಾರ್ಯ ನಡೆದಿದೆ. ಕೆಲವೇ ತಿಂಗಳಲ್ಲಿ ಸ್ಥಳಾಂತರಗೊಳ್ಳಲಿವೆ.
- ಮಹಾದೇವ ಸಣಮೂರಿ ತಹಶೀಲ್ದಾರ್ ಮುಧೋಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.