ADVERTISEMENT

ಜಮಖಂಡಿ | ಹದಗೆಟ್ಟ ರಸ್ತೆ: ಸಂಚಾರ ಸವಾಲು

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಸಾರ್ವಜನಿಕರು

ಆರ್.ಎಸ್.ಹೊನಗೌಡ
Published 24 ಅಕ್ಟೋಬರ್ 2024, 6:38 IST
Last Updated 24 ಅಕ್ಟೋಬರ್ 2024, 6:38 IST
ಜಮಖಂಡಿ ನಗರದ ದೇಸಾಯಿ ವೃತ್ತದಿಂದ ಛಟ್ಟುಸಿಂಗ ಉದ್ಯಾನದ ವಿಜಯಪುರ ರಸ್ತೆಯಲ್ಲಿ ಗುಂಡಿ ಬಿದ್ದಿದೆ
ಜಮಖಂಡಿ ನಗರದ ದೇಸಾಯಿ ವೃತ್ತದಿಂದ ಛಟ್ಟುಸಿಂಗ ಉದ್ಯಾನದ ವಿಜಯಪುರ ರಸ್ತೆಯಲ್ಲಿ ಗುಂಡಿ ಬಿದ್ದಿದೆ   

ಜಮಖಂಡಿ: ನಗರದ ಹಲವು ರಸ್ತೆಗಳಲ್ಲಿ ಗುಂಡಿ ಬಿದ್ದಿರುವುದು ಹಾಗೂ ಚರಂಡಿ ತುಂಬಿ ರಸ್ತೆಗಳ ಮೇಲೆ ನೀರು ನಿಲ್ಲುವುದು, ಅವೈಜ್ಞಾನಿಕ ಚರಂಡಿಗಳು, ಒಳಚರಂಡಿ (ಮ್ಯಾನ್‌ಹೋಲ್‌) ಮುಚ್ಚಳ ಕಿತ್ತುಹೋಗಿ ಹಲವು ತಿಂಗಳು ಕಳೆದರೂ ದುರಸ್ತಿ ಮಾಡದಿರುವುದು– ಹೀಗೆ ಹಲವು ಅವ್ಯವಸ್ಥೆಗಳು ಬೈಕ್‌, ಟಂಟಂ, ಕಾರು, ಆಟೊದಂತಹ ಸಣ್ಣ ವಾಹನಗಳಿಗೆ ಮತ್ತು ಪಾದಚಾರಿಗಳಿಗೆ ಯಮಪಾಶದಂತಾಗಿವೆ.

ದೇಸಾಯಿ ವೃತ್ತದಿಂದ ಮಾರಾಮೇಶ್ವರ ದೇವಸ್ಥಾನವರೆಗೆ, ಕಾಲೇಜು ರಸ್ತೆ, ದೇಸಾಯಿ ವೃತ್ತದಿಂದ ಅರಣ್ಯ ಇಲಾಖೆವರೆಗೆ, ಬಸ್ ನಿಲ್ದಾಣದಿಂದ ವಿಜಯಪುರ ರಸ್ತೆ, ಮೈಗೂರ ರಸ್ತೆಯಿಂದ ವಿಜಯಪುರ ರಸ್ತೆಯವರೆಗೆ ಬೈಪಾಸ್ ರಸ್ತೆ, ಎಸ್ಆರ್‌ಎ ಕ್ಲಬ್‌ನಿಂದ ಸಿಕ್ಕಲಕಾರ ಕಾಲೊನಿ ವರೆಗೆ ಹಾಗೂ ನಗರದ ವಿವಿಧ ಓಣಿಗಳಲ್ಲಿನ ರಸ್ತೆಗಳಲ್ಲಿ ಅನೇಕ ಕಡೆ ಗುಂಡಿಗಳು ಬಾಯ್ದೆರೆದಿವೆ.

ವಾಹನ ದಟ್ಟಣೆ ಹಾಗೂ ಜನದಟ್ಟಣೆ ಉಂಟಾದಾಗ ಗುಂಡಿಗಳು ಗೋಚರಿಸದೆ ಬೈಕ್‌ ಸವಾರರು ಸಂಕಷ್ಟಕ್ಕೆ ಸಿಲುಕುವ ಘಟನೆಗಳು ನಿತ್ಯ ನಡೆಯುತ್ತಿವೆ. ಘಟನೆ ನಡೆದಾಗೊಮ್ಮೆ ಅಕ್ಕಪಕ್ಕದ ಮಳಿಗೆ ವ್ಯಾಪಾರಿಗಳು ನಗರಸಭೆ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತ ಸಹಾಯಕ್ಕೆ ಧಾವಿಸುತ್ತಾರೆ. ರಸ್ತೆ ಗುಂಡಿಯನ್ನು ಸವಾರರು ದೂರದಿಂದ ಗಮನಿಸಲು ಮರದ ಟೊಂಗೆ, ಸುತ್ತಲೂ ಕಲ್ಲುಗಳನ್ನು ಇಡುವುದು ಮಾಡಲಾಗುತ್ತದೆ.

ADVERTISEMENT

ಎಸ್ಆರ್‌ಎ ಕ್ಲಬ್‌ನಿಂದ ಸಿಕ್ಕಲಕಾರ ಕಾಲೊನಿ ವರೆಗಿನ ಬೈಪಾಸ್ ರಸ್ತೆ ಅವೈಜ್ಞಾನಿಕವಾಗಿದ್ದು, ನೂತನ ವಿದ್ಯಾಲಯದ ಹತ್ತಿರ ಗುಡ್ಡದ ನೀರು ಬಂದು ಸಂಗ್ರಹವಾಗಿ ವಾಹನಗಳು ನೀರಿನಲ್ಲಿ ಸಿಕ್ಕಿಕೊಳ್ಳುತ್ತಿವೆ. ಪಕ್ಕದ ಮನೆಗಳಿಗೂ ನೀರು ನುಗ್ಗುತ್ತದೆ.

‘ರಸ್ತೆಯ ಪಕ್ಕದಲ್ಲಿ ಲಕ್ಕನ ಕೆರೆ ಇದೆ, ಗುಡ್ಡದಿಂದ ಬರುವ ನೀರನ್ನು ರಸ್ತೆಗೆ ಸೇತುವೆ ನಿರ್ಮಿಸಿ ರಸ್ತೆಯ ಕೆಳಗಿನಿಂದ ಕೆರೆಗೆ ನೀರು ಹೋಗುವಂತೆ ಮಾಡಬೇಕು. ರಸ್ತೆಯ ಎರಡು ಪಕ್ಕದಲ್ಲಿ ಚರಂಡಿಗಳಿದ್ದು, ಮಳೆಯಾದಾಗ ಆ ಚರಂಡಿಯಿಂದ ನೀರು ಕೆರೆಗೆ ಹೋಗುವಂತೆ ಮಾಡಬೇಕು’ ಎಂದು ಅಲ್ಲಿನ ಜನರ ಒತ್ತಾಯವಾಗಿದೆ.

ಬಸ್ ನಿಲ್ದಾಣದಿಂದ ವಿಜಯಪುರ ರಸ್ತೆ ಕಾಮಗಾರಿ ನಡೆದು ಎರಡು ವರ್ಷ ಕಳೆದರೂ ರಸ್ತೆ ಪೂರ್ಣವಾಗಿಲ್ಲ, ಅನುದಾನವಿದ್ದರೂ ಲೋಕೋಪಯೋಗಿ ಇಲಾಖೆಯ ನಿಷ್ಕಾಳಜಿಗೆ ಸವಾರರು ಹಾಗೂ ರಸ್ತೆಯ ಪಕ್ಕದಲ್ಲಿ ವಾಸವಾಗಿರುವ ಜನರು ಪ್ರತಿನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ.

‘ಕನಿಷ್ಠಪಕ್ಷ ಮುಖ್ಯರಸ್ತೆಗಳಲ್ಲಿ ನಿರ್ಮಾಣವಾದ ಹೊಂಡ, ಬಾಯ್ದೆರೆದ ಒಳಚರಂಡಿ ಸಮಸ್ಯೆಗೆ ತಕ್ಷಣ ಸ್ಪಂದಿಸುವ ಕೆಲಸವನ್ನು ನಗರಸಭೆ ಮಾಡಬೇಕು’ ಎನ್ನುವುದು ಜನರ ಒತ್ತಾಯ.

ಜಮಖಂಡಿ ನಗರದ ದೇಸಾಯಿ ವೃತ್ತದಿಂದ ಛಟ್ಟುಸಿಂಗ ಉದ್ಯಾನದ ವಿಜಯಪುರ ರಸ್ತೆಯಲ್ಲಿ ಗುಂಡಿ ಬಿದ್ದಿದೆ
ಜಮಖಂಡಿ ನಗರದ ಎಸ್ಆರ್‌ಎ ಕ್ಲಬ್‌ನಿಂದ ಸಿಕ್ಕಲಕಾರ ಕಾಲೊನಿ ಬೈಪಾಸ್ ರಸ್ತೆಯ ವಿದ್ಯಾಲಯದ ಹತ್ತಿರ ನಿಂತ ನೀರಿನಲ್ಲೇ ವಾಹನಗಳು ಸಂಚರಿಸಿದವು
ಮಳೆ ಇರುವುದರಿಂದ ಕಾಮಗಾರಿಗಳು ನಿಂತಿವೆ. ಸೂಕ್ತ ಮಾರ್ಗದರ್ಶನದ ಕೊರತೆಯಿಂದ ಸಮಸ್ಯೆಗಳು ಉದ್ಭವಿಸುತ್ತಿವೆ. ಅವುಗಳನ್ನು ಸರಿಪಡಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ
ಎಸ್.ಆರ್.ಬಂಡಿವಡ್ಡರ ಪಿಡಬ್ಲುಡಿ ಎಂಜಿನಿಯರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.