ADVERTISEMENT

ಚುನಾವಣೆಗೆ ಬರುವವರು ಸಂಕಷ್ಟ ಕೇಳಲ್ಲ ಏಕೆ? ರಾಮಲಿಂಗಾ ರೆಡ್ಡಿ

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 1 ಮೇ 2024, 14:52 IST
Last Updated 1 ಮೇ 2024, 14:52 IST
<div class="paragraphs"><p>ರಾಮಲಿಂಗಾ ರೆಡ್ಡಿ</p></div>

ರಾಮಲಿಂಗಾ ರೆಡ್ಡಿ

   

ಬಾಗಲಕೋಟೆ: ಚುನಾವಣೆ ಬಂದರೆ ಪ್ರಧಾನಿ ಮೋದಿ, ಸಚಿವ ಅಮಿತ್‌ ಶಾ ರಾಜ್ಯಕ್ಕೆ ಓಡೋಡಿ ಬರುತ್ತಾರೆ. ಆದರೆ, ಬರ ಬಂದಿದೆ. ಅನುದಾನ ನೀಡಿ ಎಂದರೆ ಯಾಕೆ ಅವರಿಗೆ ಕೇಳಿಸುವುದಿಲ್ಲ ಎಂದು ಸಚಿವ ರಾಮಲಿಂಗಾ ರೆಡ್ಡಿ ಪ್ರಶ್ನಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬರ ಪರಿಹಾರ ಕೇಳಿದರೂ ಬಿಡುಗಡೆ ಮಾಡದ್ದರಿಂದ ನ್ಯಾಯಾಲಯದ ಮೊರೆ ಹೋಗಬೇಕಾಯಿತು. ಅನುದಾನ ಹಂಚಿಕೆಯಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತವನ್ನು ಕಡೆಗಣಿಸುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸೋಲಿಸಿರುವುದರಿಂದ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಕೇಂದ್ರಕ್ಕೆ ಅನ್ಯಾಯ ಮಾಡಿದಾಗ ರಾಜ್ಯದ ಬಿಜೆಪಿ ಸಂಸದರು ಮಾತನಾಡುವುದಿಲ್ಲ. ನಾಲ್ವರು ಮಾಜಿ ಮುಖ್ಯಮಂತ್ರಿಗಳಿದ್ದು, ಅವರೂ ಧ್ವನಿ ಎತ್ತುವುದಿಲ್ಲ ಎಂದು ಟೀಕಿಸಿದರು.

ಬೆಂಗಳೂರನ್ನು ಟ್ಯಾಂಕರ್ ಸಿಟಿ ಮಾಡಲಾಗಿದೆ ಎಂದು ಮೋದಿ ಆರೋಪಿಸುತ್ತಾರೆ. ಮಳೆ ಬಾರದಿರುವುದರಿಂದ ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾಗಿದೆ. ಜನರಿಗೆ ನೀರಿನ ತೊಂದರೆಯಾಗದಂತೆ ಕ್ರಮವಹಿಸಲಾಗಿದೆ. ಕುಡಿಯುವ ನೀರಿಗಾಗಿ ಮೇಕೆದಾಟು ಯೋಜನೆಗೆ ಅನುಮತಿ ನೀಡಿ ಎಂದರೆ ಏಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.

ಮಾಜಿ ಸಚಿವ ವಿನಯಕುಮಾರ ಸೊರಕೆ ಮಾತನಾಡಿ, ಐಟಿ, ಇಡಿ ಗಳ ಮೂಲಕ ವಿರೋಧ ಪಕ್ಷಗಳನ್ನು ದಮನ ಮಾಡುವ ಕೆಲಸವನ್ನು ಕೇಂದ್ರ ಮಾಡುತ್ತಿದೆ. 2014ರಲ್ಲಿ ಶೇ 17ರಷ್ಟಿದ್ದ ನಿರುದ್ಯೋಗ ಪ್ರಮಾಣ ಈಗ ಶೇ 40ಕ್ಕೆ ಹೆಚ್ಚಾಗಿದೆ ಎಂದು ವಾಗ್ದಾಳಿ ನಡೆಸಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯೆ ತೇಜಸ್ವಿನಿ ಮಾತನಾಡಿ, ಪ್ರಧಾನಿ ಮೋದಿ ಕಂಬಳಿ ಹಾಕಿಕೊಂಡು ಭಾಷಣ ಮಾಡಿದ್ದಾರೆ. ಈಶ್ವರಪ್ಪ ಅವರನ್ನು ಏಕೆ ಮುಖ್ಯಮಂತ್ರಿಯಾಗಿ ಮಾಡಲಿಲ್ಲ. ಕಂಬಳಿ, ಟಗರಿನ ತಂಟೆಗೆ ಹೋಗಬೇಡಿ. ಕರ್ನಾಟಕ ವಿಷಯದಲ್ಲಿ ಬಿಜೆಪಿಯ ಯಾವ ಎಂಜಿನ್‌ ಇಲ್ಲ ಎಂದು ಟೀಕಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷೆ ಎಸ್‌.ಜಿ. ನಂಜಯ್ಯನಮಠ, ನಾಗರಾಜ ಹದ್ಲಿ, ಶ್ರೀಧರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.