ADVERTISEMENT

ಜಾತಿ ಗಣತಿಗೆ ವಿರೋಧ: ಚರಂತಿಮಠ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 14:50 IST
Last Updated 22 ಅಕ್ಟೋಬರ್ 2024, 14:50 IST

ಬಾಗಲಕೋಟೆ: ವೀರಶೈವ ಲಿಂಗಾಯತ ಮಹಾಸಭಾವು ಜಾತಿ ಗಣತಿ ವಿರೋಧಿಸುತ್ತಿರುವುದಕ್ಕೆ ನನ್ನ ಬೆಂಬಲವೂ ಇದೆ ಎಂದು ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವೀರಶೈವ ಲಿಂಗಾಯತ ಸಮಾಜದಲ್ಲಿ ಅನೇಕ ಒಳ ಪಂಗಡಗಳಿವೆ. ಅವುಗಳನ್ನು ಮುನ್ನೆಲೆಗೆ ತಂದು ಮುಖ್ಯ ವೀರಶೈವ ಲಿಂಗಾಯತ ಸಮಾಜವನ್ನು ದುರ್ಬಲಗೊಳಿಸುವ ಹುನ್ನಾರ ನಡೆಯುತ್ತಿದೆ’ ಎಂದರು.

‘ಸರ್ಕಾರದಿಂದ ನಮಗೇನೋ ಸೌಲಭ್ಯಗಳು ಸಿಗುತ್ತವೆ ಎಂಬ ಆಸೆಗೆ ಜನ ಉಪ ಜಾತಿಗಳನ್ನು ಬರೆಸಿರುತ್ತಾರೆ. ಅದರ ಲಾಭ ಗಿಟ್ಟಿಸಿಕೊಂಡು ಸರ್ಕಾರ ವೀರಶೈವ ಲಿಂಗಾಯತ ಸಮಾಜ ಹಾಗೂ ಒಕ್ಕಲಿಗ ಸಮಾಜವನ್ನು ದುರ್ಬಲಗೊಳಿಸುವ ವ್ಯವಸ್ಥೆಗೆ ಮುಂದಾಗಿದೆ. ಹೀಗಾಗಿ ಜಾತಿ ಗಣತಿಗೆ ನಮ್ಮ ವಿರೋಧವಿದೆ’ ಎಂದು ಚರಂತಿಮಠ ಹೇಳಿದರು.

ADVERTISEMENT

ಬಿಟಿಡಿಎ ಅಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸೌಲಭ್ಯಗಳನ್ನು ಪಡೆದವರ ವಿರುದ್ಧ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಚರಂತಿಮಠ, ‘15 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದು ಕೇವಲ ಕಾಟಾಚರಕ್ಕೆ. ಅವರೆಲ್ಲ ಪ್ರಭಾವ ಬಳಸಿ ಜಾಮೀನು ತೆಗೆದುಕೊಂಡು ಹೊರಬಂದಿದ್ದಾರೆ. ಇವರಲ್ಲದೇ ಇನ್ನೂ ಅನೇಕ ದೊಡ್ಡವರ ಹೆಸರುಗಳು ಇದ್ದವು. ಅವರನ್ನು ಕೈಬಿಡಲಾಗಿದೆ. ಅದೆಲ್ಲ ಹೊರಬರಬೇಕು. ತನಿಖೆ ಆಗಬೇಕು’ ಎಂದರು.

‘ನಿಜವಾದ ಫಲಾನುಭವಿಗಳಿಗೆ ಹಕ್ಕುಪತ್ರ ಸಿಗುತ್ತಿಲ್ಲ. ಗೋಪ್ಯವಾಗಿ ಸಭೆಗಳು ನಡೆಯುತ್ತಿವೆ. ಸಾರ್ವಜನಿಕ ಕೆಲಸ ಪಾರದರ್ಶಕವಾಗಿರಬೇಕು’ ಎಂದ ಅವರು, ‘ಹಿಂದೆ ನನ್ನ ಅವಧಿಯಲ್ಲಿ ಹೀಗೆಲ್ಲ ಸಭೆಗಳು ನಡೆಯುತ್ತಿರಲಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.