ರಬಕವಿ ಬನಹಟ್ಟಿ: ಇಲ್ಲಿನ ಮಂಗಳವಾರ ಪೇಟೆಯ ಹತ್ತಾರು ಹೂವಿನ ವ್ಯಾಪಾರಿಗಳು ಬಿರು ಬೇಸಿಗೆಯ ಸಂದರ್ಭದಲ್ಲಿ ಹೂ, ಹೂಮಾಲೆಗಳ ರಕ್ಷಣೆಗಾಗಿ ಅಂಗಡಿಗಳ ಮೇಲ್ಭಾಗದಲ್ಲಿ ಗ್ರೀನ್ ಬಟ್ಟೆ ಮತ್ತು ಪ್ಲಾಸ್ಟಿಕ್ ತಾಡಪತ್ರಿ ಹಾಕಿದ್ದಾರೆ.
ಬೇಸಿಗೆ ಆರಂಭವಾಗುತ್ತಿದ್ದಂತೆ ಹೂ ವ್ಯಾಪಾರಸ್ಥರು ಕೇವಲ ಗ್ರೀನ್ ಬಟ್ಟೆಯನ್ನು ಮಾತ್ರ ಕಟ್ಟಿದ್ದರು. ಆದರೆ, ಈಚೇಗೆ ಬಿಸಿಲು ಹೆಚ್ಚಾಗುತ್ತಿದ್ದಂತೆ ಮತ್ತೆ ಗ್ರೀನ್ ಬಟ್ಟೆಯ ಕೆಳಗಡೆ ಪ್ಲಾಸ್ಟಿಕ್ ತಾಡಪತ್ರಿಗಳನ್ನು ಹಾಕಿದ್ದಾರೆ.
ಈಚೇಗೆ ಈ ಭಾಗದಲ್ಲಿ ಬಿಸಿಲಿನ ಪ್ರಮಾಣ ಸಾಕಷ್ಟು ಪ್ರಮಾಣದಲ್ಲಿ ಏರಿಕೆ ಕಂಡಿದೆ. ಮಧ್ಯಾಹ್ನ 12ರಿಂದ ಸಂಜೆ 4ರ ವರೆಗೆ ಹೊರಗಡೆ ಹೋಗಲಾರದ ಪರಿಸ್ಥಿತಿ ನಿರ್ಮಾಣಗೊಂಡಿದೆ. ನಿತ್ಯ 39 ಸೆ. ಬಿಸಿಲಿನ ಪ್ರಮಾಣವಿರುವುದರಿಂದ ಹೂ ಮತ್ತು ಹೂಮಾಲೆಗಳನ್ನು ರಕ್ಷಿಸುವುದು ಕಠಿಣವಾಗಿರುವುದರಿಂದ ಗ್ರೀನ್ ಮತ್ತು ಪ್ಲಾಸ್ಟಿಕ್ ತಾಡಪತ್ರಿಗಳನ್ನು ಕಟ್ಟಲಾಗಿದೆ.
ಮದುವೆ, ಸೀಮಂತ, ಮನೆಗಳ ವಾಸ್ತು ಶಾಂತಿಯಂತಹ ಸಮಾರಂಭಗಳು ಇರುವುದರಿಂದ ಹೂವಿನ ಬೇಡಿಕೆ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಾಗಿದೆ. ದೂರದ ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿಯಿಂದ ಹೂ ಮತ್ತು ಹೂ ಮಾಲೆಗಳನ್ನು ತರಿಸುತ್ತೇವೆ. ಬಿಸಿಲಿನಿಂದ ಇವುಗಳನ್ನು ರಕ್ಷಿಸುವುದು ಸವಾಲಾಗಿದೆ. ಆದ್ದರಿಂದ ಗ್ರೀನ್ ಮತ್ತು ಪ್ಲಾಸ್ಟಿಕ್ ತಾಡಪತ್ರಿಗಳನ್ನು ಕಟ್ಟಿ ಹೂ ರಕ್ಷಣೆ ಮಾಡಲಾಗುತ್ತಿದೆ. ಅದೇ ರೀತಿಯಾಗಿ ಇಲ್ಲಿ ಬೆಳಗ್ಗೆ ಮತ್ತು ಸಂಜೆಯಾಗುತ್ತಿದ್ದಂತೆ ತಂಪು ವಾತಾವರಣ ನಿರ್ಮಿಸಲು ರಸ್ತೆಗೆ ನೀರನ್ನು ಕೂಡಾ ಹಾಕಲಾಗುತ್ತಿದೆ ಎನ್ನುತ್ತಾರೆ ಹೂ ಮಾರಾಟಗಾರ ಮಾಹಾಂತೇಶ ಹೂಗಾರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.