ಮಹಾಲಿಂಗಪುರ: ಸಮೀಪದ ರನ್ನಬೆಳಗಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸ್ವಾಮಿ ವಿವೇಕಾನಂದ ನಗರದಲ್ಲಿ ಚರಂಡಿ ವ್ಯವಸ್ಥೆ ಅಸಮರ್ಪಕವಾಗಿದ್ದು, ಸಾಂಕ್ರಾಮಿಕ ರೋಗ ಭೀತಿ ಆವರಿಸಿದೆ.
ಪಟ್ಟಣಕ್ಕೆ ಹೊಂದಿಕೊಂಡೇ ಇರುವ ಈ ಬಡಾವಣೆ 15 ವರ್ಷಗಳ ಹಿಂದೆಯೇ ರನ್ನಬೆಳಗಲಿ ಪಟ್ಟಣ ಪಂಚಾಯಿತಿಗೆ ಸೇರ್ಪಡೆಗೊಂಡಿದೆ. ಈ ಬಡಾವಣೆಯಿಂದ ಪಟ್ಟಣ ಪಂಚಾಯಿತಿ 5 ಕಿ.ಮೀ. ದೂರದಲ್ಲಿದ್ದು, ಏನಾದರೂ ಸಮಸ್ಯೆ ಹೇಳಿದರೆ ಪರಿಹಾರಕ್ಕೆ ಸಿಬ್ಬಂದಿ ಅಲ್ಲಿಂದಲೇ ಬರಬೇಕು. ಬಡಾವಣೆಯಲ್ಲಿ 150ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದು, ಸರ್ಕಾರಿ ನೌಕರರು ಹೆಚ್ಚು ಸಂಖ್ಯೆಯಲ್ಲಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಿಂದ ಮನೆಗಳಿಗೆ ತೆರಳಲು ಇರುವ ರಸ್ತೆಗೆ ವ್ಯವಸ್ಥಿತ ಡಾಂಬರೀಕರಣ ಇಲ್ಲ. ಇಡೀ ಬಡಾವಣೆಗೆ ಒಂದೇ ಚರಂಡಿ ಇದ್ದು, ಎಲ್ಲ ನೀರು ಇದರಲ್ಲೇ ಸಂಗ್ರಹವಾಗಿ ಗಬ್ಬೆದ್ದು ನಾರುತ್ತಿದೆ. ರಸ್ತೆಗೆ ಒಂದೇ ಭಾಗದಲ್ಲಿ ಚರಂಡಿ ಇದ್ದು, ಕೂಡು ರಸ್ತೆಯವರೆಗೆ ಮಾತ್ರ ಇದೆ. ಅದರಲ್ಲಿ ಹರಿಯುವ ನೀರಿಗೆ ಅಂತಿಮವಾಗಿ ಹೋಗಲು ಮಾರ್ಗವೇ ಇಲ್ಲ. ಹೀಗಾಗಿ, ಕಳೆದ ಎರಡು ತಿಂಗಳಿನಿಂದ ಮನೆಯ ಮಂದೆಯೇ ಕೊಳಚೆ ನೀರು ಬಂದು ನಿಂತಿದೆ. ಈ ಬಡಾವಣೆಯ ಮೂವರು ನಿವಾಸಿಗಳಿಗೆ ಈಚೆಗೆ ಡೆಂಗಿ ಪತ್ತೆಯಾಗಿರುವುದರಿಂದ ಇಲ್ಲಿಯ ಜನರಲ್ಲಿ ಆತಂಕ ಮನೆಮಾಡಿದೆ.
ಸಂಜೆಯಾದರೆ ಸೊಳ್ಳೆಗಳ ಹಾವಳಿಯಿಂದ ಜನ ನಲುಗುವಂತಾಗಿದೆ. ಮನೆ ಬಾಗಿಲು ಹಾಕಿಕೊಂಡೇ ಜೀವನ ಮಾಡಬೇಕಿದೆ. ಪ್ರತಿ ವರ್ಷ ಪಟ್ಟಣ ಪಂಚಾಯಿತಿಗೆ ನಿವಾಸಿಗಳು ನೀರಿನ ಕರ, ಮನೆ ಕರ ಪಾವತಿಸುತ್ತಿದ್ದಾರೆ. ಆದರೆ, ಸೂಕ್ತ ವ್ಯವಸ್ಥೆಯೇ ಇಲ್ಲದಂತಾಗಿದೆ.
ಚರಂಡಿಯ ಕೊನೆಗೆ ರಸ್ತೆಗೆ ಅಂಟಿಕೊಂಡು ಇದ್ದ ಮಣ್ಣನ್ನು ಪಟ್ಟಣ ಪಂಚಾಯಿತಿಯವರು ಜೆಸಿಬಿಯಿಂದ ತೆಗೆದಿದ್ದಾರೆ. ಈಗ ಅಲ್ಲಿಯೇ ಚರಂಡಿ ನೀರು ನಿಲ್ಲುತ್ತಿದೆ. ಇದರಿಂದ ಮನೆಗಳಿಂದ ಮುಖ್ಯರಸ್ತೆ ಸೇರಲು ದಾರಿಯೇ ಇಲ್ಲವಾಗಿದೆ. ಮಳೆಗಾಲದಲ್ಲಂತೂ ಕಷ್ಟ ಹೇಳತೀರದು. ಮನೆ ಮುಂದಿನ ರಸ್ತೆ ತಗ್ಗಿನಲ್ಲಿದ್ದು, ಮುಖ್ಯರಸ್ತೆ ಎತ್ತರವಾಗಿದೆ. ಇದರಿಂದ ರಸ್ತೆಯ ನೀರೆಲ್ಲ ಮನೆಯೊಳಗೆ ನುಗ್ಗುತ್ತದೆ.
ಪಟ್ಟಣ ಪಂಚಾಯಿತಿಯವರು ಈ ಚರಂಡಿ ಸ್ವಚ್ಛಗೊಳಿಸಿ ಅದೆಷ್ಟೋ ವರ್ಷಗಳಾಗಿವೆ. ಬಡಾವಣೆಯಲ್ಲಿ ಮಲಿನ ನೀರು ಮುಂದೆ ಹೋಗದೇ ಅಲ್ಲಿಯೇ ನಿಲ್ಲುವುದರಿಂದ ಇಡೀ ಪ್ರದೇಶದಲ್ಲಿ ದುರ್ನಾತ ಹರಡಿದೆ. ಮೊದಲೇ ಎಲ್ಲೆಡೆ ಡೆಂಗಿ ಸೇರಿದಂತೆ ಇತರ ಕಾಯಿಲೆಗಳು ಹೆಚ್ಚಾಗಿ ಹರಡುತ್ತಿರುವುದರಿಂದ ಸ್ಥಳೀಯರಲ್ಲಿ ರೋಗ ಭೀತಿ ಆವರಿಸಿದೆ. ಹೆಚ್ಚಿನ ಮನೆಯವರು ಇಂಗು ಬಚ್ಚಲು ಮಾಡಿಕೊಂಡಿದ್ದಾರೆ. ಇನ್ನು ಕೆಲ ಮನೆಗಳ ಶೌಚಗೃಹದ ನೀರು ಮಡುಗಟ್ಟಿ ನಿಂತಿದೆ. ಇದರಿಂದ ಅಶುಚಿತ್ವ ತಾಂಡವವಾಡುತ್ತಿದೆ.
‘ರಸ್ತೆ ಬದಿಯಲ್ಲಿ ಸರಾಗವಾಗಿ ನೀರು ಹರಿಯುವಂತೆ ಚರಂಡಿ ನಿರ್ಮಿಸಬೇಕು. ಈ ಕುರಿತು ಅಧಿಕಾರಿಗಳಿಗೆ ಹೇಳಿ ಹೇಳಿ ಸಾಕಾಗಿದೆ. ಯಾವುದಕ್ಕೂ ಕ್ಯಾರೇ ಎನ್ನುತ್ತಿಲ್ಲ. ಚರಂಡಿಯಲ್ಲಿ ಹೂಳು ತುಂಬಿದೆ. ತ್ಯಾಜ್ಯ ನೀರು ಮಡುಗಟ್ಟಿ ನಿಂತಿದೆ. ಇದರಿಂದ ಸ್ವಚ್ಛತೆ ಇಲ್ಲವಾಗಿದೆ. ಕೆಲಸ ಮುಗಿಸಿ ಸಂಜೆ ಮನೆಗೆ ಬಂದರೆ ಸಾಕು ಸೊಳ್ಳೆಗಳ ಕಾಟದಿಂದ ಬೇಸತ್ತು ಹೋಗಿದ್ದೇವೆ. ರೋಗ ಭೀತಿಯಲ್ಲಿ ದಿನದೂಡುತ್ತಿದ್ದೇವೆ’ ಎಂದು ನಿವಾಸಿಗಳು ಅಲವತ್ತುಕೊಳ್ಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.