ADVERTISEMENT

ನಗರಸಭೆ: ಅಧಿಕಾರಕ್ಕಾಗಿ ಬಿಜೆಪಿ, ಕಾಂಗ್ರೆಸ್‌ ಪೈಪೋಟಿ

ಬಸವರಾಜ ಅ.ನಾಡಗೌಡ
Published 15 ಆಗಸ್ಟ್ 2024, 7:03 IST
Last Updated 15 ಆಗಸ್ಟ್ 2024, 7:03 IST

ಇಳಕಲ್: ನಗರಸಭೆ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಆ. 20ರಂದು ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ ಹಾಗೂ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಕಸರತ್ತು ಮಾಡುತ್ತಿದ್ದರೆ, ಅಧಿಕಾರ ಹಿಡಿಯಲು ಕಾಂಗ್ರೆಸ್‌ ತಂತ್ರ ರೂಪಿಸುತ್ತಿದೆ.

ಅಧ್ಯಕ್ಷ ಸ್ಥಾನ ಹಿಂದುಳಿದ ‘ಬ’ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ನಗರಸಭೆಯ ಒಟ್ಟು 31 ಸ್ಥಾನಗಳಲ್ಲಿ ಬಿಜೆಪಿಯ ಒಬ್ಬ ಸದಸ್ಯ ಶ್ರೀನಿವಾಸ ಸುರಪುರ ನಿಧನದಿಂದ ಒಂದು ಸ್ಥಾನ ತೆರವಾಗಿದ್ದು, 30 ಸದಸ್ಯರಲ್ಲಿ ಬಿಜೆಪಿ 19, ಕಾಂಗ್ರೆಸ್ 8, ಜೆಡಿಎಸ್ 2 ಹಾಗೂ ಪಕ್ಷೇತರ ಒಬ್ಬ ಸದಸ್ಯರಿದ್ದಾರೆ.

ಮೊದಲ ಅವಧಿಯಲ್ಲಿ ಒಗ್ಗಟ್ಟು ಕಾಯ್ದುಕೊಂಡು ನಿರಾಯಾಸವಾಗಿ ಅಧಿಕಾರ ಹಿಡಿದಿದ್ದ ಬಿಜೆಪಿಗೆ ಎರಡನೇ ಅವಧಿಯಲ್ಲಿ ಒಗ್ಗಟ್ಟು ಕಾಯ್ದುಕೊಳ್ಳುವ ಸವಾಲು ಎದುರಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಸದಾಶಿವ ಕನಕೇರಿ, ವಿಜಯ ಗಿರಡ್ಡಿ ಇವರಲ್ಲಿ ಒಬ್ಬರು ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್‌ನಿಂದ ಸುಧಾರಾಣಿ ಮುರುಗೇಶ ಸಂಗಮ ಹಾಗೂ ಶರಣಮ್ಮ ತಿಮ್ಮಾಪುರ ಅವರಲ್ಲಿ ಶಾಸಕರು ಸೂಚಿಸಿದವರು ಕಣಕ್ಕಿಳಿಯಲಿದ್ದಾರೆ ಎನ್ನಲಾಗುತ್ತಿದೆ.

ADVERTISEMENT

ಮಹಿಳೆಯರಿಗೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಎರಡು ಪಕ್ಷಗಳಲ್ಲೂ ಅನೇಕರು ಅರ್ಹರಿದ್ದು, ಅಧ್ಯಕ್ಷ ಸ್ಥಾನ ಗೆಲ್ಲುವುದಕ್ಕೆ ಸಹಾಯ ಮಾಡಿದವರಿಗೆ ನೀಡುವ ಸಾಧ್ಯತೆ ಇದೆ. ಈ ಬಗ್ಗೆ ಎರಡು ಪಕ್ಷಗಳು ಗುಟ್ಟು ಬಿಟ್ಟು ಕೊಟ್ಟಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.