ADVERTISEMENT

ತೇರದಾಳ: ಗ್ರಂಥಾಲಯಗಳಿಗೆ ದಿನಪತ್ರಿಕೆ ಸ್ಥಗಿತ

ಸ್ಪರ್ಧಾ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳು, ಸಾಮಾನ್ಯ ಓದುಗರಿಗೆ ತೊಂದರೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2024, 5:37 IST
Last Updated 5 ಮಾರ್ಚ್ 2024, 5:37 IST
ತೇರದಾಳ ತಾಲ್ಲೂಕು ಸಸಾಲಟ್ಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಂಥಾಲಯ
ತೇರದಾಳ ತಾಲ್ಲೂಕು ಸಸಾಲಟ್ಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಂಥಾಲಯ   

ತೇರದಾಳ: ತಾಲ್ಲೂಕಿನ ಮೂರು ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯ ಗ್ರಂಥಾಲಯಗಳಿಗೆ ಸರಬರಾಜಾಗುತ್ತಿದ್ದ ಪತ್ರಿಕೆಗಳನ್ನು ನಿಲ್ಲಿಸಿದ್ದರಿಂದ ಸ್ಪರ್ಧಾ ಪರೀಕ್ಷೆಗೆ ಸಿದ್ಧತೆ ನಡೆಸಿದ ಅಭ್ಯರ್ಥಿಗಳು, ಸಾಮಾನ್ಯ ಓದುಗರು ತೊಂದರೆ ಎದುರಿಸುತ್ತಿದ್ದಾರೆ.

ತಾಲ್ಲೂಕಿನ ಸಸಾಲಟ್ಟಿ, ಗೋಲಬಾವಿ ಹಾಗೂ ಹನಗಂಡಿ ಗಂಥಾಲಯಗಳಿಗೆ ಅಗತ್ಯ ಇರುವ ದಿನಪತ್ರಿಕೆಗಳ ಬಿಲ್‌ ಅನ್ನು ಗ್ರಾಮ ಪಂಚಾಯಿತಿಗಳು ಪಾವತಿಸದ್ದರಿಂದ ಪತ್ರಿಕೆಗಳ ಸರಬರಾಜು ಸ್ಥಗಿತಗೊಂಡಿದೆ.

ಓದುಗರಿಗಾಗಿ ಹನಗಂಡಿ ಗಂಥಾಲಯದ ಗ್ರಂಥಪಾಲಕ, ತಾವೇ ಪತ್ರಿಕೆಗಳನ್ನು ಖರೀದಿಸಿ ಕೊಡುತ್ತಿದ್ದರೆ, ಸಸಾಲಟ್ಟಿಯವರು ಒಂದು ಪತ್ರಿಕೆ ತರಿಸುತ್ತಿದ್ದಾರೆ. ಇದರಿಂದ ಜನರು ಮಾಹಿತಿ ಸಿಗದೇ ಪರದಾಡುತ್ತಿದ್ದಾರೆ. ಮಾಹಿತಿ, ದೈನಂದಿನ ಆಗು–ಹೋಗುಗಳನ್ನು ತಿಳಿದುಕೊಳ್ಳಲು ಟಿವಿ, ಮೊಬೈಲ್ ಮೊರೆ ಹೋಗುತ್ತಿದ್ದಾರೆ.

ADVERTISEMENT

ಎಲ್ಲ ಗ್ರಂಥಾಲಯಗಳಿಗೆ ದಿನಪತ್ರಿಕೆ, ವಾರ, ಮಾಸ ಪತ್ರಿಕೆ ಮತ್ತು ನಿಯತಕಾಲಿಕೆಗಳನ್ನು ಸರಬರಾಜು ಮಾಡಿದ ಬಿಲ್‌ ಮೊತ್ತವನ್ನು ಜಿಲ್ಲಾ ಗ್ರಂಥಾಲಯ ಭರಿಸುತ್ತಿತ್ತು. 2019ರಿಂದ ಅದರ ಜವಾಬ್ದಾರಿಯನ್ನು ಆಯಾ ಗ್ರಾಮ ಪಂಚಾಯ್ತಿಗಳಿಗೆ ವಹಿಸಲಾಗಿದೆ. ಪಂಚಾಯಿತಿ ಅಧಿಕಾರಿಗಳು ಬಿಲ್‌ ಪಾವತಿಸದ್ದರಿಂದ ಪತ್ರಿಕೆಗಳ ಸರಬರಾಜು ಮಾಡುತ್ತಿಲ್ಲ. ಪಂಚಾಯಿತಿ ತೆರಿಗೆಯಲ್ಲಿ ಗ್ರಂಥಾಲಯ ಕರ ವಸೂಲು ಮಾಡಲಾಗುತ್ತದೆ. ಆದರೆ, ಅದನ್ನು ಬೇರೆ ಉದ್ದೇಶಕ್ಕೆ ಬಳಸಲಾಗುತ್ತದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಈ ಪಂಚಾಯ್ತಿಗೆ ಬಂದು ಒಂದು ವರ್ಷ ಕಳೆಯಿತು. ಗ್ರಂಥಾಲಯಗಳಿಗೆ ಪತ್ರಿಕೆಗಳ ಸರಬರಾಜನ್ನು ನಿಲ್ಲಿಸಲು ಹೇಳಿದ್ದು, ಹಳೆಯ ಪೇಪರ್ ಮಾರಾಟ ಮಾಡಿ ಬಿಲ್ ಭರಿಸಲಾಗುವುದು’ ಎಂದು ಸಸಾಲಟ್ಟಿ ಗ್ರಾಮ ಪಂಚಾಯ್ತಿ ಪಿಡಿಒ ಎನ್.ಎಸ್.ಪತ್ರಿಮಠ ತಿಳಿಸಿದರು.

‘ಮೊದಲು ಬಹಳಷ್ಟು ಪತ್ರಿಕೆಗಳು ಬರುತ್ತಿದ್ದವು. ಆಗ ಓದುಗರೂ ಹೆಚ್ಚಾಗಿದ್ದರು. ಈಗ ಪತ್ರಿಕೆಗಳು ಬರುತ್ತಿಲ್ಲ. ಪಂಚಾಯ್ತಿಯವರು ದಿನಪತ್ರಿಕೆ ತರಿಸುವ ವ್ಯವಸ್ಥೆ ಮಾಡಬೇಕು. ಇದರಿಂದ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅನುಕೂಲವಾಗುತ್ತದೆ' ಎಂದು ಓದುಗ ದಶರಥ ಕಾಂಬಳೆ ಹೇಳಿದರು.

ಪತ್ರಿಕೆಗಳ ಬಿಲ್ ಭರಿಸುವಂತೆ ಪತ್ರಿಕೆ ತರಿಸುವಂತೆ ಮೌಖಿಕವಾಗಿ ಸೂಚಿಸಲಾಗಿತ್ತು. ಕೂಡಲೇ ಲಿಖಿತವಾಗಿ ನೋಟಿಸ್ ನೀಡಲಾಗುವುದು
- ಸಿದ್ದಪ್ಪ ಪಟ್ಟಿಹಾಳ ತಾಲ್ಲೂಕು ಪಂಚಾಯ್ತಿ ಇಒ ರಬಕವಿ-ಬನಹಟ್ಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.