ಮಹಾಲಿಂಗಪುರ: ‘ಅಗ್ನಿ ಅನಾಹುತಗಳು ಸಂಭವಿಸಿದಾಗ ಗಾಬರಿಗೊಳ್ಳದೆ ಬೆಂಕಿ ನಂದಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಜತೆಗೆ ಸಮೀಪದ ಅಗ್ನಿಶಾಮಕ ಠಾಣೆಗಳಿಗೆ ಕೂಡಲೇ ಮಾಹಿತಿ ನೀಡಬೇಕು. ನೀರು, ಗಾಳಿ ಹಾಗೂ ಬೆಂಕಿಯ ವಿಚಾರದಲ್ಲಿ ಯಾರೇ ಆಗಲಿ ನಿರ್ಲಕ್ಷ್ಯ ವಹಿಸದೆ ಎಚ್ಚರಿಕೆ ಕಾಯ್ದುಕೊಳ್ಳಬೇಕು’ ಎಂದು ಅಗ್ನಿಶಾಮಕ ಠಾಣಾಧಿಕಾರಿ ಅಧಿಕಾರಿ ವಿಠ್ಠಲ ಪಾಟೀಲ ಸಲಹೆ ನೀಡಿದರು.
ಸಮೀಪದ ರನ್ನಬೆಳಗಲಿಯ ಢಪಳಾಪುರ ವಿದ್ಯಾವಿಹಾರ ಶಾಲೆಯಲ್ಲಿ ಮುಧೋಳದ ಅಗ್ನಿಶಾಮಕ ಠಾಣೆ ಸಹಯೋಗದಲ್ಲಿ ಶನಿವಾರ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಬೆಂಕಿ ನಂದಿಸುವ ಪ್ರಾತ್ಯಕ್ಷಿಕೆ ಮತ್ತು ಅಣಕು ಪ್ರದರ್ಶನದಲ್ಲಿ ಅವರು ಮಾತನಾಡಿದರು.
ಬೆಂಕಿಯಿಂದ ಉಂಟಾಗುವ ಅನಾಹುತಗಳನ್ನು ಹೇಗೆ ತಡೆಯುವುದು? ನೆರೆಹಾವಳಿಯ ಸಂದರ್ಭ ಜನರನ್ನು ರಕ್ಷಿಸುವ ವಿಧಾನ, ಭೂಕಂಪವಾದಾಗ ಕಟ್ಟಡದಲ್ಲಿ ವಿದ್ಯುತ್ ಅವಘಡ ಮೊದಲಾದ ಸಂದರ್ಭದಲ್ಲಿ ಹೇಗೆ ರಕ್ಷಿಸಿಕೊಳ್ಳಬೇಕೆಂಬುದನ್ನು ಪ್ರಾಯೋಗಿಕವಾಗಿ ತಿಳಿಸಲಾಯಿತು.
ಶಾಲೆ ಪ್ರಾಚಾರ್ಯ ಲೂಯಿಸ್ ಬರೆಟೋ, ಅಗ್ನಿಶಾಮಕ ಠಾಣೆ ಸಿಬ್ಬಂದಿ ಸುಭಾಷ ಗಡದನ್ನವರ, ಶಿವಾನಂದ ಲಂಕೆನ್ನವರ, ಚಂದ್ರಶೇಖರ ರಾಠೋಡ, ರಾಚಪ್ಪ ಸಿದ್ದನ್ನವರ, ಕೃಷ್ಣ ಜಾಲಿಬೇರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.