ADVERTISEMENT

ಬೇವೂರಿನಲ್ಲಿ ಚಂಡಿಕಾ ಹೋಮ: ಶರನ್ನವರಾತ್ರಿ ಸಂಪನ್ನ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 16:11 IST
Last Updated 15 ಅಕ್ಟೋಬರ್ 2024, 16:11 IST
ಬೇವೂರಿನ ಕಾಳಿಕಾಂಬಾ ದೇವಸ್ಥಾನದಲ್ಲಿ ಮಂಗಳವಾರ ಚಂಡಿಕಾ ಹೋಮ ನಡೆಯಿತು
ಬೇವೂರಿನ ಕಾಳಿಕಾಂಬಾ ದೇವಸ್ಥಾನದಲ್ಲಿ ಮಂಗಳವಾರ ಚಂಡಿಕಾ ಹೋಮ ನಡೆಯಿತು   

ರಾಂಪುರ: ಸಮೀಪದ ಬೇವೂರ ಗ್ರಾಮದ ಕಾಳಿಕಾಂಬಾ ದೇವಸ್ಥಾನದಲ್ಲಿ ಅ. 3ರಿಂದ ಜರುಗಿದ ಶರನ್ನವರಾತ್ರಿ ಉತ್ಸವ ಮಂಗಳವಾರ ಚಂಡಿಕಾ ಹೋಮದೊಂದಿಗೆ ಸಂಪನ್ನಗೊಂಡಿತು.

ಮಂಗಳವಾರ ಬೆಳಿಗ್ಗೆ ದೇವಸ್ಥಾನದಲ್ಲಿ ಕಾಳಿಕಾಪರಮೇಶ್ವರಿಗೆ ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ, ಆವಾಹಿತ ದೇವತಾ ಪೂಜೆ, ಸಪ್ತಶತಿ ಪಾರಾಯಣ, ಮಹಾಕಾಳಿ, ಮಹಾಲಕ್ಷ್ಮೀ ಮತ್ತು ಮಹಾ ಸರಸ್ವತಿ ಪೂಜೆ ನೆರವೇರಿದವು.

ನಂತರ ಸೋಮವಾರದಿಂದ ಆರಂಭವಾಗಿದ್ದ ಚಂಡಿಕಾ ಹೋಮ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಪುನರ್ ಪ್ರಾರಂಭವಾಯಿತು. ಬಳ್ಳಾರಿಯ ಟಿ. ವೀರರಾಘವ ಶರ್ಮ, ಇಳಕಲ್ಲಿನ ಬಸವಂತಾಚಾರ್ಯ ಗುರುವಿನ, ಹುಬ್ಬಳ್ಳಿಯ ಮುಕುಂದಾಚಾರ್ಯ ಗುರುವಿನ, ಬಳ್ಳಾರಿಯ ವೀರನಾರಾಯಣ ಶರ್ಮ ಹಾಗೂ ಮೈಸೂರಿನ ದಯಾನಂದ ಶರ್ಮ ಅವರ ನೇತೃತ್ವದಲ್ಲಿ ಚಂಡಿಕಾ ಹೋಮ ನಡೆಯಿತು. ಮಧ್ಯಾಹ್ನ 2 ಗಂಟೆಗೆ ಪೂರ್ಣಾಹುತಿ ನಡೆದು ಮಹಾಮಂಗಳಾರತಿ, ಮಂತ್ರಪುಷ್ಪ, ಕೌಮಾರಿಕಾ ಪೂಜೆ, ಸುಹಾಸಿನಿ ಪೂಜೆ, ತೀರ್ಥ ಪ್ರಸಾದ ವಿನಿಯೋಗ ನಡೆದು ಮಹಾಪ್ರಸಾದ ಜರುಗಿತು.

ADVERTISEMENT

ವಿಶ್ವಬ್ರಾಹ್ಮಣ ಸೇವಾ ಸಮಿತಿ ಹಾಗೂ ಕಾಳಿಕಾಂಬಾ ಸದ್ಭಕ್ತ ಮಂಡಳಿ ವತಿಯಿಂದ ದಸರಾ ಅಂಗವಾಗಿ ಶರನ್ನವರಾತ್ರಿ ಉತ್ಸವದಲ್ಲಿ ನಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಭಜನೆ, ಮಹಿಳೆಯರಿಂದ ಲಲಿತಾ ಸಹಸ್ರನಾಮ ಪಾರಾಯಣ ಮತ್ತು ದೇವರ ನಾಮಗಳು, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಉಡುಪಿ ಜಿಲ್ಲೆಯ ಕುಂಭಕಾಶಿ ಸದ್ಗುರು ಶ‍್ರೀಧರ ಕೃಪಾ ಆಯುರ್ವೇದಾಶ್ರಮದ ಆಚಾರ್ಯ ಕೆ.ಶ್ ರೀಧರದಾಸ ಗುರೂಜಿ ಅವರಿಂದ ದೇವಿ ಪುರಾಣ ಪ್ರವಚನ ನಡೆಯಿತು.

ಸೋಮವಾರ ಹುಲಗೂರ ಮೌನೇಶ್ವರ ಮಠದ ಮೌನೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಹಾಗೂ ಪೂಜ್ಯ ಗ್ಯಾನಪ್ಪಜ್ಜನವರ ಅಧ್ಯಕ್ಷತೆಯಲ್ಲಿ ಚಂಡಿಕಾ ಹೋಮದ ಧಾರ್ಮಿಕ ಸಭೆ ನಡೆಯಿತು. ಶಿಕ್ಷಣ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ರಾತ್ರಿ ಉಡುಪಿ ಜಿಲ್ಲೆಯ ಅಮವಾಸೆಬೈಲಿನ ಬ್ರಾಹ್ಮಿ ಯಕ್ಷಗಾನ ಮಂಡಳಿಯಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಿತು.

ದೇವಸ್ಥಾನದ ಅರ್ಚಕರಾದ ಮೌನೇಶ ಪತ್ತಾರ, ಈರಣ್ಣ ಪತ್ತಾರ, ನಾರಾಯಣ ಪತ್ತಾರ, ಈರಣ್ಣ ಶಂಕರಪ್ಪ ಪತ್ತಾರ, ಅಜಿತ ಪತ್ತಾರ, ಪ್ರಶಾಂತ ಪತ್ತಾರ ಹಾಗೂ ರಮೇಶ ಪತ್ತಾರ  ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಮಂಗಳವಾರ ಮಧ್ಯಾಹ್ನ ಅನ್ನ ಪ್ರಸಾದ ಸೇವೆ ನಡೆಯಿತು.

ಬೇವೂರಿನ ಕಾಳಿಕಾಂಬಾ ದೇವಸ್ಥಾನದಲ್ಲಿ ಮಂಗಳವಾರ ಚಂಡಿಕಾ ಹೋಮ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.