ADVERTISEMENT

ಜಗದಾಳ: ಮೂಲಸೌಕರ್ಯ ಮರೀಚಿಕೆ

ರಸ್ತೆ, ಶೌಚಾಲಯ, ಶುದ್ಧ ಕುಡಿಯುವ ನೀರಿನ ಸಮಸ್ಯೆ

ವಿಶ್ವಜ ಕಾಡದೇವರ
Published 24 ಜುಲೈ 2024, 5:21 IST
Last Updated 24 ಜುಲೈ 2024, 5:21 IST
ರಬಕವಿ ಬನಹಟ್ಟಿ ತಾಲ್ಲೂಕಿನ ಜಗದಾಳ ಗ್ರಾಮದ ಕಾಲೊನಿ ಸಿ.ಸಿ ರಸ್ತೆ ಹಾಳಾಗಿರುವುದು
ರಬಕವಿ ಬನಹಟ್ಟಿ ತಾಲ್ಲೂಕಿನ ಜಗದಾಳ ಗ್ರಾಮದ ಕಾಲೊನಿ ಸಿ.ಸಿ ರಸ್ತೆ ಹಾಳಾಗಿರುವುದು   

ರಬಕವಿ ಬನಹಟ್ಟಿ: ಸಮೀಪದ ಜಗದಾಳ ಗ್ರಾಮದ ದುರ್ಗಾ ದೇವಿಯ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ ವಾಸಿಸುತ್ತಿರುವ ಎರಡು ನೂರಕ್ಕೂ ಹೆಚ್ಚು ಕುಟುಂಬಗಳ ಸದಸ್ಯರು ಮೂಲಸೌಕರ್ಯಗಳಿಂದ ವಂಚಿತರಾಗಿದ್ದು, ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಕುಡಿಯುವ ನೀರಿನ ಸೌಲಭ್ಯ, ರಸ್ತೆ, ಚರಂಡಿ, ಪುರುಷ ಮತ್ತು ಮಹಿಳೆಯರಿಗೆ ಶೌಚಾಲಯ ಸೇರಿದಂತೆ ಇಲ್ಲಿ ವಾಸಿಸುವ ಜನರಿಗೆ ಹಲವಾರು ವರ್ಷಗಳಿಂದ ಇವರು ವಾಸಿಸುವ ಮನೆಗಳಿಗೆ ಉತಾರಗಳನ್ನು ನೀಡಿಲ್ಲ. ಪಂಚಾಯ್ತಿಗೆ ತೆರಿಗೆ, ವಿದ್ಯುತ್ ಬಿಲ್ ಪಾವತಿಸುತ್ತಿದ್ದಾರೆ.

ಇಲ್ಲಿಯ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಜೆಜೆಎಂ ಯೋಜನೆ ಅಡಿಯಲ್ಲಿ ನಳಗಳ ಸಂಪರ್ಕವನ್ನು ನೀಡಲಾಗಿದೆ. ಆದರೆ ನಾಲ್ಕು ವರ್ಷವಾದರೂ ಇಲ್ಲಿಯ ಮನೆಗಳಿಗೆ ನೀರು ಬಂದಿಲ್ಲ. ಬಹುತೇಕ ಮನೆಗಳ ಮುಂಭಾಗದಲ್ಲಿರುವ ನಳಗಳು ಸಂಪೂರ್ಣವಾಗಿ ಹಾಳಾಗಿವೆ.

ADVERTISEMENT

ನಳಗಳ ಸಂಪರ್ಕದ ಸಲುವಾಗಿ ಗ್ರಾಮ ಪಂಚಾಯ್ತಿ ಮಾಡಿರುವ ಸಿ. ಸಿ ರಸ್ತೆಯನ್ನು ಮಧ್ಯ ಭಾಗದಲ್ಲಿ ಅಗೆದಿದ್ದಾರೆ. ಮನೆ ಮನೆಗಳಿಗೆ ಸಂಪರ್ಕ ಕೊಡುವ ನಿಟ್ಟಿನಲ್ಲಿ ಸಿಸಿ ರಸ್ತೆಯನ್ನು ಕೊರೆಯಲಾಗಿದೆ. ಇಲ್ಲಿಯ ರಸ್ತೆ ಸಂಪೂರ್ಣವಾಗಿ ಕಿತ್ತು ಹೋಗಿದೆ. ಇದರಿಂದಾಗಿ ಇಲ್ಲಿ ತಿರುಗಾಡುವುದು ಮತ್ತು ವಾಹನ ಸಂಚಾರಕ್ಕೂ ತೊಂದರೆಯಾಗಿದೆ.

ಜೆಜೆಎಂ ಯೋಜನೆ ಸಂಪೂರ್ಣವಾಗಿ ಕಳಪೆ ಕಾಮಗಾರಿಯಾಗಿದೆ. ಆದ್ದರಿಂದ ಇದನ್ನು ಪಂಚಾಯ್ತಿಯವರು ಇನ್ನೂ ಹಸ್ತಾಂತರಿಸಿಕೊಂಡಿಲ್ಲ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಸದಸ್ಯ ಗುರುಲಿಂಗಪ್ಪ ಚಿಂಚಲಿ.

ಕುಡಿಯುವ ನೀರಿನ ಸಲುವಾಗಿ ಇಲ್ಲಿರುವ ಒಂದೇ ಒಂದು ಶುದ್ಧ ಕುಡಿಯುವ ನೀರಿನ ಘಟಕ ಕೂಡಾ ಸ್ಥಗಿತಗೊಂಡಿದೆ. ಮುಖ್ಯ ರಸ್ತೆಯ ಬದಿಗಿರುವ ಟ್ಯಾಂಕ್‌ನಿಂದ ನೀರನ್ನು ಹೊತ್ತುಕೊಂಡು ಬರುವ ಅನಿವಾರ್ಯತೆ ಉಂಟಾಗಿದೆ. ಇಲ್ಲಿರುವ ಟ್ಯಾಂಕ್‌ಗೆ ಬೋರವೆಲ್‌ನಿಂದ ನೀರು ಸರಬರಾಜು ಮಾಡುತ್ತಾರೆ. ಇಲ್ಲಿಯ ನಿವಾಸಿಗಳು ನಿತ್ಯ ಇಲ್ಲಿನ ಟ್ಯಾಂಕ್ ನೀರನ್ನು ಸರತಿಯಲ್ಲಿ ನಿಂತು ತರಬೇಕಾಗಿದೆ.

ಇಲ್ಲಿಯ ಚರಂಡಿಗಳನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ. ಚರಂಡಿಯ ನೀರು ಮುಂದಕ್ಕೆ ಹರಿದು ಹೋಗದಂತೆ ಮಾಡಲಾಗಿದೆ. ಮನೆಯವರು ನೀರನ್ನು ಬಳಿದು ಮುಂದೆ ಹೋಗುವಂತೆ ಮಾಡಿದರೆ ಆ ಮನೆಯವರು ತಂಟೆ ತೆಗೆಯುತ್ತಾರೆ. ಚರಂಡಿ ನೀರು ಹರಿದು ಹೋಗದೆ ಇರುವುದರಿಂದ ಸೊಳ್ಳೆಗಳ ಹಾವಳಿ ಕೂಡ ಹೆಚ್ಚಾಗಿದೆ ಎನ್ನುತ್ತಾರೆ ಇಲ್ಲಿಯ ನಿವಾಸಿ ಬಂದವ್ವ ಉಪ್ಪಾರ. 

ಶೌಚಾಲಯ ಸಮಸ್ಯೆ:

ಇಲ್ಲಿಯ ಪುರುಷ ಮತ್ತು ಮಹಿಳೆಯರು ಶೌಚಾಲಯಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಶೌಚಾಲಯ ಕಟ್ಟಿಕೊಳ್ಳಲು ಪಂಚಾಯ್ತಿಯವರು ಇಲ್ಲಿನ ನಿವಾಸಿಗಳಿಗೆ ಅನುದಾನವನ್ನು ನೀಡಿದ್ದರು. ಆದರೆ ಅದು ಸದ್ಬಳಕೆಯಾಗಿಲ್ಲ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಸದಸ್ಯ ಮಾರುತಿ ಸೋರಗಾವಿ.

ಮುಂದಿನ ದಿನಗಳಲ್ಲಿ ಇಲ್ಲಿಯ ಜನರಿಗೆ ರಸ್ತೆ ಕುಡಿಯುವ ನೀರು ಶೌಚಾಲಯ ನಿರ್ಮಾಣಕ್ಕಾಗಿ ಕ್ರಮ ತೆಗೆದುಕೊಳ್ಳಲಾಗುವುದು.
ಶಕುಂತಲಾ ಸೋನಾವನೆ, ಅಧ‍್ಯಕ್ಷೆ, ಗ್ರಾಮ ಪಂಚಾಯ್ತಿ ಜಗದಾಳ
ಗ್ರಾಮದ ಸಮಸ್ಯೆಗಳ ಕುರಿತು ಪಂಚಾಯ್ತಿಯವರ ಗಮನಕ್ಕೆ ತರಲಾಗಿದೆ. ಅಧಿಕಾರಿಗಳು ಗಮನ ಹರಿಸಬೇಕು. ಇಲ್ಲಿಯ ನಿವಾಸಿಗಳಿಗೆ ಮನೆಗಳ ಉತಾರ ನೀಡಬೇಕು.
ಬಸವರಾಜ ದಡ್ಡಿಮನಿ, ಸ್ಥಳೀಯ ನಿವಾಸಿ
ಜಗದಾಳ ಗ್ರಾಮದಲ್ಲಿ ಜೆಜೆಎಂ ಯೋಜನೆಯ ನಳಗಳು ಹಾಳಾಗಿರುವುದು
ಸ್ಥಗಿತಗೊಂಡ ಶುದ್ಧ ಕುಡಿಯುವ ನೀರಿನ ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.