ADVERTISEMENT

ವಿದ್ಯುತ್ ಸಂಪರ್ಕವೇ ಇಲ್ಲದ ಬಿಸನಾಳಕೊಪ್ಪ

ಶ್ರೀಧರ ಗೌಡರ
Published 29 ಜೂನ್ 2024, 5:03 IST
Last Updated 29 ಜೂನ್ 2024, 5:03 IST
ತಗಡಿನ ಶೆಡ್ಡಿನಲ್ಲಿ ವಾಸ ಇರುವ ಕುಟುಂಬಗಳು
ತಗಡಿನ ಶೆಡ್ಡಿನಲ್ಲಿ ವಾಸ ಇರುವ ಕುಟುಂಬಗಳು   

ಕೂಡಲಸಂಗಮ: ಹುನಗುಂದ ತಾಲ್ಲೂಕಿನ ಬಿಸನಾಳ ಕೊಪ್ಪ ಗ್ರಾಮದಲ್ಲಿ ವಿದ್ಯುತ್ ಸಂಪರ್ಕವೇ ಇಲ್ಲ. ಮೊಬೈಲ್ ಚಾರ್ಜ್‌ ಮಾಡಿಕೊಳ್ಳಲೂ ಪಕ್ಕದ ಊರಿಗೆ ಅಲೆಯಬೇಕಿದೆ.

ನಾರಾಯಣಪುರ ಬಸವಸಾಗರ ಜಲಾಶಯದ ಹಿನ್ನೀರಿನಿಂದ 2007ರಲ್ಲಿ ಮುಳಗಡೆಗೊಂಡ ಗ್ರಾಮದ ಜನ 13 ವರ್ಷ ತಗಡಿನ ಶೆಡ್ಡಿನಲ್ಲಿ ಆಸರೆ ಪಡೆದು ಅನೇಕ ಸಮಸ್ಯೆಗಳನ್ನು ಎದುರಿಸಿದ್ದಾರೆ. ನೆಮ್ಮದಿಯಿಂದ ಬದುಕಲು ನೂತನ ಪುನರ್ವಸತಿ ಕೇಂದ್ರಕ್ಕೆ ಬಂದು ಎರಡು ವರ್ಷ ಕಳೆಯಲು ಬಂದರೂ ಇನ್ನೂ ವಿದ್ಯುತ್ ಸಂಪರ್ಕ ಇಲ್ಲದೇ ಕತ್ತಲಿನಲ್ಲಿಯೇ ಜೀವನ ನಡೆಸುತ್ತಿದ್ದಾರೆ.

ಪುನರ್ವಸತಿ ಪುನರ್ ನಿರ್ಮಾಣ ಇಲಾಖೆ ಗ್ರಾಮದ ಶೇ 60 ಕುಟುಂಬಗಳಿಗೆ ಹಕ್ಕುಪತ್ರ ನೀಡಿದೆ. ಉಳಿದ ಶೇ 40 ಕುಟುಂಬಗಳಿಗೆ ಹಕ್ಕು ಪತ್ರ ನೀಡಿಲ್ಲ. ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಇಲ್ಲದೇ ಇರುವುದರಿಂದ ಬಹುತೇಕ ಜನ ತಗಡಿನ ಶೆಡ್ಡು ಹಾಕಿಕೊಂಡು ಜೀವನ ನಡೆಸುತ್ತಿದ್ದಾರೆ. 8 ಮನೆಗಳು ಮಾತ್ರ ನಿರ್ಮಾಣಗೊಂಡಿವೆ. ವಿದ್ಯುತ್ ಆಧಾರಿತ ನಿತ್ಯದ ಚಟುವಟಿಕೆಗಳಿಗೆ ಪಕ್ಕದ ಊರನ್ನೇ  ಇಲ್ಲಿಯ ಕುಟುಂಬಗಳು ಅವಲಂಬಿಸಿವೆ.

ADVERTISEMENT

‘ಪುನರ್ ವಸತಿ ಕೇಂದ್ರದಲ್ಲಿ ಚೇಳು, ಹಾವುಗಳು ಇವೆ. ರಾತ್ರಿ ವೇಳೆಯಲ್ಲಿ ನಿತ್ಯ ಒಬ್ಬರಿಗಾದರೂ ಚೇಳು ಕಚ್ಚುತ್ತಿದೆ. ಐವರಿಗೆ ಹಾವು ಕಚ್ಚಿವೆ. ವಿದ್ಯುತ್ ಇರದೇ ಇರುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗಿದೆ. ಬರುವ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಲ್ಪಿಸುವ ಭರವಸೆ ಕೊಟ್ಟು ಹೊಗುತ್ತಿದ್ದಾರೆ. ಈಡೇರಿಸುವ ಕಾರ್ಯ ಮಾಡಿಲ್ಲ. ವಿದ್ಯುತ್ ಸಂಪರ್ಕ ಕಲ್ಪಿಸಿ ಎಂದು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ವಿನಂತಿಸಿಕೊಂಡು ಸಾಕಾಗಿದೆ’ ಎಂದು ಗ್ರಾಮಸ್ಥರು ನೋವು ತೊಡಿಕೊಂಡರು.

ಗ್ರಾಮ ಪಂಚಾಯತಿಯಿಂದ ಕೆಲವರಿಗೆ ಸೋಲಾರ ಲ್ಯಾಂಪ್ ನೀಡಿದ್ದು ಅವುಗಳಿಂದ 1 ರಿಂದ 2 ಗಂಟೆ ಮಾತ್ರ ಬೆಳಕು ಬರುತ್ತದೆ. ಮಳೆ ಬಂದರೆ, ಮೋಡ ಕವಿದರೆ ಕತ್ತಲ್ಲಿನಲ್ಲಿಯೇ ಜೀವನ ನಡೆಸುವಂತಾಗಿದೆ.

13 ವರ್ಷ ತಗಡಿನ ಶೆಡ್ಡಿನಲ್ಲಿ ವನವಾಸ ಅನುಭವಿಸಿದ ನಾವು ನೂತನ ಪುನರ್ ವಸತಿ ಕೇಂದ್ರಕ್ಕೆ ಬಂದರೆ ಸಮಸ್ಯೆ ಪರಿಹಾರವಾಗುವುದು ಎಂದು ಇಲ್ಲಿಗೆ ಬಂದರೆ, ಇಲ್ಲಿಯೂ ಸಮಸ್ಯೆಗಳ ಸರಮಾಲೆಯೇ ಇದೆ. ಎರಡು ವರ್ಷ ಕಳೆಯಲು ಬಂದರೂ ಇನ್ನೂ ವಿದ್ಯುತ್ ಸಂಪರ್ಕವನ್ನೂ ಅಧಿಕಾರಿಗಳು ಕಲ್ಪಿಸುತ್ತಿಲ್ಲ. ನಿತ್ಯವೂ ವಿದ್ಯುತ್ ಆಧಾರಿತ ಚಟುವಟಿಕೆಗೆ ಪಕ್ಕದ ಊರಿಗೆ ಅಲೆಯುವಂತಾಗಿದೆ. ಸಂಬಂಧಿಸಿದ ಅಧಿಕಾರಿಗಳೂ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಗ್ರಾಮದ ಪರಶುರಾಮ ಹಳ್ಳದ, ಮಹಾಂತೇಶ ಹಾದಿಮನಿ, ಗಿರಿಮಲ್ಲಪ್ಪ ಬೆನಕಟ್ಟಿ, ಹನಮಂತ ಚಲವಾದಿ ಒತ್ತಾಯಿಸಿದರು.

ಪುನರ ವಸತಿ ಕೇಂದ್ರದಲ್ಲಿ ನಿರ್ಮಾಣಗೊಂಡ ಮನೆಗಳು
ಆರ್ಥಿಕ ಅನುಮೋದನೆ ಅಗತ್ಯ
ಬಿಸನಾಳಕೊಪ್ಪಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಟೆಂಡರ್ ಕರೆದಿದ್ದು ಆರ್ಥಿಕ ಅನುಮೋದನೆ ಪಡೆಯಲು ಬಿಟಿಡಿಎ ಮುಖ್ಯ ಎಂಜಿನಿಯರ್‌ಗೆ ಕಳುಹಿಸಿದೆ. ಅನುಮೋದನೆ ಪಡೆದು ಕೆಲಸ ಆರಂಭಿಸಲಾಗುವುದು ಎಂದು ಯುಕೆಪಿ ಮಹಾ ವ್ಯವಸ್ಥಾಪಕ ರಮೇಶ ಕಳಸದ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.