ADVERTISEMENT

ಆಸಂಗಿ | ಕಿತ್ತುಹೋದ ರಸ್ತೆ; ಶೌಚಾಲಯವಿಲ್ಲದ ಗ್ರಾಮ

ವಿಶ್ವಜ ಕಾಡದೇವರ
Published 20 ಡಿಸೆಂಬರ್ 2023, 4:46 IST
Last Updated 20 ಡಿಸೆಂಬರ್ 2023, 4:46 IST
ರಬಕವಿ ಬನಹಟ್ಟಿ ತಾಲ್ಲೂಕಿನ ಆಸಂಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಾರ್ಡ್ 6 ರಲ್ಲಿ ಜೆಜೆಎಂ ಪೈಪ್ ಲೈನ್ ಆಳವಡಿಸಲು ರಸ್ತೆಯನ್ನು ಕಿತ್ತುಹಾಕಲಾಗಿದೆ
ರಬಕವಿ ಬನಹಟ್ಟಿ ತಾಲ್ಲೂಕಿನ ಆಸಂಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಾರ್ಡ್ 6 ರಲ್ಲಿ ಜೆಜೆಎಂ ಪೈಪ್ ಲೈನ್ ಆಳವಡಿಸಲು ರಸ್ತೆಯನ್ನು ಕಿತ್ತುಹಾಕಲಾಗಿದೆ   

ರಬಕವಿ ಬನಹಟ್ಟಿ: ತಾಲ್ಲೂಕಿನಿಂದ ಕೂಗಳತೆಯ ದೂರದಲ್ಲಿರುವ ಆಸಂಗಿ ಗ್ರಾಮವು ಮೂಲ ಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿದೆ.

ವಿಧಾನಸಭೆ ಚುನಾವಣೆಗಿಂತ ಮುಂಚಿತವಾಗಿ ಆರಂಭಿಸಿದ್ದ ಕೆಲವು ಅಭಿವೃದ್ಧಿ ಕಾಮಗಾರಿಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಅಪೂರ್ಣ ಕಾಮಗಾರಿಗಳಿಂದಾಗಿ ಜನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಗ್ರಾಮದ ಗುಡ್ಡದ ಪ್ರದೇಶದಲ್ಲಿ ವಾಸಿಸುತ್ತಿರುವ ಬಡ ಜನರು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಸರಿಯಾದ ರಸ್ತೆಗಳು, ರಸ್ತೆಯ ಬದಿಗೆ ಚರಂಡಿ ವ್ಯವಸ್ಥೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಈ ಭಾಗದಲ್ಲಿ ಶೌಚಾಲಯದ ವ್ಯವಸ್ಥೆಯೇ ಇಲ್ಲವಾಗಿದೆ.

ಜೆಜೆಎಂ ಯೋಜನೆಯಡಿ ಮನೆಮನೆಗೆ ನೀರು ಪೂರೈಕೆಯ ಮಹತ್ವದ ಯೋಜನೆಗಾಗಿ ಆರು ತಿಂಗಳ ಹಿಂದೆ ಇಲ್ಲಿನ ವಾರ್ಡ್ ಸಂಖ್ಯೆ 6 ರಲ್ಲಿ ರಸ್ತೆಯನ್ನು ಅಗೆಯಲಾಗಿದೆ. ಕೆಲವು ಕಡೆ ಪೈಪ್ ಅಳವಡಿಸಿದರೆ ಇನ್ನೂ ಕೆಲವು ಕಡೆಗಳಲ್ಲಿ ಪೈಪ್‌ಗಳನ್ನು ಅಳವಡಿಸದೆ ಹಾಗೇ ಕೈಬಿಡಲಾಗಿದೆ. ಸಾಕಷ್ಟು ಜನ ವಸತಿ ಇರುವುದರಿಂದ ರಾತ್ರಿ ಸಮಯದಲ್ಲಿ ತಿರುಗಾಡುವವರಿಗೆ ಮತ್ತು ವಾಹನ ಚಾಲಕರಿಗೆ ಬಹಳಷ್ಟು ಸಮಸ್ಯೆಯಾಗಿದೆ.

ADVERTISEMENT

ಪೈಪ್ ಅಳವಡಿಸುವುದಕ್ಕಾಗಿ ಉತ್ತಮವಾಗಿದ್ದ ರಸ್ತೆಯನ್ನು ಅಗೆದು ಹಾಳು ಮಾಡಲಾಗಿದೆ. ಇವುಗಳನ್ನು ದುರಸ್ತಿ ಮಾಡಲು ಹೇಳಿದರೂ ಅಧಿಕಾರಿಗಳು ಇತ್ತ ಗಮನ ನೀಡುತ್ತಿಲ್ಲ. ರಸ್ತೆಯ ಬದಿಗೆ ಚರಂಡಿ ಕಾಮಗಾರಿ ಮಂಜೂರಾಗಿದ್ದರೂ ಚರಂಡಿಗಳನ್ನು ನಿರ್ಮಾಣ ಮಾಡಿಲ್ಲ. ಇದರಿಂದಾಗಿ ಮನೆ ಬಳಕೆಯ ನೀರು ರಸ್ತೆಯ ಮೇಲೆ ಹರಿದಾಡುತ್ತಿದೆ. ಈ ಕೊಳಚೆ ದಾಟಿಕೊಂಡು ತಿರುಗಾಡುವುದು ಸಮಸ್ಯೆಯಾಗಿದೆ. ಕೆಲವು ಕಡೆಗಳಲ್ಲಿ ಚರಂಡಿ ನೀರು ಸಂಗ್ರಹವಾಗಿ ಸೊಳ್ಳೆಗಳ ಉತ್ಪತ್ತಿಯ ತಾಣವಾಗಿ ಮಾರ್ಪಟ್ಟಿದೆ.

ಈ ಭಾಗದಲ್ಲಿ ಶೌಚಾಲಯವಿಲ್ಲದೆ ತೊಂದರೆಯನ್ನು ಅನುಭವಿಸಬೇಕಾಗಿದೆ. ಬೆಳಗಿನ ಜಾವ ಮತ್ತು ಕತ್ತಲೆಯಲ್ಲಿ ಮಾತ್ರ ಶೌಚಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಜೊತೆಗೆ ವಿಷಜಂತುಗಳ ಕಾಟವೂ ಕೂಡಾ ಹೆಚ್ಚಾಗಿದೆ.

‘ಗುಡ್ಡಗಾಡಿನಲ್ಲಿ ವಾಸಿಸುವ ಸುಮಾರು 500 ಕ್ಕಿಂತ ಹೆಚ್ಚು ಮನೆಗಳಿಗೆ ಪಂಚಾಯ್ತಿ ಉತಾರಗಳನ್ನು ನೀಡಿಲ್ಲ. ಆದರೆ ಪಂಚಾಯ್ತಿ ಅಧಿಕಾರಿಗಳು ಇಲ್ಲಿನ ಮನೆಗಳಿಂದ ₹3,550 ತೆರಿಗೆಯ ಪಡೆದುಕೊಂಡಿದ್ದಾರೆ’ ಎನ್ನುತ್ತಾರೆ ಗ್ರಾಮಸ್ಥರಾದ ದುಂಡಪ್ಪ ಸಾಲ್ಗುಡೆ, ಈರಯ್ಯ ಮಠಪತಿ, ಅಶೋಕ ಗಾಯಕವಾಡ, ಅಶೋಕ ಕಾಂಬಳೆ ಅವರು.

ಈ ಪ್ರದೇಶದಲ್ಲಿ ಮೂರು ಜನ ಗ್ರಾಮ ಪಂಚಾಯ್ತಿ ಸದಸ್ಯರಿದ್ದರೂ ಯಾವುದೆ ಪ್ರಯೋಜನವಾಗುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು.

ಪಂಚಾಯ್ತಿ ವ್ಯಾಪ್ತಿಯ ಲಮಾಣಿ ತಾಂಡಾದಲ್ಲಿಯ ಜನರು ಕೂಡಾ ವಿದ್ಯುತ್ ದೀಪ, ರಸ್ತೆ ಹಾಗೂ ಶೌಚಾಲಯವಿಲ್ಲದೆ ತೊಂದರೆಯಲ್ಲಿದ್ದಾರೆ. ಇಲ್ಲಿರುವ ನೂರು ಮನೆಗಳಿಗೂ ಇದುವರೆಗೆ ಹಕ್ಕು ಪತ್ರಗಳನ್ನು ನೀಡಿಲ್ಲ.

ಜೆಜೆಎಂ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ. ಆದಷ್ಟು ಬೇಗನೆ ಕಾಮಗಾರಿ ಆರಂಭಿಸಿ ಪೈಪ್ ಅಳವಡಿಸಿ ಅಗೆದ ರಸ್ತೆಗಳನ್ನು ಕೂಡಾ ದುರಸ್ತಿ ಮಾಡಲಾಗುವುದು.
ಪ್ರವೀಣ ಶಿರಬೂರ, ಪಿಡಿಓ, ಗ್ರಾಮ ಪಂಚಾಯ್ತಿ ಆಸಂಗಿ
ಅಧಿಕಾರ ವಹಿಸಿಕೊಂಡು ಕೇವಲ ಎರಡು ತಿಂಗಳು ಮಾತ್ರ ಆಗಿದೆ. ಆದಷ್ಟು ಬೇಗನೆ ಕಾಮಗಾರಿ ಆರಂಭಿಸಲಾಗುವುದು. ಶೌಚಾಲಯ ನಿರ್ಮಾಣಕ್ಕೆ ಗಮನ ಹರಿಸಲಾಗುವುದು
ಪುಷ್ಪಾ ರಾವಳ, ಅಧ್ಯಕ್ಷರು, ಗ್ರಾಮ ಪಂಚಾಯಿತಿ ಆಸಂಗಿ
ಆಸಂಗಿ ಗ್ರಾಮದ ಗುಡ್ಡದ ಪ್ರದೇಶದಲ್ಲಿ ಚರಂಡಿಗಳಲ್ಲದೆ ರಸ್ತೆ ತುಂಬೆಲ್ಲ ಕೊಳಚೆ ಹರಿಯುತ್ತಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.