ADVERTISEMENT

ನಕಲಿ ವೈದ್ಯರ ಪಟ್ಟಿ ಸಿದ್ಧಪಡಿಸಿದ ಪೊಲೀಸ್ ಇಲಾಖೆ; SSLC ಪಾಸಾದವರೂ ವೈದ್ಯರು!

ಬಸವರಾಜ ಹವಾಲ್ದಾರ
Published 5 ಜುಲೈ 2024, 23:32 IST
Last Updated 5 ಜುಲೈ 2024, 23:32 IST
   

ಬಾಗಲಕೋಟೆ: ಎಸ್‌ಎಸ್‌ಎಲ್‌ಸಿ, ಪಿಯುಸಿ, ಬಿಎ, ಬಿಕಾಂ, ಟಿಸಿಎಚ್‌, ಐಟಿಐ ಸೇರಿ ವಿವಿಧ ಕೋರ್ಸ್‌ ಓದಿದ 300ಕ್ಕೂ ಹೆಚ್ಚು ಜನರು ಬಾಗಲಕೋಟೆ ಜಿಲ್ಲೆಯ ವಿವಿಧೆಡೆ ಕ್ಲಿನಿಕ್‌ ತೆರೆದು, ಸಾರ್ವಜನಿಕರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. 

ಜಿಲ್ಲೆಯಲ್ಲಿ ಭ್ರೂಣಹತ್ಯೆ, ಗರ್ಭಿಣಿ ಮತ್ತು ಬಾಣಂತಿ ಸಾವುಗಳ ಪ್ರಕರಣಗಳ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಆಯಾ ಠಾಣೆ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿ, ಮಾಹಿತಿ ಸಂಗ್ರಹಿಸಿದಾಗ ನಕಲಿ ವೈದ್ಯರ ಕೃತ್ಯ ಗೊತ್ತಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಅಲ್ಲದೇ ಜಿಲ್ಲಾ ಕೇಂದ್ರ, ನಗರ, ಪಟ್ಟಣಗಳಲ್ಲಿ ನಕಲಿ ವೈದ್ಯರಿದ್ದಾರೆ. ಅವರ ಹೆಸರು, ಕ್ಲಿನಿಕ್‌ ಹೆಸರು ಮತ್ತು ವಿಳಾಸ, ದೂರವಾಣಿ ಸಂಖ್ಯೆ ಸೇರಿದಂತೆ ಪ್ರತಿಯೊಂದು ಮಾಹಿತಿ ಒಳಗೊಂಡ ವಿವರವಾದ ವರದಿಯನ್ನು  ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗೆ ಸಲ್ಲಿಸಿದ್ದಾರೆ.

ADVERTISEMENT

ಜಿಲ್ಲೆಯ ಸಾವಳಗಿ ಠಾಣಾ ವ್ಯಾಪ್ತಿಯಲ್ಲಿ 60 ಮಂದಿ ವೈದ್ಯಕೀಯ ಪದವಿ ಇಲ್ಲದೇ ಚಿಕಿತ್ಸೆ ನೀಡುತ್ತಿದ್ದಾರೆ. ಬೀಳಗಿ ಠಾಣಾ ವ್ಯಾಪ್ತಿಯಲ್ಲಿ 39, ಮುಧೋಳ ಠಾಣಾ ವ್ಯಾಪ್ತಿಯಲ್ಲಿ 37, ಕಲಾದಗಿ ಠಾಣಾ ವ್ಯಾಪ್ತಿಯಲ್ಲಿ 29 ಮಂದಿ ಅಂಥವರು ಇದ್ದಾರೆ.

50ಕ್ಕೂ ಹೆಚ್ಚು ಬಿಎಎಂಎಸ್‌ ಪದವೀಧರರು ಆಯುರ್ವೇದ ಪದ್ಧತಿ ಬದಲು ಅಲೋಪಥಿ ಚಿಕಿತ್ಸೆ ನೀಡುತ್ತಿದ್ದಾರೆ. ಅವರನ್ನು ಹೊರತುಪಡಿಸಿದರೆ ನರ್ಸಿಂಗ್‌ ಮಾಡಿದವರೂ ಸೇರಿ ಅರ್ಹರು ಅಲ್ಲದವರು ಹತ್ತಾರು ವರ್ಷಗಳಿಂದ ಚಿಕಿತ್ಸೆ ನೀಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.