ಗುಳೇದಗುಡ್ಡ: ‘ನುಡಿದಂತೆ ನಡೆಯಬೇಕು. ನಡೆದಂತೆ ನುಡಿಯಬೇಕು. ಉತ್ತಮ ನಡೆ, ನುಡಿ ನಮ್ಮನ್ನು ಕಾಪಾಡುತ್ತವೆ’ ಎಂದು ನಿಜಗುಣಪ್ರಭು ತೋಂಟದಾರ್ಯ ಶ್ರೀ ಹೇಳಿದರು.
ಗುರುಸಿದ್ದೇಶ್ವರ ಬೃಹನ್ಮಠದ ಗುರುಸಿದ್ದ ಪಟ್ಟದಾರ್ಯ ಶ್ರೀಗಳ 39ನೇ ವಾರ್ಷಿಕ ಪುಣ್ಯಾರಾಧನೆಯ ಅಂಗವಾಗಿ ಏರ್ಪಡಿಸಿರುವ ಮಾಸಿಕ ಪ್ರವಚನದಲ್ಲಿ ಮಂಗಳವಾರ ಪ್ರವಚನ ನೀಡಿದ ಅವರು, ‘ಪುರುಷರು ಹೆಂಡತಿಯನ್ನು ಬಿಟ್ಟು ಉಳಿದ ಹೆಣ್ಣು ಮಕ್ಕಳನ್ನು ಅಕ್ಕ–ತಂಗಿಯರನ್ನಾಗಿ ಕಾಣಬೇಕು. ಅದೇ ರೀತಿ ಹೆಣ್ಣು ಮಕ್ಕಳು ಗಂಡನನ್ನು ಬಿಟ್ಟು ಉಳಿದವರನ್ನು ಸಹೋದರರನ್ನಾಗಿ ಕಾಣಬೇಕು. ಅದುವೇ ಮನುಷ್ಯ ಧರ್ಮವಾಗಿದೆ’ ಎಂದರು.
‘ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು, ನುಡಿದರೆ ಲಿಂಗ ಮೆಚ್ಚಿ ಅಹುದವುದೆನಬೇಕು, ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮನೆಂತೊಲಿವನಯ್ಯ ಎಂದು ಬಸವಣ್ಣ ಹೇಳಿದ್ದಾರೆ. ಅವರ ಮಾರ್ಗದಲ್ಲಿ ಎಲ್ಲರೂ ನುಡಿದಂತೆ ನಡೆದುಕೊಳ್ಳಬೇಕು’ ಎಂದು ತಿಳಿಸಿದರು.
‘ತಂದೆ ತಾಯಿ, ಹೆಂಡತಿ ಮಕ್ಕಳು, ದೇಹ, ರೂಪ, ಬೆಳ್ಳಿ, ಬಂಗಾರ, ಹಣ, ಅಂತಸ್ತು ಯಾರೂ, ಯಾವುದೂ ಶಾಶ್ವತವಲ್ಲ. ಅದು ಯಾವುದೂ ನಮ್ಮ ಜೊತೆ ಬರುವುದಿಲ್ಲ, ಬದುಕಿರುವಾಗ ನಮ್ಮವರು, ತಮ್ಮವರೆಂದು ತಿಳಿದು ಹಸನಾದ ಬದುಕು ಮಾಡಬೇಕು. ಅದಕ್ಕೆ ಅಂತರಂಗದ ಅಧ್ಯಾತ್ಮದ ಪರೋಪಕಾರದ ಶಕ್ತಿ ಗಟ್ಟಿಯಾಗಿರಬೇಕು. ಮನುಷ್ಯನಿಗೆ ಬಹಿರಂಗ ಸೌಂದರ್ಯಕ್ಕಿಂತ ಅಂತರಂಗದ ಸೌಂದರ್ಯ ಮುಖ್ಯವಾಗಬೇಕು’ ಎಂದು ಹೇಳಿದರು.
‘ಬುದ್ದ ರೋಗಿ, ಸಾವನ್ನು ನೋಡಿ, ನನಗೂ ಅದು ಬರುತ್ತದೆ ಎಂಬುದನ್ನು ಅರಿತು ಆಸೆ ತೊರೆದು ಮಹಾತ್ಮನಾದ. ಮನುಷ್ಯನಿಗೆ ಸಾವು ಖಚಿತ. ಸತ್ತಾಗ ಏನನ್ನು ತೆಗೆದುಕೊಂಡು ಹೋಗುವುದಿಲ್ಲ ಎಂಬ ಸತ್ಯದ ಅರಿವಿರಬೇಕು. ದ್ವೇಷ ಮಾಡದೇ ಪ್ರೀತಿ ವಿಶ್ವಾಸದಿಂದ ಬದುಕಿ ಸಾರ್ಥಕತೆ ಪಡೆಯಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.