ಗುಳೇದಗುಡ್ಡ: ಐತಿಹಾಸಿಕ ಪ್ರವಾಸಿ ತಾಣಗಳಾದ ಪಟ್ಟದಕಲ್ಲು, ಐಹೊಳೆಗೆ ಸಂಪರ್ಕ ಕಲ್ಪಿಸುವ ಸೂರೇಬಾನ ಚಿತ್ತರಗಿ 133 ರಾಜ್ಯ ಹೆದ್ದಾರಿ ಮೇಲೆ ರೈತರು ತಮ್ಮ ಬೆಳೆಯ ರಾಶಿ ಒಣಗಿಸಲು ಹಾಕುತ್ತಿದ್ದು ಪ್ರವಾಸಿಗರಲ್ಲಿ ಆತಂಕ ಮೂಡಿಸಿದೆ.
ತಾಲ್ಲೂಕಿನ ಕಾಟಾಪೂರ, ಮಂಗಳಗುಡ್ಡ, ಚಿಮ್ಮಲಗಿ ಮೂಲಕ ಪಟ್ಟದಕಲ್ಲು, ಐಹೊಳೆಗೆ ಹೋಗುವ ಮಾರ್ಗದಲ್ಲಿ ರೈತರು ವರ್ಷಪೂರ್ತಿ ರಾಶಿ ಮಾಡುತ್ತಾರೆ. ಇದರಿಂದ ಸಂಚಾರ ದಟ್ಟನೆಯಾಗುತ್ತಿದ್ದು, ಅಪಘಾತ ಭೀತಿ ಉಂಟು ಮಾಡಿದೆ.
ರಸ್ತೆಯ ಮೇಲೆ ಬೆಳೆ ಒಣಗಿಸುವುದು ಸರಳ ಕೆಲಸವಾದ್ದರಿಂದ ರೈತರು ರಾಶಿ ಮಾಡಲು ರಸ್ತೆಗಳನ್ನು ಅವಲಂಬಿಸಿದ್ದಾರೆ. ಮಳೆಗಾಲ ಅಷ್ಟೆ ಅಲ್ಲದೇ ಬೇಸಿಗೆಯಲ್ಲೂ ರಸ್ತೆ ಮೇಲೆ ರಾಶಿ ಮಾಡುವುದು ಕಂಡು ಬರುತ್ತದೆ.
ಹಲವು ಅಪಘಾತಕ್ಕೆ ಅವಕಾಶ: ಪಟ್ಟದಕಲ್ಲು ನೋಡಿಕೊಂಡು ಐಹೊಳೆಗೆ ಹೋಗುವ ಅಥವಾ ಐಹೊಳೆ ನೋಡಿಕೊಂಡು ಪಟ್ಟದಕಲ್ಲು, ಬಾದಾಮಿಗೆ ಹೋಗುವ ಬಸ್, ಕಾರು, ದ್ವೀಚಕ್ರ ವಾಹನಗಳು ಅರ್ಧ ರಸ್ತೆಯಲ್ಲೇ ಸಂಚರಿಸಬೇಕಾಗಿದೆ. ಈಗಾಗಲೇ ಹಲವು ಅಪಘಾತಗಳಿಗೂ ಈ ರಸ್ತೆ ಸಾಕ್ಷಿಯಾಗಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿಲ್ಲ.
‘ರೈತರು ರಾಜ್ಯ ಹೆದ್ದಾರಿ ಮೇಲೆ ರಾಶಿ ಮಾಡಬಾರದು ನಿಜ. ಆದರೆ ಸರ್ಕಾರದಿಂದ ಖಣ ನಿರ್ಮಾಣ ಮಾಡಲು ಅವಕಾಶವಿದೆ. ಖಣ ನಿರ್ಮಾಣ ಮಾಡಿ ಕೊಡುವ ಮೂಲಕ ರಸ್ತೆಗೆ ಬಾರದಂತೆ ಕ್ರಮವಹಿಸಬೇಕು. ಪ್ರವಾಸಿ ವಾಹನಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಐಹೊಳೆಯ ಮಾರ್ಗರ್ಶಕ ಪರಶುರಾಮ ಗೋಡಿ ಹೇಳಿದರು.
‘ಬಾದಾಮಿ ತಾಲ್ಲೂಕು ಕೆಂದೂರಿನಿಂದ ಆರಂಭವಾಗುವ ರಾಜ್ಯ ಹೆದ್ದಾರಿ ಮೇಲೆ ರೈತರು ರಾಶಿ ಮಾಡುತ್ತಿರುವುದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಕ್ರಮವಹಿಸಲು ಬಾದಾಮಿ ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿದೆ’ ಎಂದು ಬಾದಾಮಿ ಸಹಾಯಕ ಎಂಜಿನಿಯರ್ ವೈ.ಎಫ್.ಆಡೀನ ತಿಳಿಸಿದರು.
ಮಳೆಗಾಲದಲ್ಲಿ ಜಮೀನಿನಲ್ಲಿ ರಾಶಿ ಮಡಲು ತೊಂದರೆಯಾದ್ದರಿಂದ ಅನಿವಾರ್ಯವಾಗಿ ರಸ್ತೆ ಮೇಲೆ ರಾಶಿ ಮಾಡಲಾಗುತ್ತಿದೆ.-ಸಿದ್ದಪ್ಪ ಗೋಡಿ, ರೈತ ಚಿಮ್ಮಲಗಿ
ರಾಶಿ ಮಾಡುವುದಕ್ಕಾಗಿ ರಾಜ್ಯ ಹೆದ್ದಾರಿಯ ಅರ್ಧ ರಸ್ತೆ ಬಳಸಿದರೆ ವಾಹನಗಳ ಸಂಚಾರಕ್ಕೆ ಕಷ್ಟವಾಗುತ್ತದೆ.-ರಮೇಶ ಎಸ್, ಪ್ರವಾಸಿಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.