ADVERTISEMENT

ಪಾದಚಾರಿಗಳಿಗೆ ರಸ್ತೆಯಲ್ಲಿ ಜೀವ ಭಯ: ವೃತ್ತದಲ್ಲಿ ಪೊಲೀಸರ ನೇಮಕಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2024, 8:33 IST
Last Updated 17 ಫೆಬ್ರುವರಿ 2024, 8:33 IST
ಬಾದಾಮಿ ಟಾಂಗಾ ನಿಲ್ದಾಣದ ವೃತ್ತದಲ್ಲಿ ಮನಬಂದಂತೆ ಸಂಚರಿಸುವ ವಾಹನಗಳ ಮಧ್ಯೆ ರಸ್ತೆ ದಾಟುತ್ತಿರುವ ಪಾದಚಾರಿಗಳು
ಬಾದಾಮಿ ಟಾಂಗಾ ನಿಲ್ದಾಣದ ವೃತ್ತದಲ್ಲಿ ಮನಬಂದಂತೆ ಸಂಚರಿಸುವ ವಾಹನಗಳ ಮಧ್ಯೆ ರಸ್ತೆ ದಾಟುತ್ತಿರುವ ಪಾದಚಾರಿಗಳು   

ಬಾದಾಮಿ: ಐತಿಹಾಸಿಕ ಪ್ರವಾಸಿ ತಾಣದಲ್ಲಿ ಕಿರಿದಾದ ರಸ್ತೆಯಲ್ಲಿ ವಾಹನಗಳ ಜನದಟ್ಟಣೆ ಹೆಚ್ಚುತ್ತಿದೆ. ಪಾದಚಾರಿಗಳು ರಸ್ತೆಯಲ್ಲಿ ಜೀವದ ಭಯದಿಂದ ಸಂಚರಿಸುವಂತಾಗಿದೆ. ಸಾರ್ವಜನಿಕರು ಪಾದಚಾರಿ ರಸ್ತೆಯನ್ನು ಹುಡುಕಿ ಕೊಡಿ ಎನ್ನುವಂತಾಗಿದೆ.

ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಬಸ್ ನಿಲ್ದಾಣದವರೆಗೆ ಮತ್ತು ಎಸ್.ಬಿ.ಐನಿಂದ ಪುಲಿಕೇಶಿ ವೃತ್ತದವರೆಗಿನ ಮುಖ್ಯ ರಸ್ತೆಯಲ್ಲಿ ಮತ್ತು ಪಾದಚಾರಿ ರಸ್ತೆಯಲ್ಲಿ ಗೂಡಂಗಡಿಗಳಿಂದ ಮತ್ತು ರಸ್ತೆಯಲ್ಲಿಯೇ ನೂರಾರು ಮೋಟರ್ ಬೈಕ್ ನಿಲುಗಡೆ ಮಾಡುವುದರಿಂದ ಪಾದಚಾರಿಗಳು ವಾಹನಗಳ ಜೊತೆಗೆ ರಸ್ತೆಯಲ್ಲಿಯೇ ಸಂಚರಿಸಬೇಕಿದೆ.

ಕಬ್ಬನ್ನು ಸಾಗಿಸುವ ಟ್ರ್ಯಾಕ್ಟರ್, ಲಾರಿ, ಮರಳು ಸಾಗಿಸುವ ಲಾರಿ, ಟಿಪ್ಪರ್, ಸರಕು ಸಾಗಣೆ ವಾಹನಗಳು, ಬೈಕ್, ಆಟೊ, ಬಸ್ಸುಗಳು, ಪ್ರವಾಸಿ ಮತ್ತು ಸ್ಥಳೀಯ ವಾಹನಗಳಿಂದಾಗಿ ರಸ್ತೆಯಲ್ಲಿ ವಾಹನಗಳ ದಟ್ಟಣೆ ಅಧಿಕವಾಗಿದೆ.

ADVERTISEMENT

ಟಾಂಗಾ ನಿಲ್ದಾಣದ ಮುಖ್ಯ ರಸ್ತೆ, ತಾಲ್ಲೂಕು ಪಂಚಾಯ್ತಿ ಮತ್ತು ಬಸ್ ನಿಲ್ದಾಣದ ಹೊರಗಿನ ರಸ್ತೆ ವೃತ್ತದಲ್ಲಿ ಪೊಲೀಸ್ ಸಿಬ್ಬಂದಿ ಅವಶ್ಯವಿದೆ. ಪಾದಚಾರಿಗಳು ಮತ್ತು ವಾಹನ ಚಾಲಕರು ಒಬ್ಬರಿಗೊಬ್ಬರು ತಾವೇ ಸಹಕಾರದಿಂದ ರಸ್ತೆ ದಾಟಬೇಕಿದೆ. ಇಲ್ಲಿ ಸಾಕಷ್ಟು ಬೈಕ್ ಅಪಘಾತ ಸಂಭವಿಸಿವೆ.

ಪುಲ್ವಾಮಾ ದಾಳಿಯಲ್ಲಿ ವೀರಮರಣವನ್ನಪ್ಪಿದ ಸೈನಿಕರಿಗೆ ಗೌರವಕ್ಕಾಗಿ ಮಾಜಿ ಸೈನಿಕರು ಮತ್ತು ಸಂಘಟನೆಗಳು ಬುಧವಾರ ನಡೆಸಿದ ಮೋಂಬತ್ತಿ ಮೆರವಣಿಗೆಯಲ್ಲಿ ಬಸ್ ನಿಲ್ದಾಣದ ಹೊರಗೆ ಒಬ್ಬ ಆಟೊ ಚಾಲಕ ವಾಹನಗಳನ್ನು ನಿಯಂತ್ರಣ ಮಾಡುತ್ತಿದ್ದನ್ನು ಜನರು ಶ್ಲಾಘಿಸಿದರು. ಇಲ್ಲಿ ಪೋಲೀಸರು ಯಾರೂ ಇಲ್ಲವೇ ಎಂದು ಚಳ್ಳಕೆರೆ ಪ್ರವಾಸಿ ವಾಹನ ಚಾಲಕ ಹನುಮೇಗೌಡ ಪ್ರಶ್ನಿಸಿದರು. ಬಸ್ ನಿಲ್ದಾಣದ ವೃತ್ತದ ಸಮೀಪ ಪೊಲೀಸ್‌ ಸಿಬ್ಬಂದಿಯನ್ನು ನೇಮಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.

ಬಸ್ ನಿಲ್ದಾಣದಿಂದ ಹೊರಗೆ ಮತ್ತು ಒಳಗೆ ಬಸ್ ಸಂಚರಿಬೇಕೆಂದರೆ ಬಸ್ ಚಾಲಕರು ಹರಸಾಹಸ ಮಾಡಬೇಕಿದೆ. ರಸ್ತೆಯಲ್ಲಿಯೇ ಗೂಡಂಗಡಿಗಳು, ಆಟೊ, ಬೈಕ್ ಮತ್ತು ಕಾರ್ ಚಾಲಕರು ಬಸ್ ಬರುವ ರಸ್ತೆಯಲ್ಲಿಯೇ ನಿಲುಗಡೆ ಮಾಡುವರು ಮುಖ್ಯ ರಸ್ತೆಗೆ ಬಸ್ ತಿರುಗಿಸಲು ತೊಂದರೆಯಾಗುತ್ತಿದೆ ಎಂದು ಬಸ್ ಚಾಲಕರು ಹೇಳಿದರು.

ಸಾಮಾನ್ಯವಾಗಿ ಬೆಳಿಗ್ಗೆ 10 ರಿಂದ 12 ಗಂಟೆ ಸಂಜೆ 5 ರಿಂದ 8ರವರೆಗೆ ವಾಹನಗಳ ದಟ್ಟಣೆ ಅಧಿಕವಾಗಿರುತ್ತದೆ. ಈ ಸಮಯದಲ್ಲಾದರೂ ಪೋಲಿಸರನ್ನು ನೇಮಿಸಿ ಪಾದಚಾರಿಗಳ ಪ್ರಾಣವನ್ನು ಉಳಿಸಬೇಕಿದೆ.

‘ನಾಲ್ಕೈದು ವರ್ಷಗಳ ಹಿಂದೆ ಪಟ್ಟಣದಲ್ಲಿ ಐದು ಸಿಬ್ಬಂದಿಯನ್ನು ಸಂಚಾರ ಪೋಲಿಸರನ್ನಾಗಿ ನೇಮಿಸಲಾಗಿತ್ತು. ಸಂಚಾರ ಪೊಲೀಸ್‌ ಠಾಣೆ ಇಲ್ಲವೇ ಸಂಚಾರ ಪೊಲೀಸರನ್ನು ನೇಮಿಸಬೇಕು’ ಎಂದು ಬಾದಾಮಿ ನಗರ ಅಭಿವೃದ್ಧಿ ಹೋರಾಟ ಸಮಿತಿ ಕಾರ್ಯದರ್ಶಿ ಇಷ್ಟಲಿಂಗ ನರೇಗಲ್ ಒತ್ತಾಯಿಸಿದ್ದಾರೆ.

‘ಪಾದಚಾರಿಗಳಿಗೆ ರಸ್ತೆಯಲ್ಲಿ ಪ್ರಾಣಾಪಾಯವಾದರೆ ಲೋಕೋಪಯೋಗಿ ಮತ್ತು ಪೊಲೀಸ್‌ ಇಲಾಖೆಯೇ ಹೊಣೆ ಹೊರಬೇಕಾಗುತ್ತದೆ. ಬಾದಾಮಿ ಪಟ್ಟಣದ ಹೊರಗೆ ಬೈಪಾಸ್‌ ರಸ್ತೆ ಮಾಡಿ ವಾಹನಗಳ ದಟ್ಟಣೆ ಕಡಿಮೆ ಮಾಡಿ ಜನರ ಪ್ರಾಣವನ್ನು ಉಳಿಸಿ’ ಎಂದು ನಿಸರ್ಗ ಬಳಗದ ಅಧ್ಯಕ್ಷ ಎಸ್.ಎಚ್. ವಾಸನ ಲೋಕೋಪಯೋಗಿ ಇಲಾಖೆಯ ಅಧಿಕಾರಿಗೆ ಒತ್ತಾಯಿಸಿದ್ದಾರೆ.

ರಸ್ತೆ ವೃತ್ತದ ಸಂಚಾರ ವ್ಯವಸ್ಥೆ ಕುರಿತು ಪಿಎಸ್‌ಐ ನಿಂಗಪ್ಪ ಪೂಜಾರ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಲು ಯತ್ನಿಸಿದಾಗ ಅವರು ಕರೆಯನ್ನು ಸ್ವೀಕರಿಸಲಿಲ್ಲ.

ಬಾದಾಮಿಯ ಇಕ್ಕಟ್ಟಾದ ಮುಖ್ಯ ರಸ್ತೆಯಲ್ಲಿ ವಾಹನ ಪಾದಚಾರಿಗಳು ಮತ್ತು ರಸ್ತೆಯಲ್ಲಿ ಸಾಲು ಸಾಲು ಮೋಟರ್ ಬೈಕ್ ನಿಲುಗಡೆ ಮಾಡಿರುವುದು
ಬಾದಾಮಿಯ ಪಾದಚಾರಿ ರಸ್ತೆಯಲ್ಲಿ ಗೂಡಂಗಡಿಗಳ ಮಧ್ಯೆಯೇ ಪಾದಚಾರಿಗಳು ಹೋಗುತ್ತಿರುವುದು
ಸಂಚಾರ ಪೊಲೀಸ್‌ ಸಿಬ್ಬಂದಿ ನೇಮಿಸಿ ಪಾದಚಾರಿ ರಸ್ತೆಯಲ್ಲಿರುವ ಗೂಡಂಗಡಿ ತೆರವಿಗೆ ಆಗ್ರಹ ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ಒತ್ತಾಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.