ADVERTISEMENT

ಅರಿಸಿನ ಕುದಿಸಲಿಕ್ಕೆ ಆಧುನಿಕ ತಂತ್ರಜ್ಞಾನದ ಬಳಕೆ

ಸರಳ ವಿಧಾನದಿಂದ ಕೃಷಿಕರಿಗೆ ಅನುಕೂಲ

​ಪ್ರಜಾವಾಣಿ ವಾರ್ತೆ
Published 29 ಮೇ 2023, 13:23 IST
Last Updated 29 ಮೇ 2023, 13:23 IST
ಬನಹಟ್ಟಿ ಸಮೀಪದ ತೋಟದಲ್ಲಿ ಹಸಿ ಅರಿಸಿನವನ್ನು ಕುದಿಸಲು ಬಾಯ್ಲರ್ ಬಳಸುತ್ತಿರುವುದು
ಬನಹಟ್ಟಿ ಸಮೀಪದ ತೋಟದಲ್ಲಿ ಹಸಿ ಅರಿಸಿನವನ್ನು ಕುದಿಸಲು ಬಾಯ್ಲರ್ ಬಳಸುತ್ತಿರುವುದು   

ವಿಶ್ವಜ ಕಾಡದೇವರ

ರಬಕವಿ-ಬನಹಟ್ಟಿ: ರಬಕವಿ ಬನಹಟ್ಟಿ ಹಾಗೂ ಸುತ್ತ ಮುತ್ತಲಿನ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಅರಿಸಿನ ಬೆಳೆದು, ಅದನ್ನು ಸಂಸ್ಕರಿಸಿ ಮಾರುಕಟ್ಟೆಗೆ ತಲುಪಿಸುವುದೇ ರೈತರಿಗೆ ಒಂದು ಹರಸಾಹಸವಾಗಿದೆ.

ಒಟ್ಟು ಒಂಭತ್ತು ತಿಂಗಳ ಬೆಳೆಯಾದ ಅರಿಸಿನವನ್ನು ಅಗೆದ ನಂತರ ಅದನ್ನು ಕುದಿಸುವುದು ಈ ಹಿಂದೆ ಬಹು ಕಷ್ಟದ ಮತ್ತು ಅತ್ಯಂತ ಶ್ರಮದಾಯಕ ಕೆಲಸವಾಗಿತ್ತು. ಈ ಕಾರ್ಯಕ್ಕೆ ಬಹಳಷ್ಟು ಕೂಲಿ ಕಾರ್ಮಿಕರ ಅವಶ್ಯಕತೆ ಇತ್ತು. ಮೊದಲು ಅರಿಸಿನವನ್ನು ಕುದಿಸಲು ಬೃಹತ್ ಒಲೆಯನ್ನು ನಿರ್ಮಾಣ ಮಾಡಬೇಕಾಗಿತ್ತು. ಉರುವಲಕ್ಕೆ ಬೇಕಾದ ಕಚ್ಚಾ ವಸ್ತುವನ್ನು ಅಪಾರ ಪ್ರಮಾಣದಲ್ಲಿ ಸಂಗ್ರಹಿಸಬೇಕಾಗಿತ್ತು.

ADVERTISEMENT

ಬೃಹತ್ ಗಂಗಾಳವನ್ನು ಒಲೆಯ ಮೇಲಿಟ್ಟ ನಂತರ ಅದನ್ನು ಅರಿಸಿನದಿಂದ ತುಂಬಲಾಗುತ್ತಿತ್ತು. ನೀರು ಹಾಕುವುದು, ಕುದಿಯುತ್ತಿರುವ ಅರಿಸಿನದ ಮೇಲೆ ಗೋಣಿ ಚೀಲವನ್ನು ಹಾಕಿ ಮುಚ್ಚಲಾಗುತ್ತಿತ್ತು. ಈ ಅರಿಸಿನ ಕುದಿಯಲು ನಾಲ್ಕಾರು ದಿನಗಳನ್ನು ತೆಗೆದುಕೊಳ್ಳುತ್ತಿತ್ತು. ಕುದಿಸಿದ ಅರಿಸಿನವನ್ನು ತೆಗೆದು ಜಾಳಿಗೆ ಇರುವ ಬುಟ್ಟಿಗಳಿಗೆ ಹಾಕಿ, ಅದನ್ನು ನೆಲದಲ್ಲಿ ಒಣಗಲು ಹಾಕುತ್ತಿದ್ದರು. ಇದು ಹದಿನೈದು ದಿನಗಳಿಂದ ಹೆಚ್ಚಿನ ದಿನಗಳ ಕೆಲಸವಾಗಿತ್ತು. ಅರಿಸಿನ ಕುದಿಸುವುದು ರೈತರಿಗೆ ಸವಾಲಿನ ಕಾರ್ಯವಾಗಿತ್ತು.

ಆದರೆ ಈಗ ಅರಿಸಿನ ಕುದಿಸಲು ರೈತರು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿರುವುದರಿಂದ ಇದು ಅತ್ಯಂತ ಹಗುರವಾದ ಕೆಲಸವಾಗಿದೆ. ಈಗ ರೈತರು ಅರಿಸಿನ ಕುದಿಸಲು ಬಾಯ್ಲರ್ ಗಳನ್ನು ಬಳಸುತ್ತಿದ್ದಾರೆ. .

ಒಂದು ಬಾರಿ ಬಾಯ್ಲರ್ ನಲ್ಲಿ ಅಂದಾಜು ಅಂದಾಜು 80 ಕೆಜಿಯಿಂದ ಒಂದು ಕ್ವಿಂಟಲ್ ವರೆಗೆ ಅರಿಸಿನ ಹಾಕುತ್ತಾರೆ. ನಂತರ ಬಾಯ್ಲರ್ ಗೆ ಸ್ವೀಮ್ ಕೊಡುತ್ತಾರೆ. ಕೇವಲ ಹದಿನೈದು ನಿಮಿಷದಲ್ಲಿ ಬಿಸಿಬಿಸಿ ಅರಿಸಿನ ಹಬೆಯ ಜೊತೆಗೆ ಹೊರ ಬರುತ್ತದೆ. ನಂತರ ಒಬ್ಬ ಕೂಲಿ ಕಾರ್ಮಿಕ ಅದನ್ನು ಒಣಗಲು ಹಾಕುತ್ತಾರೆ. ಇದು ಕೇವಲ ನಾಲ್ಕಾರು ಜನ ಕೂಲಿ ಕಾರ್ಮಿಕರು ಕೂಡಿಕೊಂಡು ಮಾಡುವ ಕಾರ್ಯವಾಗಿದೆ. ಇದಕ್ಕೆ ತಗಲುವ ವೆಚ್ಚ ಕೂಡಾ ಕಡಿಮೆಯಾಗಿದೆ. ಒಂದು ಬಾಯ್ಲರ್ ಅರಿಸಿನ ಕುದಿಸಲು ರೂ. 200 ರಿಂದ 250 ರವರೆಗೆ ನೀಡಲಾಗುತ್ತದೆ. ಒಂದು ದಿನದಲ್ಲಿ ಅಂದಾಜು 15 ರಿಂದ 18 ಕ್ವಿಂಟಲ್ ದಷ್ಟು ಅರಿಸಿನ ಕುದಿಸಲು ಸಾಧ್ಯವಾಗುತ್ತದೆ. ಈ ರೀತಿಯಾಗಿ ಅರಿಸಿನ ಕುದಿಸುವುದರಿಂದ ಅರಿಸನಕ್ಕೂ ಯಾವುದೆ ಧಕ್ಕೆಯಾಗುವುದಿಲ್ಲ. ಗಂಗಾಗಳದಲ್ಲಿ ಕುದಿಸುವುದರಿಂದ ಬಹಳಷ್ಟು ಅರಿಸಿನಗಳು ಮುರಿಯುತ್ತಿದ್ದವು ಎನ್ನುತ್ತಾರೆ ಸ್ಥಳೀಯ ರೈತರಾದ ಸಿದ್ದು ಗೌಡಪ್ಪನವರ.

ಅರಿಸಿನ ಪಾಲಿಷ್ ಮಾಡುವ ಬ್ಯಾರಲ್ ನ್ನು ಕೂಡಾ ನಿರಂತರವಾಗಿ ತಿರುಗಿಸಬೇಕಾಗಿತ್ತು. ಇದು ಕೂಡಾ ಕಷ್ಟದಾಯಕವಾದ ಕಾರ್ಯವೇ. ಈಗ ಟ್ರ್ಯಾಕ್ಟರ್ ಗಳಿಗೆ ಬ್ಯಾರಲ್ ಅಳವಡಿಸುತ್ತಾರೆ. ಇವುಗಳಿಗೆ ಅರಿಸಿನ ತುಂಬಿ ಊರ ಹೊರಗಿನ ಪ್ರದೇಶದಲ್ಲಿ ನಿಂತುಕೊಂಡು ಪಾಲಿಷ್ ಮಾಡಿಕೊಂಡು ಬರುತ್ತಾರೆ.

ಕೃಷಿ ಕಾರ್ಮಿಕರ ಕೊರತೆ, ಹತ್ತಾರು ದಿನಗಳ ಕಾಲ ಕುದಿಸುವುದು, ಒಲೆ ನಿರ್ಮಾಣ, ಪ್ರತಿವರ್ಷ ಹೊಸ ಗಂಗಾಳದ ನಿರ್ಮಾಣ, ಉರುವಲಕ್ಕೆ ಮುಕ್ತಿ ಪಡೆದುಕೊಂಡ ರೈತರು ಈಗ ಅರಿಸಿನ ಸಂಸ್ಕರಣಕ್ಕೆ ನೂತನ ಮಾರ್ಗವನ್ನು ಕಂಡು ಹಿಡಿದಿದ್ದು, ಇದರಿಂದಾಗಿ ರೈತರಿಗೆ ಬಹಳಷ್ಟು ಅನುಕೂಲವಾಗಿದೆ.

ಬನಹಟ್ಟಿ ಸಮೀಪದ ತೋಟದಲ್ಲಿ ಬಾಯ್ಲರ್ ಮೂಲಕ ಕುದಿಸಿದ ಅರಿಸಿನವನ್ನು ಒಣಗಲು ಹಾಕುತ್ತಿರುವುದು

Highlights - ಒಂದು ವಾರದ ಕೆಲಸ ಒಂದೇ ದಿನದಲ್ಲಿ ಗಂಗಾಳದಲ್ಲಿ ಕುದಿಸುವುದು ಕಷ್ಟದ ಕಾರ್ಯ ದಿನಕ್ಕೆ 17 ರಿಂದ 18 ಕ್ವಿಂಟಲ್ ಕುದಿಸುತ್ತಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.