ಬಾಗಲಕೋಟೆ: ‘ನಬಾರ್ಡ್‌ನಿಂದ ರೈತರಿಗೆ ಕಳೆದ ವರ್ಷ ₹5,600 ಕೋಟಿ ಸಾಲ ನೀಡಲಾಗಿತ್ತು. ಈ ಬಾರಿ ₹2,340 ಕೋಟಿ ನೀಡಿ ಕೇಂದ್ರ ಸರ್ಕಾರ ರೈತರಿಗೆ ದ್ರೋಹ ಬಗೆದಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ನವನಗರದ ತೋಟಗಾರಿಕೆ ವಿಶ್ವವಿದ್ಯಾಲಯ ಪಕ್ಕದ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ‘ಸಹಕಾರ ರತ್ನ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.
‘ರೈತರಿಗೆ ಅನ್ಯಾಯ ಮಾಡದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದೇನೆ. ಕೇಂದ್ರಕ್ಕೆ ಪಕ್ಷಾತೀತವಾಗಿ ಎಲ್ಲರೂ ಪತ್ರ ಬರೆದು ರಾಜ್ಯದ ಪಾಲು ಕೇಳಬೇಕು’ ಎಂದರು.
‘ಏಕಾಏಕಿ ಶೇ 58ರಷ್ಟು ಪ್ರಮಾಣ ಕಡಿತಗೊಳಿಸಲಾಗಿದೆ. ಬಾಯಿಬಿಟ್ಟರೆ ಬಿಜೆಪಿಯವರು ರೈತರ ಪರ ಎನ್ನುತ್ತಾರೆ. ಇದರಿಂದ ರೈತರಿಗೆ ಅನ್ಯಾಯ ಆಗುವುದಿಲ್ಲವೇ’ ಎಂದು ಅವರು ಪ್ರಶ್ನಿಸಿದರು.
‘ಸಹಕಾರ ಕ್ಷೇತ್ರ ರಾಜ್ಯ ವಲಯಕ್ಕೆ ಸಂಬಂಧಿಸಿದ್ದು ಎಂಬುದನ್ನು ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಆದರೆ, ಸಹಕಾರ ಇಲಾಖೆಯನ್ನು ಕೇಂದ್ರ ಸರ್ಕಾರ ಏಕಾಏಕಿ ಘೋಷಣೆ ಮಾಡಿದೆ. ಅಮಿತ್ ಶಾ ಕೇಂದ್ರ ಸಹಕಾರ ಸಚಿವರಾಗಿದ್ದಾರೆ. ಅದರಿಂದ ಏನಾದರೂ ಪ್ರಯೋಜನವಾಗಿದೆಯೇ ಎಂದು ಕೇಳಿದರು.
11 ಲಕ್ಷ ಬಿಪಿಎಲ್ ಪಡಿತರ ಚೀಟಿಗಳನ್ನು ಎಪಿಎಲ್ ಕಾರ್ಡ್‌ಗಳನ್ನಾಗಿ ಮಾಡಲಾಗುತ್ತಿದೆ. ಅಂದರೆ 11 ಲಕ್ಷ ಕುಟುಂಬಗಳ ಅನ್ನವನ್ನು ಸರ್ಕಾರ ಕಿತ್ತುಕೊಳ್ಳುತ್ತಿದೆಎಚ್.ಡಿ. ಕುಮಾರಸ್ವಾಮಿ ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ
‘ಪಡಿತರ ಕಾರ್ಡು ರದ್ದು ಇಲ್ಲ’ ‘
ರಾಜ್ಯದ ಯಾವುದೇ ಅರ್ಹರ ಪಡಿತರ ಕಾರ್ಡು ರದ್ದು ಆಗುವುದಿಲ್ಲ. ತೆರಿಗೆ ಪಾವತಿಸುವವರು ಮತ್ತು ಸರ್ಕಾರಿ ನೌಕರಿಯಲ್ಲಿ ಇರುವವರು ಪಡೆದಿದ್ದ ಬಿಪಿಎಲ್ (ಬಡತನ ರೇಖೆಗಿಂತ ಕೆಳಗೆ) ಕಾರ್ಡ್‌ಗಳನ್ನು ಎಪಿಎಲ್ (ಬಡತನ ರೇಖೆಗಿಂತ ಮೇಲೆ) ಕಾರ್ಡ್ ಆಗಿ ಪರಿವರ್ತಿಸಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ‘ಬಿಜೆಪಿ ಸರ್ಕಾರದಲ್ಲಿ ಶೇ 40ರಷ್ಟು ಕಮಿಷನ್ ಆರೋಪ ಸುಳ್ಳು ಎಂದು ವರದಿ ಸಲ್ಲಿಕೆ ಆಗಿದೆಯೇ’ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ‘ಗುತ್ತಿಗೆದಾರರ ಸಂಘದ ಕೆಂಪಣ್ಣ ಆರೋಪಿಸಿದ್ದರು. ಅದಕ್ಕಾಗಿ ಆಯೋಗ ರಚಿಸಲಾಗಿತ್ತು. ವರದಿ ಏನು ಬಂದಿದೆ ಎಂದು ಇನ್ನೂ ನೋಡಿಲ್ಲ. ನೋಡಿದ ಬಳಿಕ ಪ್ರತಿಕ್ರಿಯೆ ನೀಡುವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.