ಕೆರೂರ: ಪಿಕೆಪಿಎಸ್ ಸೊಸೈಟಿಗಳಲ್ಲಿ ಠೇವಣಿದಾರರ ರೈತರು ವಿಮುಖರಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಹೇಳಿದರು.
ಗುರುವಾರ ಹುಲ್ಲಿಕೇರಿ ಇನಾಂ ಗ್ರಾಮದ ನೂತನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
‘ಆರ್ಥಿಕವಾಗಿ ಸದೃಢರಾಗಿರುವ ಕೆಲವು ರೈತರು ಶೂನ್ಯ ಬಡ್ಡಿ ದರದಡಿ ಸಾಲ ಪಡೆದು ತಮಗೆ ಅನುಕೂಲಕರವಾಗಿರುವ ಸ್ಥಳೀಯ ಸೊಸೈಟಿಗಳಲ್ಲಿ ದ್ವಿಗುಣಕ್ಕಾಗಿ ಠೇವಣಿ ಇಡುತ್ತಿರುವ ಕಾರಣ ಪಿಕೆಪಿಎಸ್ ಸಂಘಗಳ ಭವಿಷ್ಯದ ಆರ್ಥಿಕ ಸ್ಥಿತಿ-ಗತಿಗಳ ಮೇಲೆ ಅಗಾಧ ಪರಿಣಾಮ ಬೀರಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
ಜಿಲ್ಲೆಯ 272 ಸೊಸೈಟಿಗಳಲ್ಲಿ 2.5 ಲಕ್ಷ ರೈತರಿಗೆ ₹1,350 ಕೋಟಿ ಬೆಳೆ ಸಾಲ, ₹4 ಕೋಟಿ ಶೂನ್ಯ ಬಡ್ಡಿದರದ ಸಾಲ, ₹250 ಕೋಟಿ ಮಧ್ಯಮ ಸಾಲ ನೀಡಲಾಗಿದೆ. ರೈತರ ಒಳಿತಿನ ಯೋಜನೆಗಳನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ಬದ್ಧವಾಗಿದೆ’ ಎಂದು ಸರನಾಯಕ ಹೇಳಿದರು.
ಶಾಸಕ ಜೆ.ಟಿ. ಪಾಟೀಲ ಮಾತನಾಡಿ, ‘ಆರ್ಥಿಕ ಅಭಿವೃದ್ಧಿಗೆ ರೈತರು, ಗ್ರಾಹಕರು ಪ್ರಮಾಣಿಕ ಪ್ರಯತ್ನ ಮುಖ್ಯ. ಸಕಾಲಕ್ಕೆ ಸಾಲ ಮರು ಪಾವತಿಯು ಸ್ಥಳೀಯ ಸಂಸ್ಥೆ ಏಳ್ಗೆಗೆ ಭದ್ರ ಬುನಾದಿ. ಗ್ರಾಮ ಪಂಚಾಯ್ತಿ, ಪಿಕೆಪಿಎಸ್ ಗ್ರಾಮದ ಎರಡು ಕಣ್ಣುಗಳಿದ್ದಂತೆ. ಗ್ರಾಮಗಳ ಅಭಿವೃದ್ಧಿಗೆ ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.
ಗುಳೇದಗುಡ್ಡ ಒಪ್ಪತ್ತೇಶ್ವರ ಸ್ವಾಮೀಜಿ, ಕೈಲಾಸಪತಿ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ನಿರಂಜನ ಸ್ವಾಮೀಜಿ ಸಾನ್ನಿಧ್ಯ ವಹಸಿದ್ದರು. ಪಿಕೆಪಿಎಸ್ ಅಧ್ಯಕ್ಷ ಎಂ.ಜಿ ಕಿತ್ತಲಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಮಾರಗೌಡ ಜನಾಲಿ, ಸಿಡಿೊ ಆರ್.ಬಿ ಬೂದಿ, ಡಾ.ಬಿ.ಕೆ. ಕೊವಳ್ಳಿ ಗ್ರಾ.ಪಂ. ಅಧ್ಯಕ್ಷೆ ಶ್ರೀದೇವಿ ಲಮಾಣಿ, ಯಮುನಾ ಯಂಕಂಚಿ, ಗೌಡಪ್ಪ ಹಿರೇಹಾಳ, ರಾಮಪ್ಪ ಯರಗೊಪ್ಪ,ಬಬಸಪ್ಪ ಕೆಂಪಾರ, ಶಿವಪ್ಪ ಕಿತ್ತಲಿ,ಶಂಕ್ರಪ್ಪ ಲಮಾಣಿ, ಯಮನಪ್ಪ ತಳವಾರ, ಮಲ್ಲು ಕಂಟೇಪ್ಪನವರ,ಡೊಂಗ್ರಸಾಬ ಕೊಣ್ಣೂರ,ರೇಣವ್ವ ಹಡಪದ, ಎಇಇ ಎಂ.ಜಿ.ಕಿತ್ತಲಿ ಮತ್ತಿತರರು ಹಾಜರಿದ್ದರು.
ರವಿ ಲಮಾಣಿ ನಿರೂಪಿಸಿ, ವಂದಿಸಿದರು.
Quote - ಸ್ವಲಾಭದ ಲೆಕ್ಕಾಚಾರ ಬಿಟ್ಟು ರೈತ ಪರವಾದ ಸಂಘ ಸಂಸ್ಥೆಗಳ ಬೆಳವಣಿಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು ಅಜಯಕುಮಾರ ಸರನಾಯಕ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ
Cut-off box - ಬಾದಾಮಿ ತಾಲ್ಲೂಕಿನ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಸಾಕಷ್ಟು ಫಲವತ್ತಾದ ಜಮೀನುಗಳು ಇದ್ದು ಈಗಾಗಲೇ ನೀರಾವರಿ ಯೋಜನೆಗಳ ಕಾರ್ಯಗಳು ಭರದಿಂದ ಸಾಗಿವೆ. ಮುಂದಿನ ದಿನಗಳಲ್ಲಿ ತಮ್ಮ ಬಹುತೇಕ ಹೊಲಗಳಿಗೆ ಸಮರ್ಪಕ ನೀರು ಲಭ್ಯವಾಗಲಿದೆ ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು. ಹುಲ್ಲಿಕೇರಿ ಗ್ರಾಮದ ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಿಗೆ ಸುಮಾರು 3 ಕಿ.ಮೀ. ನಿತ್ಯ ನಡೆದುಕೊಂಡು ಹೋಗುವುದನ್ನು ತಪ್ಪಿಸಲು ಬೆಳಿಗ್ಗೆ ಸಂಜೆ ಬಸ್ ಸೌಲಭ್ಯಕ್ಕೆ ಅಧಿಕಾರಿಗಳಿ ಸ್ಥಳದಲ್ಲೇ ಶಾಸಕರು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.