ಬಾಗಲಕೋಟೆ: ದೇಶದಲ್ಲಿ ನಿತ್ಯ 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅವರದ್ದು ಆತ್ಮಹತ್ಯೆಯಲ್ಲ, ಹತ್ಯೆ ಎಂದು ಹೋರಾಟಗಾರ್ತಿ ಮೇಧಾ ಪಾಟ್ಕರ್ ಆರೋಪಿಸಿದರು.
ಜಿಲ್ಲೆಯ ಕೂಡಲಸಂಗಮದಲ್ಲಿ ನಡೆಯುತ್ತಿರುವ ಶರಣ ಮೇಳದಲ್ಲಿ ಶನಿವಾರ ಬಸವಾತ್ಮಜೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಹೋರಾಟ ಮಾಡುವವರಿಗೆ ನಗರ ನಕ್ಸಲ್ ಹಣೆಪಟ್ಟಿ ಕಟ್ಟಲಾಗುತ್ತದೆ ಎಂದು ಟೀಕಿಸಿದರು.
ಹಿಂಸೆಯಿಂದ ದೇಶ ನಿರ್ಮಾಣ ಸಾಧ್ಯವಿಲ್ಲ. ದೇಶ ಉಳಿಸಲು ಅಹಿಂಸೆಯೊಂದಿಗೆ ಹೋರಾಟ ಮಾಡಬೇಕಾದ ಅವಶ್ಯಕತೆ ಇದೆ ಎಂದರು.
ಜೀವ ಜಲಗಳಾದ ನದಿಗಳು ಕಲುಷಿತಗೊಳ್ಳುತ್ತಿವೆ. ನಗರ ತ್ಯಾಜ್ಯ ನದಿಗಳ ಒಡಲು ಸೇರುತ್ತಿದೆ. ಚಾರಧಾಮ ರಸ್ತೆ ನಿರ್ಮಾಣದಿಂದ ನದಿ ನೀರಿನ ಮೂಲಗಳು ಹಾಳಾದವು ಎಂದು ಕಳವಳ ವ್ಯಕ್ತಪಡಿಸಿದರು.
ಧರ್ಮ ನಶೆಯ ವಸ್ತುವಾಗಬಾರದು. ಆದರೆ, ಅದನ್ನು ನಶೆಯಾಗಿ ಪರಿವರ್ತಿಸಲಾಗುತ್ತಿದೆ. ಆ ಬಗ್ಗೆ ಜಾಗೃತಿ ಮೂಡಿಸುವ ಶಕ್ತಿ ವಚನಗಳಿಗಿದೆ. 12ನೇ ಶತಮಾನದಲ್ಲಿ ಬಸವಣ್ಣ ಉಳ್ಳವರು ದೇವಾಲಯ ಮಾಡುವರು, ನಾನೇನು ಮಾಡಲಯ್ಯ ಎನ್ನ ಕಾಲೇ ಕಂಬ, ದೇಹವೇ ದೇಗುಲ ಎಂದು ಹೇಳಿದ್ದರು ಎಂದು ವಚನ ಉಲ್ಲೇಖಿಸಿದರು.
ಬಸವಣ್ಣನ ಕಾಯಕ ತತ್ವ ಅಳವಡಿಸಿಕೊಂಡಿದ್ದೇವೆಯೇ ಎಂಬ ಆತ್ಮಾವಲೋಕನ ಮಾಡಿಕೊಳ್ಳಬೇಕು. ಉತ್ಪಾದನೆಯನ್ನು ಎಲ್ಲರಿಗೂ ಹಂಚುವ ದಾಸೋಹ ತತ್ವದ ಮೂಲಕ ಸಂಪತ್ತು ವಿತರಣೆಯಾಗಬೇಕು ಎಂದರು.
ಹಲವರು ವಿಶ್ವಗುರು ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಬಸವಣ್ಣನವರೊಬ್ಬರೇ ವಿಶ್ವಗುರು ಎಂಬುದನ್ನು ಅನುಭವ ಮಂಟಪ ಸಾರಿದೆ. ಜಾತಿ ನಿರ್ಮೂಲನೆಗಾಗಿ ಬಸವಣ್ಣ ಹೋರಾಟ ಮಾಡಿದ್ದರು. ಇಂದಿಗೂ ಆ ಹೋರಾಟ ಪೂರ್ಣಗೊಂಡಿಲ್ಲ. ಅವರು ಜೀವವನ್ನೇ ನೀಡಿದ್ದಾರೆ. ನಾವು ಜೀವನ ನೀಡಲು ಏನು ತೊಂದರೆ ಎಂದು ಪ್ರಶ್ನಿಸಿದರು
ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಸ್ವಾಮಿ ಲಿಂಗಾನಂದ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬಸವ ಪೀಠದ ಅಧ್ಯಕ್ಷೆ ಮಾತೆ ಗಂಗಾದೇವಿ, ಇಳಕಲ್ ನ ಗುರು ಮಹಾಂತ ಸ್ವಾಮೀಹಿ, ಅನ್ನದಾನ ಭಾರತೀ ಅಪ್ಪಣ್ಣ ಸ್ವಾಮೀಜಿ, ಅನಿಮಿಷಾನಂದ ಸ್ವಾಮೀಜಿ, ಮಹದೇಶ್ವರ ಸ್ವಾಮೀಜಿ, ಚಿತ್ರನಟ ಡಾಲಿ ಧನಂಜಯ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.