ADVERTISEMENT

ಲಿಂಗತ್ವ ಅಲ್ಪಸಂಖ್ಯಾತ ಮಕ್ಕಳಿಗೆ ಶಾಲೆ ತೆರೆಯಿರಿ: ಮಂಜಮ್ಮ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 17:19 IST
Last Updated 7 ಜುಲೈ 2024, 17:19 IST
ಬಿ.ಮಂಜಮ್ಮ ಜೋಗತಿ
ಬಿ.ಮಂಜಮ್ಮ ಜೋಗತಿ   

ಕೆರೂರ: ‘ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಸರ್ಕಾರ ಶಾಲೆ ತೆರೆಯಬೇಕು’ ಎಂದು ಜಾನಪದ ಕಲಾವಿದೆ ಬಿ.ಮಂಜಮ್ಮ ಜೋಗತಿ ಆಗ್ರಹಿಸಿದರು.

‘ಸುಮಾರು 40 ಸಾವಿರಕ್ಕೂ ಅಧಿಕ ತೃತೀಯ ಲಿಂಗಿಗಳು ವಿದ್ಯಾಭ್ಯಾಸ ಇಲ್ಲದೆ ಕಷ್ಟಪಟ್ಟಿದ್ದಾರೆ. ಉತ್ತಮ ಸಮಾಜ ನಿರ್ಮಾಣಕ್ಕೆ ಶಾಲೆ ತೆರೆಯುವುದು ಅವಶ್ಯವಾಗಿದೆ’ ಎಂದು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. 

‘ಸಮಾಜ ಲಿಂಗತ್ವ ಅಲ್ಪಸಂಖ್ಯಾತರನ್ನು ಬೇರೆ ದೃಷ್ಟಿಯಿಂದಲೇ ಕಾಣುತ್ತಿದೆ. ಇತ್ತಿಚೀನ ದಿನಗಳಲ್ಲಿ ಉನ್ನತ ವ್ಯಾಸಂಗ ಮಾಡಿರುವ ವ್ಯಕ್ತಿಗಳು ಸೂಕ್ತ ಉದ್ಯೋಗ ಸಿಗದೇ ಅನಿವಾರ್ಯವಾಗಿ ಲಿಂಗತ್ವ ಅಲ್ಪಸಂಖ್ಯಾತರಾಗಿ ಪರಿವರ್ತನೆ ಆಗುತ್ತಿರುವುದು ವಿಷಾದಕರ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ದೇಶದ ಎಲ್ಲ ಕಡೆ ಲಿಂಗತ್ವ ಅಲ್ಪಸಂಖ್ಯಾತರ ಸಂಖ್ಯೆ ಹೆಚ್ಚುತ್ತಿದೆ. ಇಲ್ಲಿಯವರೆಗೂ ಗಣತಿ ಕಾರ್ಯ ನಡೆದಿಲ್ಲ. ನಿರ್ದಿಷ್ಟ ಅಂಕಿ-ಸಂಖ್ಯೆ ಸಿಗುತ್ತಿಲ್ಲ, ಮಾಸಾಶನ ಮೊತ್ತ ಹೆಚ್ಚಳವಾಗಬೇಕು. ವಿದ್ಯಾಭ್ಯಾಸ ಕಲ್ಪಿಸುವ ಕಾರ್ಯಕ್ಕೆ ಮುಂದಾಗಿ ಸಮಾಜದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಬದಲಾವಣೆಗೆ ಆಸಕ್ತಿ ತೋರಬೇಕು. ಈಗಾಗಲೇ ಶಿಕ್ಷಣ ಪಡೆದ ಲಿಂಗತ್ವ ಅಲ್ಪಸಂಖ್ಯಾತರಿಗೆ ಸರ್ಕಾರಿ ಕೆಲಸ ನೀಡಬೇಕು. ವಯಸ್ಸಾದ ಲಿಂಗತ್ವ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಅನಾಥಾಶ್ರಮ ಕಲ್ಪಿಸಿ, ಸೂಕ್ತ ವ್ಯವಸ್ಥೆ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.