ADVERTISEMENT

ಮುಧೋಳ | ರೈತರಿಗೆ ಕಣ್ಣೀರು ತರಿಸಿದ ಈರುಳ್ಳಿ: ಬಂಡವಾಳವೂ ಕೈಸೇರದ ಪರಿಸ್ಥಿತಿ

ಉದಯ ಕುಲಕರ್ಣಿ
Published 23 ಅಕ್ಟೋಬರ್ 2024, 5:18 IST
Last Updated 23 ಅಕ್ಟೋಬರ್ 2024, 5:18 IST
ಮುಧೋಳ ತಾಲ್ಲೂಕು ರೂಗಿ ಗ್ರಾಮದ ಮಹಾದೇವ ರಾಜಾರಾಮ ಚಂದನಶಿವ ಹೊಲದ ಕೊಳೆತ ಈರುಳ್ಳಿ ರಾಶಿ
ಮುಧೋಳ ತಾಲ್ಲೂಕು ರೂಗಿ ಗ್ರಾಮದ ಮಹಾದೇವ ರಾಜಾರಾಮ ಚಂದನಶಿವ ಹೊಲದ ಕೊಳೆತ ಈರುಳ್ಳಿ ರಾಶಿ   

ಮುಧೋಳ: ತಾಲ್ಲೂಕಿನಲ್ಲಿ 5,800 ಹೇಕ್ಟರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರದೇಶದಲ್ಲಿ ಮಳೆಯಿಂದ ಬೆಳೆ ಹಾನಿಯಾಗಿದೆ.

ಚೆನ್ನಾಗಿ ಬೆಳೆ ಬಂದು ಕಟಾವು ಹಂತದಲ್ಲಿ ಮಳೆಯಾಗಿರುವುದರಿಂದ ಈರುಳ್ಳಿ ಕೊಳೆಯುತ್ತಿದೆ. ಒಳ್ಳೆಯ ದರ ಒಳ್ಳೆಯ ಬೆಳೆ ಬಂದರೂ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಹೊಲದಿಂದ ಈರುಳ್ಳಿ ಹೊರತರುವುದೇ ಸಾಹಸವಾಗಿ.

ಹೊಲದಲ್ಲಿ ಕೊಳೆತ ಈರುಳ್ಳಿ ವಾಸನೆ ಬರುತ್ತಿದೆ. ಶೇ 10 ರಷ್ಟು ಮಾತ್ರ ಇಳುವರಿ ಬರುವಂತಾಗಿದೆ. ಒಂದು ಎಕರೆ ಪ್ರದೇಶದಲ್ಲಿ 100–120 ಚೀಲ ಈರುಳ್ಳಿ ಬರುತ್ತಿತ್ತು (ಒಂದು ಚೀಲದಲ್ಲಿ 50–60 ಕೆ.ಜಿ.). ಈಗ 15 ಚೀಲ ಬರುವುದೂ ದುಸ್ತರವಾಗಿದೆ. ಬೀಜ, ಗೊಬ್ಬರ, ರಾಸಾಯನಿಕ ಸೇರಿ ಎಕರೆಗೆ ₹20ಸಾವಿರದಿಂದ ₹25 ಸಾವಿರ ವೆಚ್ಚವಾಗುತ್ತದೆ. ಬಂಡವಾಳವೂ ಹಿಂದಕ್ಕೆ ಬರುತ್ತಿಲ್ಲ ಎಂದು ರೈತರು ಗೋಳಾಡುತ್ತಿದ್ದಾರೆ.

ADVERTISEMENT

ತಾಲ್ಲೂಕಿನ ರೂಗಿ ಗ್ರಾಮದ ರೈತ ಮಹಾದೇವ ಸದಾಶಿವ ಚೌಧರಿ, ಬಸವರಾಜ ಚೌಧರಿ ತಮ್ಮ 4 ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆದಿದ್ದಾರೆ. ‘ಬೆಳೆ ಬಂಪರ್ ಬಂದಿದೆ, ಎಕರೆಗೆ 125 ಚೀಲ ನಿರೀಕ್ಷೆ ಮಾಡಲಾಗಿತ್ತು. ಈಗ ಮಳೆಗೆ ಕೊಳೆತು ಹೋಗಿದೆ. ₹85 ಸಾವಿರ ವೆಚ್ಚವಾಗಿದೆ’ ಎಂದು ಅವರು ಹೇಳುತ್ತಾರೆ.

ಇದೇ ಗ್ರಾಮದ ಮಹಾದೇವ ರಾಜಾರಾಮ ಚಂದನಶಿವ 6 ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆದಿದ್ದಾರೆ. ಅವರು ₹1.26 ಲಕ್ಷ ವೆಚ್ಚ ಮಾಡಿದ್ದಾರೆ.

ತಾಲ್ಲೂಕಿನ ಹಲಕಿ ಗ್ರಾಮದ ರೈತ ಬಸಪ್ಪ ಅಪ್ಪಣ್ಣವರ, ಸುರೇಶ ಅಪ್ಪಣ್ಣವರ, ಹಣಮವ್ವ ಅಪ್ಪಣ್ಣವರ, ಸವಿತಾ ಅಪ್ಪಣ್ಣವರ ತಮ್ಮ ತಮ್ಮ ಎರಡು ಎಕರೆ ಹೊಲದಲ್ಲಿ ಈರುಳ್ಳಿ ಬೆಳೆದಿದ್ದರು. 220 ಚೀಲ ಈರುಳ್ಳಿ ನಿರೀಕ್ಷೆಯಲ್ಲಿದ್ದ ಅವರೀಗ 50 ಚೀಲ ಉಳಿಸಿಕೊಳ್ಳಲು ಕುಟುಂಬದವರೆಲ್ಲ ಸೇರಿ ಹರಸಾಹಸ ಮಾಡುತ್ತಿದ್ದಾರೆ.

ತಾಲ್ಲೂಕಿನ ಬೊಮ್ಮನಬುದ್ನಿ ಗ್ರಾಮದ ಬಸಪ್ಪ ರಾಮಪ್ಪ ಹ್ಯಾವಗಲ್ಲ, ಅವರ ಪತ್ನಿ ತಂಗೆವ್ವ ಹ್ಯಾವಗಲ್ಲ ತಮ್ಮ 1 ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆದಿದ್ದು, ₹20 ಸಾವಿರ ವೆಚ್ಚ ಮಾಡಿದ್ದಾರೆ. ಈರುಳ್ಳಿ ನಾಶವಾಗಿದೆ. ಸರ್ಕಾರ ಪರಿಹಾರ ನೀಡದಿದ್ದರೆ ನಮ್ಮಂತಹ ಸಣ್ಣ ರೈತರಿಗೆ ತೊಂದರೆ ಖಚಿತ ಎಂದು ಅವರು ಆತಂಕ ಹೊರಹಾಕಿದರು.

ಮುಧೋಳ ತಾಲ್ಲೂಕಿನ ಬೊಮ್ಮನಬುದ್ನಿ ಗ್ರಾಮದ ಬಸಪ್ಪ ರಾಮಪ್ಪ ಹ್ಯಾವಗಲ್ಲ ಅವರ ಪತ್ನಿ ತಂಗೆವ್ವ ಹ್ಯಾವಗಲ್ಲ ಕೊಳೆತ ಈರುಳ್ಳಿ ತೊರಿಸುತ್ತಿರುವುದು
ಮುಧೋಳ ತಾಲ್ಲೂಕಿನ ಹಲಕಿ ಗ್ರಾಮದ ರೈತ ಬಸಪ್ಪ ಅಪ್ಪಣ್ಣವರ ಸುರೇಶ ಅಪ್ಪಣ್ಣವರ ಹೊಲದಲ್ಲಿ ಅಳಿದುಳಿದ ಈರುಳ್ಳಿ ಸ್ವಚ್ಛಗೊಳಿಸುತ್ತಿರುವ ಕುಟುಂಬ
ತಾಲ್ಲೂಕಿನ ನೂರಾರು ಎಕರೆಯಲ್ಲಿ ಈರುಳ್ಳಿ ಬೆಳೆ ಮಳೆಯಿಂದ ನಾಶವಾಗಿದೆ. ರೈತರು ಕಂಗಾಲಾಗಿದ್ದಾರೆ. ತೋಟಗಾರಿಕೆ ಇಲಾಖೆ ಸಮೀಕ್ಷೆ ನಡೆಸಿ ಈರುಳ್ಳಿ ಬೆಳೆಗೆ ಶೀಘ್ರ ಪರಿಹಾರ ನೀಡಬೇಕು
-ನಾಗೇಶ ಸೋರಗಾಂವಿ ರೈತ ಮುಖಂಡ
ಹಾನಿಯ ಸಮೀಕ್ಷೆ ಮಾಡಲಾಗುತ್ತಿದೆ. ಹೊಲದಲ್ಲಿ ನೀರು ಇರುವುದರಿಂದ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ. ಎಂಟು ದಿನಗಳಲ್ಲಿ ಹಾನಿಯ ಪ್ರಮಾಣದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು
-ಮಹೇಶ ದಂಡನ್ನವರ, ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.